ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರವಿಲ್ಲದಿದ್ದರೂ ಮೌಲ್ಯಗಳಲ್ಲಿ ರಾಜಿ ಇಲ್ಲ: ಬಸವರಾಜ ಬೊಮ್ಮಾಯಿ

Last Updated 26 ನವೆಂಬರ್ 2022, 4:52 IST
ಅಕ್ಷರ ಗಾತ್ರ

ಶಿವಮೊಗ್ಗ: ‘ಬಿಜೆಪಿ ವಿಶ್ವದಲ್ಲಿಯೇ ಅತಿ ಹೆಚ್ಚು ಸದಸ್ಯರನ್ನು ಹೊಂದಿರುವ ಪಕ್ಷ. ಅಧಿಕಾರಕ್ಕಾಗಿ ಪಕ್ಷ ತನ್ನ ಸಿದ್ದಾಂತ ಹಾಗೂ ಮೌಲ್ಯಗಳೊಂದಿಗೆ ಎಂದಿಗೂ ರಾಜಿ ಮಾಡಿಕೊಂಡಿಲ್ಲ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದ ಕಿಮ್ಮನೆ ಗಾಲ್ಫ್ ರೆಸಾರ್ಟ್‌ನಲ್ಲಿ ಶುಕ್ರವಾರ ಆರಂಭವಾದ ಬಿಜೆಪಿ ಪ್ರಶಿಕ್ಷಣ ವರ್ಗದ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಮೊದಲು ದೇಶ, ನಂತರ ಪಕ್ಷ ಎಂಬ ಧ್ಯೇಯ ಹೊಂದಿದ್ದೇವೆ. ಆದರೂ ಬಿಜೆಪಿ ಬಗ್ಗೆ ಅಪಪ್ರಚಾರ ದೊಡ್ಡದಿದೆ. ಆದರೆ ದೇಶದ ಜನರಿಗೆ ಪಕ್ಷದ ಬಗ್ಗೆ ಉತ್ತಮ ಅಭಿಪ್ರಾಯವಿದೆ’ ಎಂದರು.

‘ಸಂವಿಧಾನದ ಆಶಯ ಈಡೇರಿಸುವುದು ಬಿಜೆಪಿ ಆದ್ಯತೆ. ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಹೇಗೆ ನಡೆಸಿಕೊಂಡಿತ್ತು ಎಂಬುದು ಈಗ ಇತಿಹಾಸ. ಅವರು ನಿಧನರಾದಾಗ ಅಂತ್ಯಕ್ರಿಯೆ ನೆರವೇರಿಸಲು ದೆಹಲಿಯಲ್ಲಿ ಅವಕಾಶ ನೀಡಿರಲಿಲ್ಲ. ಈಗ ಅವರ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿದೆ’ ಎಂದು ಟೀಕಿಸಿದರು.

‘ಪಕ್ಷದ ಗಟ್ಟಿ ನಿಲುವು ಹಾಗೂ ಸಿದ್ಧಾಂತ ಜನರ ಸಮಸ್ಯೆಗಳಿಗೆ ಪರಿಹಾರ ಕೊಡಲಿದೆ. ಆ ನಿಟ್ಟಿನಲ್ಲಿ ರಾಜ್ಯದಲ್ಲಿರುವ ಎಲ್ಲ ಶ್ರದ್ಧಾ ಕೇಂದ್ರಗಳು ಹಾಗೂ ಮಂದಿರಗಳನ್ನು ಅವುಗಳ ಭಕ್ತರೇ ಮೇಲ್ವಿಚಾರಣೆ ಮಾಡಬೇಕು ಎಂಬುದು ನಮ್ಮ ಪ್ರಬಲ ನಂಬಿಕೆ. ಬರುವ ದಿನಗಳಲ್ಲಿ ಆ ರೀತಿಯ ವ್ಯವಸ್ಥೆ ಮಾಡಲು ಸಿದ್ಧತೆ ನಡೆಸಿದ್ದೇವೆ’ ಎಂದರು.

‘ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಚುನಾವಣೆಯ ಸಮರಕ್ಕೆ ಸಿದ್ಧರಾಗಿ’ ಎಂದು ಪಕ್ಷದ ಪದಾಧಿಕಾರಿಗಳಿಗೆ ಸೂಚನೆ ನೀಡಿದ ಬೊಮ್ಮಾಯಿ, ‘ನಾವು ಮಾಡಿರುವ ಅಭಿವೃದ್ಧಿ ಕೆಲಸಗಳ ಪಟ್ಟಿ ಹಾಗೂ ಮುಂದೆ ಮಾಡಬೇಕಾದ ಕೆಲಸಗಳ ಪಟ್ಟಿ ಇಟ್ಟುಕೊಂಡು ಜನರ ಮುಂದೆ ಹೋಗಬೇಕಾದ ಕಾಲ ಈಗ ಬಂದಿದೆ. ಬೂತ್ ಹಾಗೂ ಮಂಡಳ ಮಟ್ಟದಲ್ಲಿ ಪಕ್ಷದ ಸಂಘಟನೆ ಚುರುಕುಗೊಳಿಸಿ’ ಎಂದು ಕಿವಿಮಾತು ಹೇಳಿದರು.

‘ಕಾಂಗ್ರೆಸ್‌ನವರಿಗೆ ಅಧಿಕಾರವೇ ಮುಖ್ಯವಾಗಿತ್ತು. ಕಾಂಗ್ರೆಸ್ ತನ್ನ ಸಿದ್ದಾಂತ, ನೀತಿಗೆ ಅಂಟಿಕೊಂಡು ರಾಜಕಾರಣ ಮಾಡಿಲ್ಲ. ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರ ಅನೇಕ ಜನಪರ ಕೆಲಸ ಮಾಡಿದೆ. ನರೇಂದ್ರ ಮೋದಿ ಸರ್ಕಾರ ಕೂಡ ಉಜ್ವಲಾ ಯೋಜನೆ ಜಾರಿಗೆ ತಂದಿದೆ. ಪ್ರತಿ ಮನೆಗೆ ಶುದ್ಧ ನೀರು ಪೂರೈಸಲಾಗುತ್ತಿದೆ. ಎಲ್ಲಾ ಕ್ಷೇತ್ರಗಳನ್ನು ಮೋದಿ ಸರ್ಕಾರ ಅಭಿವೃದ್ಧಿ ಮಾಡಿದೆ’ ಎಂದರು.

‘ಜಗತ್ತಿನ ಎಲ್ಲಾ ರಾಷ್ಟ್ರಗಳಲ್ಲಿ ಆರ್ಥಿಕ ಹಿಂಜರಿತ ಇದೆ. ಆದರೆ ಭಾರತ ಜಿಡಿಪಿಯಲ್ಲಿ ನಿಯಂತ್ರಣ ಹೊಂದಿದೆ. ಶೇ. 7 ಬೆಳವಣಿಗೆ ಕಾಣುತ್ತಿದೆ. ಆರ್ಥಿಕವಾಗಿ ಭಾರತ ಪ್ರಗತಿ ಸಾಧಿಸುತ್ತಿದೆ. ಮೋದಿ ಸರ್ಕಾರದ ದಾರಿಯಲ್ಲಿ ರಾಜ್ಯ ಸರ್ಕಾರ ಸಾಗುತ್ತಿದೆ. ಕೋವಿಡ್ ನಿರ್ವಹಣೆಯಲ್ಲಿ ಯಶಸ್ವಿಯಾಗಿದ್ದೇವೆ. ಯಡಿಯೂರಪ್ಪ ಅವರು ಮಾದರಿ ನಿರ್ವಹಣೆ ಮಾಡಿ ತೋರಿಸಿದ್ದಾರೆ’ ಎಂದರು.

‘ಇದುವರೆಗೆ ತೆರಿಗೆ ನಿರ್ವಹಣೆಯಲ್ಲಿ ಹಿನ್ನಡೆಯಿತ್ತು. ಈಗ ಗುರಿ ಮೀರಿ ತೆರಿಗೆ ಸಂಗ್ರಹಣೆಯಾಗಿದೆ. ಬೃಹತ್ ಯೋಜನೆಗಳನ್ನು ಅನುಷ್ಠಾನ ಮಾಡಿದೆ. ಸಂವಿಧಾನ ನಂಬಿಕೆ ಇಲ್ಲ ಎನ್ನುತ್ತಿದ್ದ ಪಕ್ಷಕ್ಕೆ ಆತ್ಮಾವಲೋಕನ ಮಾಡುವ ಅವಶ್ಯಕತೆ ಇದೆ. ಕಾಂಗ್ರೆಸ್ ನವರು ಇದು ಸಾಧ್ಯವಿಲ್ಲ, ಅದು ಸಾಧ್ಯ ಇಲ್ಲ ಎಂದು ಹೇಳುತ್ತಾರೆ. ಕಾಂಗ್ರೆಸ್ ನವರು ದಾಸ್ಯ ಸಂಸ್ಕೃತಿಯವರು.
ತಾವೂ ಮಾಡುವುದಿಲ್ಲ, ಬೇರೆಯವರಿಗೂ ಮಾಡಲು ಬಿಡುವುದಿಲ್ಲ’ ಎಂದರು.

ಪ್ರಶಿಕ್ಷಣ ಪ್ರಕೋಷ್ಠ ರಾಜ್ಯ ಸಂಚಾಲಕ ಶ್ರೀಕಾಂತ ಕುಲಕರ್ಣಿ, ಸಹಸಂಚಾಲಕ ಆರ್.ಕೆ. ಸಿದ್ರಾಮಣ್ಣ, ರಾಜ್ಯ ಬಿಜೆಪಿ ಉಪಾಧ್ಯಕ್ಷ ನಿರ್ಮಲ್‌ಕುಮಾರ್ ಸುರಾನಾ, ಪ್ರಶಿಕ್ಷಣ ವರ್ಗದಲ್ಲಿ ಸಚಿವರಾದ ಆರಗ ಜ್ಞಾನೇಂದ್ರ, ಆರ್.ಅಶೋಕ್, ಬಿ.ಶ್ರೀರಾಮುಲು, ಶಾಸಕರಾದ ಜಗದೀಶ ಶೆಟ್ಟರ್, ಕೆ.ಎಸ್.ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ, ವಿಧಾನಪರಿಷತ್ ಸದಸ್ಯರಾದ ಎನ್.ರವಿಕುಮಾರ್, ಡಿ.ಎಸ್‌.ಅರುಣ್ ಪಾಲ್ಗೊಂಡಿದ್ದರು.

ವರದಿ ಕೊಡಲು ಹೇಳಿದ್ದೇನೆ: ಸಿಎಂ
ಶರಾವತಿ ಸಂತ್ರಸ್ತರ ಬಗ್ಗೆ ಶಿವಮೊಗ್ಗ ಜಿಲ್ಲಾಡಳಿತದಿಂದ ವರದಿ ಕೊಡಲು ಹೇಳಿದ್ದೇನೆ. ಡಿಸೆಂಬರ್ ಮೂರನೇ ವಾರದಲ್ಲಿ ಆರಂಭವಾಗುವ ವಿಧಾನಸಭೆ ಅಧಿವೇಶನದ ಒಳಗೆ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು. ಸಂತ್ರಸ್ತರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.

ಗುಜರಾತ್ ಚುನಾವಣೆ ಮುಗಿದ ಮೇಲೆ ಸಚಿವ ಸಂಪುಟ ವಿಸ್ತರಣೆ ಮಾಡಲಾಗುವುದು. ಮಾಧ್ಯಮದವರಿಗೆ ಮಾಹಿತಿ ಕೊಟ್ಟೇ ಮುಂದುವರೆಯಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

***

ಮುಳುಗಡೆ ಸಂತ್ರಸ್ತರ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದವರು ಈ ಮೊದಲೇ ಸರಿಯಾದ ನಿರ್ಧಾರಗಳ ಕೈಗೊಂಡಿದ್ದರೆ, ಇಂದು ಅವರು ಪಾದಯಾತ್ರೆ ಮಾಡುವ ಅಗತ್ಯವೇ ಇರುತ್ತಿರಲಿಲ್ಲ.
-ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT