ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳ್ಳರ ಕೈಚಳಕಕ್ಕೆ ತತ್ತರಿಸಿದ ಮಲೆನಾಡಿಗರು!

ಒಂಟಿ ಮನೆಗಳೇ ಟಾರ್ಗೆಟ್: ಅಡಿಕೆ, ಚಿನ್ನ, ನಗದು... ಎಲ್ಲವೂ ಮಾಯ
Last Updated 12 ಡಿಸೆಂಬರ್ 2022, 6:00 IST
ಅಕ್ಷರ ಗಾತ್ರ

ತುಮರಿ: ಶರಾವತಿ ಹಿನ್ನೀರಿನಲ್ಲಿ ಕಳೆದ ಹಲವು ತಿಂಗಳುಗಳಿಂದ ನಡೆಯುತ್ತಿರುವ ಸಾಲು ಸಾಲು ದರೋಡೆ ಪ್ರಕರಣಗಳಿಂದ ಕರೂರು, ಬಾರಂಗಿ ಹೋಬಳಿಯ ಜನರು ಅತ್ಯಂತ ಭಯದಲ್ಲಿ ಜೀವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಯಾವುದೇ ಪ್ರಕರಣ ತಾರ್ಕಿಕ ಅಂತ್ಯ ಕಂಡಿಲ್ಲ. ಇದು ಪೊಲೀಸ್ ಇಲಾಖೆಗೂ ಸವಾಲಾಗಿ ಪರಿಣಮಿಸಿದೆ.

ತಾಲ್ಲೂಕಿನಲ್ಲಿ ವೃದ್ಧ ದಂಪತಿ ಹತ್ಯೆ ನಡೆದು ಎರಡು ವರ್ಷಗಳು ಕಳೆದರೂ ಇದುವರೆಗೂ ಹಂತಕರ ಬಂಧನ ಆಗಿಲ್ಲ. ಹಂತಕರ ಬಂಧನಕ್ಕೆ ಆಗ್ರಹಿಸಿ ಬ್ಯಾಕೋಡಿನಲ್ಲಿ ಈಚೆಗೆ ಬೃಹತ್ ಪ್ರತಿಭಟನೆಯೂ ನಡೆಯಿತು. ಈ ವೇಳೆ ಪೊಲೀಸ್‌ ಅಧಿಕಾರಿಗಳು ಶೀಘ್ರವೇ ಹಂತಕರ ಬಂಧಿಸುವ ಭರವಸೆ ನೀಡಿದ್ದರು. ಆದರೆ, ಅದು ಹುಸಿಯಾಗಿದೆ.

10 ತಿಂಗಳ ಈಚೆಗೆ ಕರೂರು ಹೋಬಳಿಯ ಬೇರಾಳ, ಸುಳ್ಳಳ್ಳಿ, ಬ್ಯಾಕೋಡು, ಸಸಿಗೊಳ್ಳಿ, ಬೇದರಕೊಪ್ಪ, ಮಾವಿನಕೈ ಸೇರಿ ಈ ಭಾಗದಲ್ಲಿ ಸುಮಾರು ಏಳು ಕಳ್ಳತನ ಪ್ರಕರಣಗಳು ನಡೆದಿವೆ. ಮರಾಠಿ ಗ್ರಾಮದಲ್ಲಿ ಈಚೆಗೆ ಅನುಮಾನಾಸ್ಪದ ಸಾವಿನ ಪ್ರಕರಣ ನಡೆದಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಎರಡು ವರ್ಷಗಳ ಹಿಂದೆ ನಡೆದ ಜೋಡಿ ಕೊಲೆಯಲ್ಲಿ ಸಾವನ್ನಪ್ಪಿದವರು ಚಿನ್ನದ ವ್ಯಾಪಾರಿಗಳಾಗಿದ್ದು, ನಂತರದ ಎಲ್ಲಾ ಪ್ರಕರಣಗಳಲ್ಲಿಯೂ ಬಹುತೇಕ ಚಿನ್ನಕ್ಕಾಗಿಯೇ ಕಳ್ಳತನ ನಡೆದಿದೆ. ಇದರಿಂದ ಜೋಡಿ ಕೊಲೆಗೂ ಈ ಕಳ್ಳತನ ಪ್ರಕರಣಗಳಿಗೂ ಸಂಬಂಧವಿದೆಯೇ ಎಂಬುದು ಜನರ ಅನುಮಾನಕ್ಕೆ ಪುಷ್ಟಿ ನೀಡಿದ್ದು ತನಿಖೆಯ ವಿಳಂಬದ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿವೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಒಂಟಿ ಮನೆಗಳಲ್ಲಿ ಕಳ್ಳತನ: ಗ್ರಾಮೀಣ ಭಾಗಗಳಲ್ಲಿ ಒಂಟಿ ಮನೆಗಳನ್ನು ಹೆಚ್ಚು ಗುರಿಯಾಗಿಸಿ ಕಳ್ಳತನ ನಡೆಯುತ್ತಿವೆ. ಈ ಭಾಗದಲ್ಲಿ ಬಹುತೇಕ ಒಂಟಿ ಮನೆಗಳಿದ್ದು, ಕಳ್ಳತನ ಪ್ರಕರಣಗಳು ಮತ್ತೆ ಮತ್ತೆ ವರದಿಯಾಗುತ್ತಿದ್ದರೂ ಆರೋಪಿಗಳನ್ನು ಪತ್ತೆ ಹಚ್ಚಲು ಪೊಲೀಸ್ ಇಲಾಖೆ ನಿರ್ಲಕ್ಷ್ಯ ವಹಿಸಿದೆ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಹವಾಲು ಕೇಳುವವರ‍್ಯಾರು: ಬ್ಯಾಕೋಡು ಉಪ ಪೋಲಿಸ್ ಠಾಣೆ ಕೆಡವಿ ವರ್ಷಗಳು ಕಳೆದರೂ ನೂತನ ಕಟ್ಟಡ ಕಾಮಗಾರಿ ಆರಂಭವಾಗಿಲ್ಲ. ಸದ್ಯ ಶಾಲಾ ಅವರಣದಲ್ಲಿ ಚಿಕ್ಕ ಕೊಠಡಿಯಲ್ಲಿ ಪೊಲೀಸ್ ಠಾಣೆ ತೆರಿಯಲಾಗಿದ್ದು, ಇದ್ದೂ ಇಲ್ಲದಂತಾಗಿದೆ. ಈ ಪೊಲೀಸ್ ಠಾಣೆಯನ್ನು ಮೇಲ್ದರ್ಜೆಗೆ ಏರಿಸಲು ಒಂದೂವರೆ ದಶಕದಿಂದ ಜನರು ಪ್ರತಿಭಟನೆ ನಡೆಸಿಕೊಂಡು ಬಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾದರೆ ಜನರ ಅಹವಾಲು ಕೇಳುವವರ‍್ಯಾರು ಎಂಬ ಪ್ರಶ್ನೆ ಎದುರಾಗಿದ್ದು ಜನರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಅಡಿಕೆ ರಕ್ಷಣೆಯ ಸವಾಲು: ಮಲೆನಾಡಿನಲ್ಲಿ ಈಗ ಅಡಿಕೆ ಬೆಳೆಯ ಕಟಾವು ಆರಂಭಿಕ ಹಂತದಲ್ಲಿದೆ. ಪ್ರಮುಖವಾಗಿ ಕರೂರು, ಬಾರಂಗಿ ಹೋಬಳಿಯಲ್ಲಿ ಈ ತಿಂಗಳಿನಿಂದ ಕಟಾವು ಆರಂಭವಾಗಿದೆ. ಇನ್ನೂ ಶೇ 20ರಷ್ಟೂ ಕಟಾವು ಪ್ರಕ್ರಿಯೆ ಮುಗಿದಿಲ್ಲ. ಅಡಿಕೆಗೆ ಉತ್ತಮ ಬೆಲೆ ಇರುವುದರಿಂದ ಕಳ್ಳರ ಭಯ ಕಾಡುತ್ತಿದ್ದು, ಹೇಗೆ ಸಂರಕ್ಷಿಸುವುದು ಎಂಬ ಚಿಂತೆ ರೈತರನ್ನು ಕಾಡುತ್ತಿದೆ.

ದೋಷಯುಕ್ತ ಕ್ಯಾಮೆರಾ: ಈ ಭಾಗದಲ್ಲಿನ ತುಮರಿ, ಬ್ಯಾಕೋಡು, ಹಾರಿಗೆ, ಸುಳ್ಳಳ್ಳಿಯ ಹಲವು ವೃತ್ತಗಳಲ್ಲಿ ಆಳವಡಿಸಿರುವ ಕೆಲವು ಸಿ.ಸಿ. ಟಿವಿ ಕ್ಯಾಮೆರಾಗಳು ತಾಂತ್ರಿಕ ದೋಷದಿಂದ ಕೂಡಿವೆ. ಇನ್ನೂ ದುರಸ್ತಿಯಾಗಿಲ್ಲ. ಪೋಲಿಸ್ ಇಲಾಖೆ, ಸ್ಥಳೀಯ ಗ್ರಾಮ ಪಂಚಾಯಿತಿ ಹಗ್ಗ ಜಗ್ಗಟಾದ ನಡುವೆ ಪ್ರಮುಖ ಕೇಂದ್ರಗಳಲ್ಲಿ ಸಮರ್ಪಕವಾದ ಕ್ಯಾಮೆರಾ ಆಳವಡಿಸದೇ ಇರುವುದರಿಂದ ಕಳ್ಳರು ಯಾವುದೇ ಭಯವಿಲ್ಲದೆ ಕೃತ್ಯ ಎಸಗುತ್ತಿದ್ದಾರೆ ಎಂದು ಸ್ಥಳೀಯರಾದ ದೇವರಾಜ ಕಪ್ಪದೂರು ದೂರಿದ್ದಾರೆ.

ದೇವಸ್ಥಾನವನ್ನೂ ಬಿಡದ ಕಳ್ಳರು

ಕೋಣಂದೂರುಸಮೀಪದ ದೇಮ್ಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಸರಣಿ ಕಳ್ಳತನದಿಂದ ಮಲೆನಾಡಿನ ಮನೆಗಳಲ್ಲಿ ಆತಂಕ ಮನೆಮಾಡಿದೆ. ತಿಂಗಳು ಕಳೆಯುತ್ತಿದ್ದರೂ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.

ತಿಂಗಳ ಈಚೆಗೆ ದೇಮ್ಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇಮ್ಲಾಪುರ, ಬಿಳುಗನಮನೆ, ತೋರೇಬೈಲು, ಮಳಲೀಮಕ್ಕಿ, ಯೋಗಿಮಳಲಿ (ಮೈನ್ಸ್)ಯಲ್ಲಿರುವ ಒಂಟಿ ಮನೆ ಮತ್ತು ದೇವಸ್ಥಾನವನ್ನು ಕೇಂದ್ರೀಕರಿಸಿ ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ.

ಅಡಿಕೆಯ ಕೊಯ್ಲು ಸಂದರ್ಭ ಪ್ರತಿ ಮನೆಯ ಅಂಗಳ, ಚಪ್ಪರದಲ್ಲಿ ಒಣಗಿಸಿರುವ ಅಡಿಕೆ ಮತ್ತು ಹಣ, ಬಂಗಾರವನ್ನೇ ಗುರಿಯಾಗಿಸಿಕೊಂಡು ಕಳ್ಳತನ ನಡೆದಿದೆ. ಈಚೆಗಷ್ಟೇ ಜೀರ್ಣೋದ್ಧಾರವಾದ ಮಳಲೀಮಕ್ಕಿಯ ಈಶ್ವರ ದೇವಸ್ಥಾನದಲ್ಲಿರುವ ಕಾಣಿಕೆ ಹುಂಡಿಯನ್ನೂ ಒಡೆದು ಕಳ್ಳರು ಹಣವನ್ನು ದೋಚಿದ್ದಾರೆ. ಕಳ್ಳತನದ ವೇಳೆ ದೇವಸ್ಥಾನದಲ್ಲಿ ಅಳವಡಿಸಿರುವ ಸಿ.ಸಿ. ಟಿವಿ ಕ್ಯಾಮೆರಾವವನ್ನು ಚಾವಣಿಯ ಕಡೆ ತಿರುಗಿಸಿ, ಕಳ್ಳತನದ ದೃಶ್ಯ ಸೆರೆಯಾಗದಂತೆ ಎಚ್ಚರವಹಿಸಿ ಚಿಪ್ ಅನ್ನು ಹೊತ್ತೊಯ್ದಿದ್ದಾರೆ. ಕಳ್ಳತನದಲ್ಲಿ ಭಾಗಿಯಾಗಿರುವ ತಂಡ ಕಳ್ಳತನದಲ್ಲಿ ಸಾಕಷ್ಟು ಪರಿಣತಿ ಹೊಂದಿರಬಹುದು ಎಂಬುದು ಸ್ಥಳೀಯರ ಅಭಿಪ್ರಾಯ.

ತೋರೇಬೈಲಿನ ಆನಂದ ಜೋಯ್ಸ್ ಅವರ ಅಡಿಕೆ, ಶಮಂತ ಅವರ ಬಂಗಾರ ಮತ್ತು ಹಣ, ದೇಮ್ಲಾಪುರ ಗುರುಮೂರ್ತಿಯವರ ಹಣ ಮತ್ತು ಅಡಿಕೆ, ಸುಬ್ರಹ್ಮಣ್ಯ ಭಟ್ ಅವರ ಅಡಿಕೆ, ಬಿಳುಗನ ಮನೆ ತಿಮ್ಮಪ್ಪ ಅವರ ಅಡಿಕೆ, ಯೋಗಿಮಳಲಿ ಸುನೀತಾ ಆನಂದ ನಾಯ್ಕ ಅವರ ಮನೆಯಲ್ಲಿದ್ದ ಹಣ ಮತ್ತು ಬಂಗಾರ, ಮಳಲೀಮಕ್ಕಿ ಯಶೋಧ ಗುಂಡಪ್ಪ ಗೌಡ ಅವರ ಹಣ ಮತ್ತು ಬಂಗಾರ , ಹನ್ನೊಂದು ಖಂಡುಗ ಸೀನ ಪೂಜಾರಿ ಮನೆಯಲ್ಲಿದ್ದ ಹಣ ಮತ್ತು ಬಂಗಾರ ಹಾಗೂ ಈಶ್ವರ ದೇವಸ್ಥಾನದ ಕಾಣಿಕೆ ಹುಂಡಿಯಲ್ಲಿದ್ದ ಹಣ ಕಳ್ಳತನವಾಗಿದೆ.

ತರಕಾರಿ ಮಾರಾಟದ ಸೋಗಿನಲ್ಲಿ ಕಳ್ಳತನ

ತರಕಾರಿ ಮಾರಾಟಗಾರರ ಸೋಗಿನಲ್ಲಿ ಪೆಟ್ರೋಲ್, ಡೀಸೆಲ್ ಕಳವು ದಂಧೆಯಲ್ಲಿ ತೊಡಗಿದ್ದ ಮೂವರು ಹೊಸನಗರ ತಾಲ್ಲೂಕಿನ ಯಡೂರಿನಲ್ಲಿ ಡೀಸೆಲ್ ಟ್ಯಾಂಕರ್‌ನಿಂದ ಡೀಸೆಲ್ ಕದಿಯುವಾಗ ಈಚೆಗೆ ಸ್ಥಳೀಯರ ಕೈಗೆ ಸಿಕ್ಕಿಬಿದ್ದಿದ್ದಾರೆ.

ಶಿವಮೊಗ್ಗದ ಸೈಯದ್ ಜಾಫರ್, ಸಯ್ಯದ್ ಮುದಸ್ಸಿರ್ ಹಾಗೂ ಹುಸೇನ್ ಬಂಧಿತರು. ಕಳ್ಳತನಕ್ಕೆ ಬಳಸುತ್ತಿದ್ದ ನಂಬರ್ ಪ್ಲೇಟ್ ಇಲ್ಲದ ವಾಹನ ಸಹಿತ 175 ಲೀ. ಡೀಸೆಲ್ ವಶಪಡಿಸಿಕೊಳ್ಳಲಾಗಿದೆ.

ವಾಹನದಲ್ಲಿ 200 ಲೀ.ನ ಮೂರು ಡ್ರಮ್‌ಗಳು, ಲಾರಿ ಸ್ಟೆಪ್ನಿಗಳು, ತರಕಾರಿ ಕ್ರೇಟ್‌ಗಳು ದೊರಕಿವೆ. ರಸ್ತೆ ಬದಿ ಹಾಗೂ ಉಳಿದ ಕಡೆ ನಿಲ್ಲಿಸಿರುತ್ತಿದ್ದ ವಾಹನಗಳಿಂದ ಡೀಸೆಲ್, ಪೆಟ್ರೋಲ್ ಕದಿಯುತ್ತಿದ್ದ ಆರೋಪಿಗಳು ತಾವು ಬಳಸುತ್ತಿದ್ದ ವಾಹನದಲ್ಲಿ ಮೇಲೆ ಕಾಣುವಂತೆ ತರಕಾರಿ ಜೋಡಿಸಿ ಇಟ್ಟುಕೊಳ್ಳುತ್ತಿದ್ದರು. ವಾಹನಗಳ ಟೈರ್, ಬ್ಯಾಟರಿ ಕೂಡ ಕಳವು ಮಾಡುತ್ತಿದ್ದರು ಎಂದು ಮೂಲಗಳು ತಿಳಿಸಿವೆ.

ಸಿಗಂದೂರು ಯಾತ್ರಾರ್ಥಿಗಳು ಹಾಗೂ ಈ ಭಾಗದ ಭೌಗೋಳಿಕ ಪ್ರದೇಶಕ್ಕೆ ಅನುಗುಣವಾಗಿ ಪೋಲಿಸ್ ಠಾಣೆ ನಿರ್ಮಾಣವಾಗಬೇಕಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ಈ ಹಿಂದೆಯೇ ತರಲಾಗಿದೆ. ಆದರೆ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ.

- ಸತ್ಯನಾರಾಯಣ ಜಿ.ಟಿ., ತುಮರಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ

ಈಶ್ವರ ದೇವಸ್ಥಾನದಲ್ಲಿ ಮೂರು ಕಾಣಿಕೆ ಹುಂಡಿಗಳ ಬೀಗವನ್ನು ಹಾರೆಗೋಲಿನಿಂದ ಅಗೆದು, ಹಣ ಮತ್ತು ಕಾಣಿಕೆಯಾಗಿ ಬಂದಿದ್ದ ಅಡಿಕೆಯನ್ನೂ ಕದ್ದಿದ್ದಾರೆ. ಸ್ಥಳೀಯರ ಸಹಕಾರದಿಂದ ಈ ಕೃತ್ಯ ನಡೆದಿರಬಹುದೆಂಬ ಶಂಕೆ ಇದೆ.

-ಆನಂದ ಶೆಟ್ಟಿಗಾರ್, ಖಜಾಂಚಿ, ಈಶ್ವರ ದೇವಸ್ಥಾನ

ಸರಣಿ ಕಳ್ಳತನವನ್ನು ಇಲಾಖೆ ಸವಾಲಾಗಿ ಸ್ವೀಕರಿಸಿದೆ. ಈಗಾಗಲೇ ಒಂದೆರಡು ಮಾಹಿತಿಗಳು ಸಿಕ್ಕಿವೆ. ಈ ವಿಚಾರವಾಗಿ 3 ತಂಡಗಳನ್ನು ರಚಿಸಿ ಕಾರ್ಯಪ್ರವೃತ್ತರಾಗಿದ್ದೇವೆ. ಕೆಲವೇ ದಿನಗಳಲ್ಲಿ ಆರೋಪಿಗಳನ್ನು ಪತ್ತೆ ಹಚ್ಚುತ್ತೇವೆ.

- ನವೀನ್ ಮಠಪತಿ, ಪಿಎಸ್‌ಐ, ಮಾಳೂರು

ಕಳ್ಳತನ ಪ್ರಕರಣಗಳನ್ನು ಭೇದಿಸುತ್ತೇವೆ. ಜನರು ಹೆದರಬೇಕಿಲ್ಲ. ಇಲಾಖೆಗೆ ಸಹಕಾರ ನೀಡುವ ಜತೆಗೆ ಎಚ್ಚರದಿಂದ ಇರಬೇಕು. ಜೋಡಿ ಕೊಲೆ ಪ್ರಕರಣದ ತನಿಖೆ ಪ್ರಗತಿಯಲ್ಲಿದೆ ರೋಹನ್ ಜಗದೀಶ್, ಎಎಸ್‌ಪಿ, ಸಾಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT