ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಗರ: ದಡಗಿ ಮೂಲಕ ಅನಾರೋಗ್ಯ ಮಹಿಳೆಯನ್ನು ಹೊತ್ತುತಂದ ಗ್ರಾಮಸ್ಥರು

ಸಾಮಾಜಿಕ ಜಾಲತಾಣದಲ್ಲಿ ಪ್ರತಿಧ್ವನಿಸಿದ ಸಮಸ್ಯೆ
Last Updated 21 ಜುಲೈ 2021, 6:53 IST
ಅಕ್ಷರ ಗಾತ್ರ

ಸಾಗರ: ತಾಲ್ಲೂಕು ಕೇಂದ್ರದಿಂದ ದೂರದ ಪ್ರದೇಶದಲ್ಲಿರುವ ಮಲೆನಾಡಿನ ಗ್ರಾಮಗಳು ಇಂದಿಗೂ ಹಲವು ರೀತಿಯ ಮೂಲಸೌಕರ್ಯಗಳ ಕೊರತೆಯಿಂದ ಬಳಲುತ್ತಿವೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

ತಾಲ್ಲೂಕಿನ ಭಾನ್ಕುಳಿ ಪಂಚಾಯಿತಿ ವ್ಯಾಪ್ತಿಯ ಕಾನೂರು ಗ್ರಾಮದ ಸಮೀಪ ತಗ್ತಿಯಲ್ಲಿ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಮಹಿಳೆಯೊಬ್ಬರನ್ನು ಗ್ರಾಮಸ್ಥರು ಸುರಿಯುವ ಮಳೆಯಲ್ಲೇ ದಡಗಿ ಮೂಲಕ ಹೊತ್ತುಕೊಂಡು ಈಚೆಗೆ ಮುಖ್ಯರಸ್ತೆಗೆ ಕರೆತಂದಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸಾಗರದಿಂದ ಸುಮಾರು 65 ಕಿ.ಮೀ. ದೂರದಲ್ಲಿರುವ ತಗ್ತಿ ಗ್ರಾಮದ ರತ್ನಮ್ಮ ಎಂಬ ಮಹಿಳೆಗೆ ವಿಪರೀತ ಹೊಟ್ಟೆ ನೋವು ಬಂದಿದೆ. ಈ ಗ್ರಾಮದಲ್ಲಿ ಮೊಬೈಲ್ ನೆಟ್‌ವರ್ಕ್ ಅಥವಾ ಸ್ಥಿರ ದೂರವಾಣಿ ಸೌಲಭ್ಯ ಇಲ್ಲ. ಧರೆಯ ಗುಡ್ಡ ಹತ್ತಿ 3 ಕಿ.ಮೀ. ದುರ್ಗಮ ದಾರಿ ಕ್ರಮಿಸಿ ಮುಖ್ಯ ರಸ್ತೆಗೆ ಬರಬೇಕು.

ಇಂತಹ ಸನ್ನಿವೇಶದಲ್ಲಿ ರತ್ನಮ್ಮ ಅವರನ್ನು ದಡಗಿ (ಕಾಡು ಜಾತಿಯ ಎರಡು ಕಟ್ಟಿಗೆ ತುಂಡಿಗೆ ಅಡ್ಡಲಾಗಿ ಮತ್ತೆರಡು ತುಂಡುಗಳನ್ನು ದಾರದಿಂದ ಕಟ್ಟಿ ನಿರ್ಮಿಸುವ ಹಳ್ಳಿಗರ ಸಾಧನ) ಮೂಲಕ ಸುರಿಯುವ ಮಳೆಯಲ್ಲಿ ಕಂಬಳಿ ಕೊಪ್ಪೆ ಧರಿಸಿ ಮುಖ್ಯರಸ್ತೆಗೆ ಕರೆತಂದಿದ್ದಾರೆ. ಅಲ್ಲಿಂದ ವಾಹನವೊಂದರ ಮೂಲಕ ರತ್ನಮ್ಮ ಅವರನ್ನು ಸಾಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಈ ವಿಷಯವನ್ನು ತಗ್ತಿ ಗ್ರಾಮದ ಸಮೀಪವಿರುವ ಹುಲಿಬಳ್ಳಿ ಗ್ರಾಮದ ಸೋಮರಾಜ್ ಎಂಬುವವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ತಗ್ತಿ ಗ್ರಾಮದ ಕೆಲವು ಮನೆಗಳಿಗೆ ವಿದ್ಯುತ್ ಸೌಲಭ್ಯದ ಕೊರತೆ ಇರುವ ವಿಷಯವನ್ನೂ ಬೆಳಕಿಗೆ ತಂದಿದ್ದಾರೆ.

‘ದೀನದಯಾಳ್ ಗ್ರಾಮೀಣ ವಿದ್ಯುದೀಕರಣ ಯೋಜನೆಯಡಿ ವಿದ್ಯುತ್ ಸಂಪರ್ಕ ಕಲ್ಪಿಸಲು ಮಂಜೂರಾತಿ ದೊರಕಿದ್ದರೂ ಅಲ್ಲಿ ವಿದ್ಯುತ್ ಕಂಬ ನೆಡಲು ಅರಣ್ಯ ಇಲಾಖೆ ಆಕ್ಷೇಪ ವ್ಯಕ್ತಪಡಿಸಿರುವುದರಿಂದ ಗ್ರಾಮದ ಮನೆಗಳಿಗೆ ವಿದ್ಯುತ್ ದೊರಕುತ್ತಿಲ್ಲ’ ಎಂದು ಅವರು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT