ಭದ್ರಾವತಿ: ‘ದೇಶದ ಸಂವಿಧಾನದಲ್ಲಿ ಕೇವಲ ಔಪಚಾರಿಕ ತತ್ವಗಳಲ್ಲದೆ, ನೈಜ, ನೈತಿಕ ತತ್ವಗಳು ಅಡಗಿವೆ. ಇದನ್ನು ಮನಗಂಡು ದೇಶದ ಪ್ರತಿಯೊಬ್ಬರೂ ಕರ್ತವ್ಯ ಬದ್ಧರಾಗಬೇಕು. ತಮ್ಮಲ್ಲಿರುವ ದ್ವೇಷ, ಸೇಡು, ಅಸೂಯೆ, ಸಂಶಯಗಳನ್ನು ಪರಸ್ಪರ ಹೋಗಲಾಡಿಸಿಕೊಳ್ಳಬೇಕು’ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಗೌರವ ಸಲಹೆಗಾರರಾದ ಗೋ.ರು. ಚನ್ನಬಸಪ್ಪ ತಿಳಿಸಿದರು.
ವೀರಶೈವ ಸಮಾಜದ ತಾಲ್ಲೂಕು ಘಟಕದಿಂದ ಈಚೆಗೆ ಏರ್ಪಡಿಸಿದ್ದ ಸನ್ಮಾನ ಮತ್ತು ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಸ್ವತಂತ್ರ್ಯ ದೊರೆತು ಏಳು ದಶಕಗಳಾದರೂ ದೇಶಭಕ್ತಿ, ನಮ್ಮ ರಾಷ್ಟ್ರ ಎಂಬ ಭಾವನೆ ಎಲ್ಲರಲ್ಲೂ ಕಂಡು ಬರದಿರುವುದು ದೇಶದ ದುರಂತದ ಸಂಗತಿ. ದೇಶ ಒಂದು ಎಂಬ ಭಾವನೆ ತೊಲಗಿ ಪ್ರಾದೇಶಿಕ ಭಾವನೆ ಉಲ್ಬಣಗೊಳ್ಳುತ್ತಿದೆ. ಇವುಗಳ ಪರಿಣಾಮ ಜನತೆ, ಜನಪ್ರತಿನಿಧಿಗಳು ಗೊಂದಲದಲಿದ್ದಾರೆ. ಶಾಸನಸಭೆಗಳಲ್ಲಿ ಚುನಾಯಿತ ಪ್ರತಿನಿಧಿಗಳು ಇಂತಹ ಸೂಕ್ಷ್ಮ ಸಂಗತಿಗಳ ಬಗ್ಗೆ ಗಮನಹರಿಸಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಾಪಾಡಬೇಕು’ ಎಂದು ಹೇಳಿದರು.
ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ‘ವೀರಶೈವ ಲಿಂಗಾಯತ ಸಮಾಜದ ಕಾಯಕ ಮತ್ತು ದಾಸೋಹ ಕಲ್ಪನೆಯನ್ನು ಹಿಂದಿನ ಕಾಲದಿಂದಲೂ ಸಮಾಜದ ಗಣ್ಯರು, ನಾಯಕರು, ಮಠಾಧೀಶರು ನಿಸ್ವಾರ್ಥತೆಯಿಂದ ಮಾಡುವ ಮೂಲಕ ತಮ್ಮದೇ ಆದ ಕೊಡುಗೆಗಳನ್ನು ಕೊಟ್ಟಿದ್ದಾರೆ. ಇದನ್ನು ಸ್ವಾಗತಿಸಿ ಈ ಪರಂಪರೆಯನ್ನು ಮುನ್ನಡೆಸಿಕೊಂಡು ಹೋಗುವ ಜವಾಬ್ದಾರಿ ಇಂದಿನ ಜನಾಂಗದವರದ್ದು’ ಎಂದು ತಿಳಿಸಿದರು.
ಶಾಸಕ ಬಿ.ಕೆ. ಸಂಗಮೇಶ್ವರ ಸಮಾರಂಭವನ್ನು ಉದ್ಘಾಟಿಸಿದರು. ಹೊನ್ನಾಳ್ಳಿ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲ ಬಿ.ಜಿ. ಧನಂಜಯ ಪ್ರಾಸ್ತಾವಿಕವಾಗಿ ಮಾತನಾಡಿದರು.
ಇಚೆಗೆ ನಡೆದ ವಿಧಾನ ಪರಿಷತ್ ಚುನಾವಣೆಗಳಲ್ಲಿ ವಿಜೇತರಾದ ಡಾ.ಧನಂಜಯ ಸರ್ಜಿ, ಬಲ್ಕಿಶ್ ಬಾನು ಹಾಗೂ ಮಾಜಿ ಶಾಸಕ ರುದ್ರೇಗೌಡ ಅವರನ್ನು ಅಭಿನಂದಿಸಲಾಯಿತು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಕೆ.ಎಸ್. ವಿಜಯ್ ಕುಮಾರ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಹನುಮಂತ, ಸಮಾಜದ ಹಿರಿಯರಾದ ಹೆಬ್ಬಂಡಿ ಶಿವರುದ್ರಪ್ಪ ಸನ್ಮಾನಿಸಲಾಯಿತು.
ಕೆ.ಎಚ್.ತೀರ್ಥಯ್ಯ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಬಿ.ಜಿ. ಧನಂಜಯ, ಪ್ರೊ.ಬಸವರಾಜ್ ನಲ್ಲಿಸರ, ನಿವೃತ್ತ ಪ್ರಾಂಶುಪಾಲ ಪ್ರೊ.ಎಚ್. ಭುವನೇಶ್ವರ್, ಎಂ.ಇ ಜಗದೀಶ್ ಹಾಜರಿದ್ದರು. ಭುವನ ನಾಗಾನಂದ, ಕುಸುಮಾ, ತೀರ್ಥಯ್ಯ, ಮಲ್ಲಿಕಾರ್ಜುನ್ ಪ್ರಾರ್ಥಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.