ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಯವ ವಿಧಾನದಲ್ಲಿ ಲಾಭ ಕಂಡ ರೈತ

ಕರೂರಿನ ರೈತ ದೇವರಾಜ್‌ ಯಶೋಗಾಥೆ
Last Updated 7 ಡಿಸೆಂಬರ್ 2022, 5:40 IST
ಅಕ್ಷರ ಗಾತ್ರ

ತುಮರಿ: ಕೃಷಿಯಲ್ಲಿ ಹೆಚ್ಚು ಇಳುವರಿ ಪಡೆಯುವ ಆಸೆಯಿಂದ ರಾಸಾಯನಿಕ ಗೊಬ್ಬರ, ಕೀಟನಾಶಕ ಬಳಸಿ ಕೈ ಸುಟ್ಟುಕೊಂಡವರೇ ಹೆಚ್ಚು. ಇದರ ನಡುವೆಯೇ ಕರೂರಿನ ರೈತ ದೇವರಾಜ್ ಅವರು ಸಾವಯವ ಪದ್ಧತಿಯಲ್ಲಿ ಭೂಮಿಯನ್ನು ಹದಗೊಳಿಸಿ, ಹೊಲದಲ್ಲಿ ಸಿಗುವ ಕಸವನ್ನೇ ಗೊಬ್ಬರವನ್ನಾಗಿ ಮಾಡಿಕೊಂಡು ಸಮಗ್ರ ಕೃಷಿ ಮೂಲಕ ಯಶಸ್ಸು ಸಾಧಿಸಿದ್ದಾರೆ.

ಶರಾವತಿ ಹಿನ್ನೀರು ಪ್ರದೇಶವಾದ ಕರೂರು ಹೋಬಳಿಯಲ್ಲಿ ತೋಟಗಾರಿಕಾ ಬೆಳೆ ಬೆಳೆಯಲು ಉತ್ತಮ ಹವಾಗುಣ ಇದೆ ಎಂಬುದನ್ನು ಮನಗಂಡ ದೇವರಾಜ ಅವರು ವರ್ಷಗಳ ಹಿಂದೆ ತಮ್ಮ 3 ಎಕರೆ ಭೂಮಿಯಲ್ಲಿ ಅಡಿಕೆ, ಕಾಳು ಮೆಣಸು, ತೆಂಗು, ಗೇರು ನಾಟಿ ಮಾಡಿದ್ದರು. ಇದರ ಜತೆಗೆ ಮಿಶ್ರಬೆಳೆಯಾಗಿ ಏಲಕ್ಕಿ ಹಾಗೂ ವೀಳ್ಯದೆಲೆ ಕೂಡ ನಾಟಿ ಮಾಡಿದ್ದರು.

ಅಡಿಕೆ ಬೆಳೆಯನ್ನು ಎರಡು ಹಂತದಲ್ಲಿ ನಾಟಿ ಮಾಡಿದ್ದು, ಮೂದಲ ಹಂತದಲ್ಲಿ ಮಾಡಿದ 1 ಎಕರೆ ಅಡಿಕೆ ಈಗ ಫಸಲಿಗೆ ಬಂದಿದೆ. ಇದರಿಂದ ವಾರ್ಷಿಕ ₹ 3 ಲಕ್ಷ ಆದಾಯ ಗಳಿಸುತ್ತಿದ್ದಾರೆ. ಮತ್ತೊಂದು ಎಕರೆಯಲ್ಲಿ ಫಸಲು ಸದ್ಯದಲ್ಲೇ ಕೈಗೆ ಸಿಗಲಿದೆ. ಕಾಳುಮೆಣಸು ಈಗಾಗಲೇ ಫಸಲಿಗೆ ಬಂದಿದೆ. 50 ಕೆ.ಜಿ. ಬೆಳೆಯನ್ನು ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ.ಗೆ ₹ 550ರಂತೆ ಮಾರಾಟ ಮಾಡಿದ್ದಾರೆ. ಆದರೆ, ಅಕಾಲಿಕ ಮಳೆ ಮತ್ತು ಹವಾಮಾನ ವೈಪರಿತ್ಯದಿಂದಾಗಿ ನಿರೀಕ್ಷಿಸಿದಷ್ಟು ಲಾಭ ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ಉತ್ತಮ ಲಾಭ ಸಿಗುವ ಭರವಸೆ ಇದೆ ಎನ್ನುತ್ತಾರೆ ದೇವರಾಜ್‌ ಅವರ ಪುತ್ರ ಅರುಣ್.

‘ಅಡಿಕೆ ಜೊತೆ ಅಂತರ ಬೆಳೆಯಾಗಿ ನಿಂಬೆ, ವೀಳ್ಯದೆಲೆ ಬೆಳೆದಿದ್ದು, ರೈತರಿಗೆ ಕೈಗೆಟಕುವ ದರದಲ್ಲಿ ಶುಭ ಕಾರ್ಯಗಳಿಗೆ ವೀಳ್ಯದೆಲೆ ಮಾರಾಟ ಮಾಡುತ್ತಿದ್ದೇವೆ. ತೆಂಗು, ಏಲಕ್ಕಿ, ಗೇರು ಕೃಷಿಯಿಂದಲೂ ಉತ್ತಮ ಆದಾಯ ಸಿಗುತ್ತಿದೆ. ಗೇರು ಕೃಷಿಗೆ ಹೆಚ್ಚು ಗೊಬ್ಬರ ಬೇಕಿಲ್ಲ’ ಎಂದು ಅರುಣ್‌ ಮಾಹಿತಿ ನೀಡಿದರು.

ಪರಿಸರಸ್ನೇಹಿ ಮರಗಳು: ಜಮೀನಿನ ಸುತ್ತ ಬದುಗಳಲ್ಲಿ ಹಲಸು ಹಾಗೂ ಸಾಗುವಾನಿ ಬೆಳೆಸಲಾಗಿದೆ. ಕಲುಷಿತ ಗಾಳಿಯನ್ನು ತಿಳಿಗೊಳಿಸಿ ಉತ್ತಮ ವಾತಾವರಣ ನೀಡಲು ಸಹಕಾರಿಯಾಗುವ ಇನ್ನೂ ಹಲವು ಜಾತಿಯ ದೇಸಿ ಸಸಿಗಳನ್ನು ಬೆಳೆಸಿ ಪರಿಸರ ಸಮತೋಲನ ಕಾಯ್ದುಕೊಳ್ಳುವ ಆಶಯ ಇದೆ ಎನ್ನುತ್ತಾರೆ ಅರುಣ್‌.

ಸಾವಯವ ಗೊಬ್ಬರ: ದೇವರಾಜ್‌ ಅವರು ಎಲ್ಲ ಬೆಳೆಗಳಿಗೂ ಸಾವಯವ ಗೊಬ್ಬರವನ್ನೇ ಬಳಸಿದ್ದಾರೆ. ಕಳೆಗಿಡಗಳನ್ನು ಸಹ ಹಸಿರೆಲೆ ಗೊಬ್ಬರವಾಗಿ ಪರಿವರ್ತಿಸಿ ಬಳಸುತ್ತಿದ್ದಾರೆ. ಲಂಟನಾ ವಿವಿಧ ಕಾಡು ಜಾತಿಯ ಎಲೆಗಳನ್ನು ಮಣ್ಣಿನೊಂದಿಗೆ ಸೇರಿಸಿ ಹಸುವಿನ ಗೊಬ್ಬರ, ಹಸಿರು ಎಲೆ ಮಿಶ್ರಣ ಮಾಡಿ, ಹಸುವಿನ ಗಂಜಲದೊಂದಿಗೆ ನೇರವಾಗಿ ತೋಟಕ್ಕೆ ತಲುಪುವ ವ್ಯವಸ್ಥೆ ಮಾಡಿದ್ದಾರೆ. ಅಲ್ಲಿ ಚಿಕ್ಕ ಚಿಕ್ಕ ಸಿಮೆಂಟ್ ಟ್ಯಾಂಕ್‌ಗಳಲ್ಲಿ ಸಂಗ್ರಹಿಸಿ, ಅದನ್ನು ಹಂತ ಹಂತವಾಗಿ ಅಡಿಕೆ ಮರಗಳಿಗೆ ನೀಡುತ್ತಿದ್ದಾರೆ.

‘ಪ್ರತಿದಿನ ಮಧ್ಯಾಹ್ನದವರೆಗೂ ಕೃಷಿ ಭೂಮಿಯಲ್ಲೇ ಕೆಲಸ ಮಾಡುತ್ತೇವೆ. ಕೃಷಿಯಿಂದ ಯಾವುದೇ ನಷ್ಟವಿಲ್ಲ’ ಎಂಬುದು ಅರುಣ್‌ ಅವರ ಅನುಭವದ ಮಾತು.

ಕೋಟ್‌...

ಮಣ್ಣಿನ ಫಲವತ್ತತೆ ಹೋದರೆ ರೈತರ ಕಣ್ಣು ಹೋದಂತೆ. ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಲು ಸಾವಯವ ಕೃಷಿ ಉತ್ತಮ ವಿಧಾನವಾಗಿದೆ. ಉತ್ತಮ ಇಳುವರಿ ಪಡೆಯಬಹುದು.
ದೇವರಾಜ್‌, ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT