ಮಂಗಳವಾರ, ಜನವರಿ 18, 2022
15 °C
ಪಿ ಆ್ಯಂಡ್‌ ಟಿ ಕಾಲೊನಿಯಲ್ಲಿ ಒಂದು ತಿಂಗಳಿನಿಂದ ಸದ್ದಿಲ್ಲದೆ ನಡೆದಿದೆ ಕಾರ್ಯ

ಶಿವಮೊಗ್ಗ: 25 ಚದರ ಅಡಿ ವಿಸ್ತೀರ್ಣದ ಮನೆಯನ್ನು 7 ಅಡಿ ಮೇಲೆತ್ತಿದ ಬಿಹಾರಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಇಲ್ಲಿನ ಪಿ ಆ್ಯಂಡ್‌ ಟಿ ಕಾಲೊನಿ ಮೊದಲ ತಿರುವಿನ 25 ಚದರ ಅಡಿ ವಿಸ್ತೀರ್ಣದ ಡೂಫ್ಲೆಕ್ಸ್ ಮನೆಯನ್ನು ನೆಲದಿಂದ ಸುಮಾರು ಏಳು ಅಡಿ ಮೇಲೆತ್ತುವ ಕಾರ್ಯ ನಡೆದಿದೆ.

ಉದ್ಯೋಗ ಮತ್ತು ವಿನಿಮಯ ಕಚೇರಿ ನಿವೃತ್ತ ಉಪ ನಿರ್ದೇಶಕ ಕೆ.ಜಿ. ಶ್ರೀನಿವಾಸ ಮೂರ್ತಿ ಅವರು ಸುಮಾರು 25 ವರ್ಷಗಳ ಹಿಂದೆ ನಿರ್ಮಿಸಿದ್ದ ಮನೆ ಈಗ ರಸ್ತೆ ಮಟ್ಟದಿಂದ 5 ಅಡಿ ಕೆಳಗಿತ್ತು. ಪ್ರತಿ ವರ್ಷ ಮಳೆಗಾಲದಲ್ಲೂ ಮನೆಗೆ ನೀರು ನುಗ್ಗುತ್ತಿತ್ತು. ಶ್ರೀನಿವಾಸ ಮೂರ್ತಿ ಅವರ ಪುತ್ರ, ಭದ್ರಾವತಿ ಕಾಲೇಜಿನ ಸಹ ಪ್ರಾಧ್ಯಾಪಕ ಕೆ.ಎಸ್. ಮಂಜುನಾಥ್ ಅವರು ತಂದೆ ಕಟ್ಟಿದ ಪ್ರೀತಿಯ ಮನೆಯನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಳ್ಳಬೇಕು ಎಂದು ಬಿಹಾರ ಮೂಲದ ಶ್ರೀರಾಮ್ ಸಂಸ್ಥೆಯನ್ನು ಸಂಪರ್ಕಿಸಿದ್ದರು. ಆ ಸಂಸ್ಥೆಯ ತಂತ್ರಜ್ಞರು ಒಂದು ತಿಂಗಳಿನಿಂದ ಮನೆಯನ್ನು ಹಂತ ಹಂತವಾಗಿ ಮೇಲೆತ್ತುತ್ತಿದ್ದಾರೆ.

ಮನೆ ಈಗಾಗಲೇ 6 ಅಡಿ ಮೇಲಕ್ಕೆ ಬಂದಿದೆ. ಒಂದು ಅಡಿ ಬಾಕಿ ಇದೆ. ಮನೆಯ ಯಾವುದೇ ಒಳಾಂಗಣ ವ್ಯವಸ್ಥೆಗಳಿಗೆ ಚಿಕ್ಕ ಲೋಪವೂ ಆಗದಂತೆ ಮನೆಯನ್ನು ಇರುವ ಜಾಗದಲ್ಲೇ ಮೇಲಕ್ಕೆ ಎತ್ತಿದ್ದಾರೆ.

ಆರಂಭದಲ್ಲಿ ಫೌಂಡೇಷನ್ ಇರುವ ಜಾಗವನ್ನು ಅತ್ಯಂತ ವ್ಯವಸ್ಥಿತವಾಗಿ ಬಿಡಿಸಿಕೊಂಡು ನಂತರ ಹೋಲ್‌ಗಳ ಸಹಾಯದಿಂದ ಭೂಮಿ, ಮನೆಯ ಆಳದ ಲಿಂಟಲ್ ಭಾಗವನ್ನು ಬೇರ್ಪಡಿಸಿದ್ದಾರೆ. ಅಲ್ಲಿಗೆ ಜಾಕ್ ಕೊಟ್ಟು ನಿಧಾನವಾಗಿ ನಿತ್ಯವೂ ಮನೆಯನ್ನು ತುಸುವೇ ಮೇಲೆತ್ತುವ ಕಾರ್ಯ ಮಾಡುತ್ತಾ ಗುರಿ ತಲುಪಿದ್ದಾರೆ. ಭೂಮಿಯ ತಳಭಾಗದ ಫೌಂಡೇಷನ್ ಹಾಗೂ ಪಿಲ್ಲರ್‌ಗಳನ್ನು ಮೇಲೆತ್ತುತ್ತಾ ಕೂಡಿಸಿಕೊಂಡಿದ್ದಾರೆ. ಶಿವಮೊಗ್ಗದಲ್ಲಿ ಮನೆಯನ್ನು ಮೇಲೆತ್ತುವ ಕಾರ್ಯ ನಡೆದಿರುವುದು ಇದೇ ಮೊದಲು.

‘ಮನೆ ಕೆಡವಲು ಮನಸ್ಸಿಲ್ಲದೆ ಇಂತಹ ನಿರ್ಧಾರ ಮಾಡಿದೆವು. ಸುಮಾರು ₹ 7 ಲಕ್ಷ ಖರ್ಚಾಗುತ್ತದೆ. ಬಿಹಾರದ 9 ತಂತ್ರಜ್ಞ ಕಾರ್ಮಿಕರು ಕಾರ್ಯದಲ್ಲಿ ತೊಡಗಿದ್ದಾರೆ. ಮೇಲೆತ್ತುತ್ತಿರುವ ಮನೆಯ ಮೇಲ್ಚಾವಣಿಯಲ್ಲೇ ಉಳಿದುಕೊಂಡಿದ್ದಾರೆ’ ಎಂದು ಪ್ರತಿಕ್ರಿಯಿಸಿದರು ಮನೆಯ ಮಾಲೀಕರಾದ್ ಶ್ರೀನಿವಾಸ್ ಮೂರ್ತಿ, ಮಂಜುನಾಥ್.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು