ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಗರ ನಗರಸಭೆಯಲ್ಲಿ ಹಗರಣ ನಡೆದಿಲ್ಲ: ಅಧ್ಯಕ್ಷೆ ಮಧುರಾ ಶಿವಾನಂದ್

ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್ ಭರವಸೆ
Last Updated 21 ಸೆಪ್ಟೆಂಬರ್ 2021, 4:36 IST
ಅಕ್ಷರ ಗಾತ್ರ

ಸಾಗರ: ‘ಬಿಜೆಪಿಯ ಆಡಳಿತದ ಅವಧಿಯಲ್ಲಿ ಇಲ್ಲಿನ ನಗರಸಭೆಯಲ್ಲಿ ಯಾವುದೇ ಹಗರಣ ನಡೆದಿಲ್ಲ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ನಡೆದ ಆಶ್ರಯ ನಿವೇಶನ ಹಗರಣವನ್ನು ಕೆಲವು ಕಾಂಗ್ರೆಸ್ ಮುಖಂಡರು ಬಿಜೆಪಿ ಅವಧಿಯಲ್ಲೇ ನಡೆದಿದೆ ಎನ್ನುವಂತೆ ಬಿಂಬಿಸುತ್ತಿದ್ದಾರೆ’ ಎಂದು ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್ ಹೇಳಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈಚೆಗೆ ನಗರಸಭೆ ಮಾಜಿ ಅಧ್ಯಕ್ಷ ತೀ.ನ. ಶ್ರೀನಿವಾಸ್ ಅವರು ನಗರಸಭೆ ಆಡಳಿತದಲ್ಲಿ ವೈಫಲ್ಯ ಉಂಟಾಗಿದೆ ಎಂದು ಆರೋಪಿಸಿದ್ದಾರೆ. ಆಶ್ರಯ ನಿವೇಶನದ ಅಕ್ರಮಗಳ ಕುರಿತು ಪ್ರಸ್ತಾಪಿಸಿದ್ದಾರೆ. ಆದರೆ ಅಕ್ರಮಗಳು ನಡೆದಿರುವುದು ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಎಂಬುದನ್ನು ಅವರು ಮರೆ
ಮಾಚುತ್ತಿದ್ದಾರೆ’ ಎಂದು ದೂರಿದರು.

ನಗರಸಭೆಯಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಆಶ್ರಯ ನಿವೇಶನಗಳನ್ನು ಅನರ್ಹ ಫಲಾನುಭವಿಗಳಿಗೆ ಹಂಚಲಾಗಿದೆ. ಅಲ್ಲದೇ ನಿವೇಶನಗಳ ದಾಖಲೆಗಳನ್ನು ನಿರ್ವಹಿ
ಸಿಲ್ಲ. ಆಶ್ರಯಹಕ್ಕುಪತ್ರಗಳನ್ನು ನಕಲು ಮಾಡಿ ವಂಚಿಸಲಾಗಿದೆ. ಕೆಲವು ಹಕ್ಕುಪತ್ರ ಗಳನ್ನು ತಿದ್ದುಪಡಿ ಮಾಡಲಾಗಿದೆ. ಇಂತಹ ಲೋಪಗಳೆಲ್ಲವೂ ನಡೆದಿರುವುದು ಕಾಂಗ್ರೆಸ್ ಆಡಳಿತದ ಅವಧಿಯಲ್ಲೇ ಹೊರತು ಬಿಜೆಪಿ ಅವಧಿಯಲ್ಲಿ ಅಲ್ಲ ಎಂದರು.

ಅನ್ಯಾಯಕ್ಕೆ ಒಳಗಾದವರಿಗೆ ಒಂದು ತಿಂಗಳೊಳಗೆ ನಗರಸಭೆ ಕಚೇರಿಗೆ ದಾಖಲೆಗಳೊಂದಿಗೆ ದೂರು ನೀಡಿದರೆ ಸತ್ಯಾಸತ್ಯತೆ ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಆಶ್ರಯ ನಿವೇಶನ ಹಗರಣ ನಡೆಸಿರುವವರ ವಿರುದ್ಧ ಸಮಗ್ರ ತನಿಖೆಗೆ ನಿರ್ಧರಿಸಲಾಗಿದೆ ಎಂದರು.

ಈಚೆಗೆ ಶಾಸಕ ಎಚ್. ಹಾಲಪ್ಪ ಹರತಾಳು ಅವರು ಒಂದೇ ನಿವೇಶನಕ್ಕೆ ಎರಡು ಖಾತೆ ದಾಖಲಾಗಿರುವ ಸಂಬಂಧ ಪರಿಶೀಲನೆ ನಡೆಸಿದ್ದಾರೆ. ವಂಚನೆಯ ಪ್ರಕರಣವನ್ನು ಬೇಧಿಸಿ ತೊಂದರೆಗೆ ಒಳಗಾಗಿರುವವರಿಗೆ ನ್ಯಾಯ ಒದಗಿಸಬೇಕು ಎಂಬುದು ಶಾಸಕರ ಉದ್ದೇಶ. ಕಾಂಗ್ರೆಸ್ ಮುಖಂಡರು ಬಿಜೆಪಿಯ ಆಡಳಿತದಿಂದ ಆದ ತಪ್ಪು ಎಂದು ಹೇಳುತ್ತಿರುವುದು ಬಾಯಿ ಚಪಲದ ಟೀಕೆ ಎಂದರು.

ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಹಳಿ ತಪ್ಪಿದ ನಗರಸಭೆಯ ಆಡಳಿತವನ್ನು ಸುವ್ಯವಸ್ಥೆಗೆ ತರುವತ್ತ ಈಗಿನ ಆಡಳಿತ ಗಮನಹರಿಸಿದೆ. ಆಡಳಿತದ ವೈಫಲ್ಯ ಎಂದು ಟೀಕಿಸುವುದು ಕೇವಲ ರಾಜಕೀಯ ಎಂದು ಹೇಳಿದರು.

ನಗರಸಭೆ ಉಪಾಧ್ಯಕ್ಷ ವಿ. ಮಹೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಡಿ. ತುಕಾರಾಮ್, ಸದಸ್ಯರಾದ ಗಣೇಶ್ ಪ್ರಸಾದ್, ನಾದಿರಾ ಪರ್ವಿನ್, ಮೈತ್ರಿ ಪಾಟೀಲ್, ಆರ್. ಶ್ರೀನಿವಾಸ್, ಶಂಕರ್ ಅಳ್ವೆಕೋಡಿ, ಸವಿತಾ ವಾಸು, ಭಾವನಾ ಸಂತೋಷ್, ಕುಸುಮ ಸುಬ್ಬಣ್ಣ, ರಾಜೇಂದ್ರ ಪೈ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT