ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕಾರಿಪುರ: ಪ್ರಥಮ ಸ್ವತಂತ್ರ ಗ್ರಾಮ ಈಸೂರು

ಇತಿಹಾಸದ ಪುಟಗಳಲ್ಲಿ ದಾಖಲಾಗಿರುವ ಈಸೂರು ಸ್ವಾತಂತ್ರ್ಯ ಹೋರಾಟ
Last Updated 14 ಆಗಸ್ಟ್ 2022, 3:53 IST
ಅಕ್ಷರ ಗಾತ್ರ

ಶಿಕಾರಿಪುರ:ದೇಶದಲ್ಲಿ ಪ್ರಥಮ ಸ್ವತಂತ್ರ ಗ್ರಾಮ ಎಂದು ಘೋಷಣೆ ಮಾಡಿಕೊಳ್ಳುವ ಮೂಲಕ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಸದಾ ನೆನಪಿನಲ್ಲಿ ಉಳಿದ ಗ್ರಾಮ ಈಸೂರು.

ಸ್ವಾತಂತ್ರ್ಯೋತ್ಸವದ ಆಗಸ್ಟ್‌ ತಿಂಗಳಲ್ಲಿ ತಕ್ಷಣ ನೆನಪಾಗುವ ಹೆಸರು ತಾಲ್ಲೂಕಿನ ಈಸೂರು. ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ದೇಶದಲ್ಲಿ ಹಚ್ಚುವ ಕಾರ್ಯ ಮಾಡಿದದವರು ಈ ಊರಿನ ಸ್ವಾತಂತ್ರ್ಯ ಹೋರಾಟಗಾರರು.

ಮಹಾತ್ಮ ಗಾಂಧೀಜಿ 1942ರಲ್ಲಿ ಬ್ರಿಟಿಷರ ವಿರುದ್ಧ ಕರೆ ನೀಡಿದ್ದ ‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ ಸ್ಪಂದಿಸಿದ ಈಸೂರು ಗ್ರಾಮಸ್ಥರು ಗಂಡು, ಹೆಣ್ಣು ಭೇದವಿಲ್ಲದೇ ಹೋರಾಟದಲ್ಲಿ ಧುಮುಕಿದರು. ಕಂದಾಯ ನೀಡಲು ನಿರಾಕರಿಸಿದ್ದ ಗ್ರಾಮಸ್ಥರು ಬ್ರಿಟಿಷ್‌ ಅಧಿಕಾರಿಗಳ ವಿರುದ್ಧ ನಡೆಸಿದ ಈ ಹೋರಾಟ ತೀವ್ರ ಸ್ವರೂಪ ಪಡೆದಿತ್ತು.

‘ಏಸೂರ ಕೊಟ್ಟರೂ ಈಸೂರು ಬಿಡೆವು’ ಎಂದು ಹೇಳುತ್ತಾ ಯಾರ ನಾಯಕತ್ವವಿಲ್ಲದೇ ಸ್ವಯಂ ಪ್ರೇರಿತರಾಗಿ ಬ್ರಿಟಿಷರ ವಿರುದ್ಧ ಹೋರಾಡಿದರು.

1942ರ ಸೆಪ್ಟೆಂಬರ್‌ 26ರಂದು ಗ್ರಾಮದ ವೀರಭದ್ರೇಶ್ವರ ದೇವಸ್ಥಾನದ ಮೇಲೆ ಪ್ರತ್ಯೇಕ ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ಸ್ವತಂತ್ರ ಗ್ರಾಮ ಎಂದು ಘೋಷಣೆ ಮಾಡಿಕೊಂಡರು. ಗ್ರಾಮದ 12 ವರ್ಷದ ಮಲ್ಲಪ್ಪ ಅವರನ್ನು ಸರ್ವಾಧಿಕಾರಿಯಾಗಿ ಹಾಗೂ 10 ವರ್ಷದ ಜಯಪ್ಪ ಅವರನ್ನು ಅಮಲ್ದಾರರನ್ನಾಗಿ ಆಯ್ಕೆ ಮಾಡಿ ಆಡಳಿತ ನಡೆಸಿದರು. ಗ್ರಾಮಕ್ಕೆ ಬಂದ ಅಧಿಕಾರಿಗಳಿಗೆ ಖಾದಿ ಟೋಪಿ ಧರಿಸುವಂತೆ ಆಜ್ಞೆ ಮಾಡುತ್ತಾರೆ. ಇದರಿಂದ ಕೋಪಗೊಂಡ ಪೋಲಿಸರು ಗ್ರಾಮಸ್ಥರ ಮೇಲೆ ಹಲ್ಲೆ ನಡೆಸುತ್ತಾರೆ.ರೊಚ್ಚಿಗೆದ್ದ ಗ್ರಾಮಸ್ಥರು ಸಬ್‌ ಇನ್‌ಸ್ಪೆಕ್ಟರ್‌ ಕೆಂಚನಗೌಡ, ಅಮಲ್ದಾರ್‌ ಚನ್ನಕೃಷ್ಣಪ್ಪ ಅವರನ್ನು ಕೊಲೆ ಮಾಡುತ್ತಾರೆ.

ಬ್ರಿಟಿಷ್‌ ಅಧಿಕಾರಿಗಳು ಈಸೂರಿನ ಮೇಲೆ ದಾಳಿ ನಡೆಸಿ ಲೂಟಿ ಮಾಡಿ, ಮಹಿಳೆಯರು, ಮಕ್ಕಳೇನ್ನದೇ ಎಲ್ಲರ ಮೇಲೆ ಹಲ್ಲೆ ನಡೆಸುತ್ತಾರೆ. ಹೋರಾಟಕ್ಕೆ ಬೆಂಬಲ ನೀಡಿದ ಸಾಹುಕಾರ್‌ ಬಸವಣ್ಯಪ್ಪ ಅವರ ಮನೆಯನ್ನು ಸುಟ್ಟು ಹಾಕುತ್ತಾರೆ. ಹಲವು ಹೋರಾಟಗಾರನ್ನು ಬಂಧಿಸಿ ಶಿಕ್ಷೆಗೊಳಪಡಿಸುತ್ತಾರೆ.

1943ರ ಮಾರ್ಚ್‌ನಲ್ಲಿ ಗುರಪ್ಪ, ಜೀನಳ್ಳಿ ಮಲ್ಲಪ್ಪ, ಸೂರ್ಯನಾರಾಯಣಾಚಾರ್‌, ಬಡಕಳ್ಳಿ ಹಾಲಪ್ಪ ಹಾಗೂ ಗೌಡ್ರು ಶಂಕರಪ್ಪ ಅವರನ್ನು ಗಲ್ಲಿಗೇರಿಸುತ್ತಾರೆ ಎಂಬುದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.

‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎಂದು ಮಹಾತ್ಮ ಗಾಂಧೀಜಿ ನೀಡಿದ ಕರೆಗೆ ಪ್ರೇರಣೆಗೊಂಡ ನಾವು ಹೋರಾಟ ಆರಂಭಿಸಿದೆವು. ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ತೆರಳಿ ಹೋರಾಟದ ಬಗ್ಗೆ ಜಾಗೃತಿ ಮೂಡಿಸಲಾಯಿತು. ಹೋರಾಟ ತೀವ್ರ ಸ್ವರೂಪ ಪಡೆಯಿತು’ ಎಂದು ಸ್ವಾತಂತ್ರ್ಯ ಹೋರಾಟಗಾರ ತಿಮ್ಲಾಪುರ ಗ್ರಾಮದ ದೇವೇಂದ್ರಪ್ಪನೆನಪಿಸಿಕೊಂಡರು.

ಗ್ರಾಮದ ಹೋರಾಟಗಾರರ ಸ್ಮಾರಕ ಹಲವು ಸಂಘ ಸಂಸ್ಥೆಗಳ ಜನಪರ ಹೋರಾಟಗಳ ಪ್ರೇರಣೆಯ ಕೇಂದ್ರವಾಗಿದೆ.

ಸ್ಮಾರಕಕ್ಕೆ ಅಭಿವೃದ್ಧಿ ಸ್ಪರ್ಶ:ಗ್ರಾಮದಲ್ಲಿ ನಿರ್ಮಿಸಿರುವ ಸ್ಮಾರಕ ಅಭಿವೃದ್ಧಿಗೆ ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ₹ 5 ಕೋಟಿ ಅನುದಾನ ನೀಡಿದ್ದರು. ಪ್ರಸ್ತುತ ಸ್ಮಾರಕ ಅಭಿವೃದ್ಧಿ ಕಾಮಗಾರಿ ಕಾರ್ಯ ನಡೆಯುತ್ತಿದ್ದು, ಈ ವರ್ಷದ ಅಂತ್ಯದಲ್ಲಿ ಕಾಮಗಾರಿ ಪೂರ್ಣಗೊಳಿಸಿ ಸ್ಮಾರಕ ಉದ್ಘಾಟನೆ ಮಾಡುವ ಉದ್ದೇಶ ಹೊಂದಲಾಗಿದೆ.

ಈಸೂರಿನ ಐದು ಜನ ಹುತಾತ್ಮರ ಸ್ಮಾರಕ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಗ್ರಾಮ ಪ್ರವಾಸೋದ್ಯಮ ಕ್ಷೇತ್ರವಾಗಿ ಪರಿವರ್ತನೆಯಾಗಲಿದ್ದು, ಯುವಪೀಳಿಗೆ ಸ್ವಾತಂತ್ರ್ಯ ಹೋರಾಟ ಮೆಲುಕು ಹಾಕುವಂತಾಗಬೇಕು.

-ಬಿ.ವೈ. ರಾಘವೇಂದ್ರ, ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT