ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಎಸ್ಸೆಸ್ಸೆಲ್ಸಿಗೆ ಈ ಬಾರಿ ವಿದ್ಯಾರ್ಥಿಸ್ನೇಹಿ ಪ್ರಶ್ನೆಪತ್ರಿಕೆ'

ಸಂವಾದದಲ್ಲಿ ಮುಖ್ಯ ಶಿಕ್ಷಕರ ಸಲಹೆಗೆ ಶಿಕ್ಷಣ ಸಚಿವ ಸುರೇಶ್‌ಕುಮಾರ್ ಸಹಮತ
Last Updated 21 ಜನವರಿ 2021, 2:54 IST
ಅಕ್ಷರ ಗಾತ್ರ

ಶಿವಮೊಗ್ಗ: ಇಲ್ಲಿನ ಕುವೆಂಪು ರಂಗಮಂದಿರದಲ್ಲಿ ಬುಧವಾರ ನಡೆದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಜತೆಗಿನ ಶೈಕ್ಷಣಿಕ ಸಂವಾದದಲ್ಲಿ ಶಿಕ್ಷಕರು, ಶಾಲಾ, ಕಾಲೇಜುಗಳ ಹಲವು ಸಮಸ್ಯೆಗಳು ಅನಾವರಣಗೊಂಡವು.

ಶಿಕ್ಷಕರ ವೇತನ ವಿಳಂಬ, ಅತಿಥಿ ಶಿಕ್ಷಕರ ನೇಮಕ, ಶಾಲಾ ಆರಂಭದ ಸಿದ್ಧತೆಗಳಲ್ಲಿನ ತೊಡಕುಗಳು, ಅನುದಾನ ರಹಿತ ಶಾಲಾ ಶಿಕ್ಷಕರ ವೇತನ, ಶಾಲೆಗಳ ಶುಲ್ಕ ನಿಗದಿ ಮತ್ತಿತರ ವಿಚಾರಗಳು ಪ್ರತಿಧ್ವನಿಸಿದವು.

ತೀರ್ಥಹಳ್ಳಿ ತಾಲ್ಲೂಕು ಹೊಸೂರು ಗುಡ್ಡೇಕೇರಿಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಎಚ್‌.ಪಿ. ಮಂಜುಬಾಬು, ‘ಪ್ರತಿ ಶೈಕ್ಷಣಿಕ ವರ್ಷ ಹತ್ತು ತಿಂಗಳು ಪೂರ್ಣ ಅವಧಿ ಬೋಧನೆ ಮಾಡಲು ಅವಕಾಶ ದೊರಕುತ್ತಿತ್ತು. ಆ ಸಮಯದಲ್ಲಿ ಮಕ್ಕಳು ಮತ್ತು ಶಿಕ್ಷಕರು ಶೈಕ್ಷಣಿಕ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಯಾವುದೇ ಪ್ರಶ್ನೆಪತ್ರಿಕೆ ನೀಡಿದರೂ ಮಕ್ಕಳು ಧೈರ್ಯವಾಗಿ ಬರೆಯುವ ಆತ್ಮಸ್ಥೈರ್ಯ ಬೆಳೆಸಿಕೊಂಡಿರುತ್ತಿದ್ದರು. ಆದರೆ, ಪ್ರಸ್ತುತ ವರ್ಷ ಕೊರೊನಾ ಸಂಕಷ್ಟದಿಂದ ಜನವರಿಯಲ್ಲಿ ಶಾಲೆಗಳು ಆರಂಭವಾಗಿವೆ. ಜೂನ್ ತಿಂಗಳಲ್ಲಿ ಪರೀಕ್ಷೆಗಳು ನಡೆಯುತ್ತವೆ. ನಾಲ್ಕು ತಿಂಗಳಲ್ಲಿ ಎಲ್ಲಾ ಪಠ್ಯಕ್ರಮ ಬೋಧನೆ ಮಾಡುವುದು ಶಿಕ್ಷಕರಿಗೆ ಸವಾಲಿನ ಕೆಲಸ. ಹಾಗಾಗಿ, ಈ ವರ್ಷ ಸುಲಭ ಪ್ರಶ್ನೆಪತ್ರಿಕೆ ಸಿದ್ಧಪಡಿಸಲು ಆದ್ಯತೆ ನೀಡಬೇಕು’ ಎಂದು
ಕೋರಿದರು.

ಕಠಿಣ ಪ್ರಶ್ನೆಗಳನ್ನು ಕೇಳಿದರೆ ಬಹುತೇಕ ವಿದ್ಯಾರ್ಥಿಗಳು ಅನುತ್ತೀರ್ಣರಾಗುವ ಸಾಧ್ಯತೆ ಇರುತ್ತದೆ. ಅನುತ್ತೀರ್ಣರಾದ ಮಕ್ಕಳು
ಶಾಲೆಯಿಂದ ಹೊರಗುಳಿದು, ಹಲವು ಅಪರಾಧ ಚಟುವಟಿಕೆಯಲ್ಲಿ, ಬಾಲಕಾರ್ಮಿಕರಾಗಿ, ಬಾಲ ವಿವಾಹಕ್ಕೆ ಒಳಗಾಗುವ, ಬದುಕಿನ ಹಾದಿ ತಪ್ಪುವ ಸಾಧ್ಯತೆ ಇರುತ್ತದೆ. ಹಾಗಾಗಿ, ಈ ಬಾರಿ ಮಕ್ಕಳಸ್ನೇಹಿ ಪ್ರಶ್ನೆಪತ್ರಿಕೆ ಸಿದ್ಧಪಡಿಸಲು ಸೂಚಿಸಬೇಕು ಎಂದು ಮನವಿ ಮಾಡಿದರು. ಮನವಿಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸಹಮತ ಸೂಚಿಸಿದರು.

ದುರ್ಗಿಗುಡಿ ಶಾಲೆಯಲ್ಲಿ ನಡೆದ ಮಕ್ಕಳ ಜತೆಗಿನ ಸಂವಾದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್‌. ಈಶ್ವರಪ್ಪ, ‘ಬಡತನದ ಕಾರಣಕ್ಕೆ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಕೂಲಿ ಕಾರ್ಮಿಕರು ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಿದರೆ ದುಡಿಯುವ ಬಹುತೇಕ ಹಣ ಶಿಕ್ಷಣಕ್ಕೆ ವ್ಯಯಿಸಬೇಕಾಗುತ್ತದೆ. ಇಂತಹ ವಿಷಯಗಳನ್ನು ಗಮನಿಸಿ, ಸರ್ಕಾರಿ ಶಾಲೆಗಳನ್ನೂ ಸ್ಮಾರ್ಟ್‌ ಕ್ಲಾಸ್‌ ಮಾಡಲಾಗುತ್ತಿದೆ. ಸರ್ಕಾರಿ ಶಾಲೆಗಳಿಗೂ ಪೈಪೋಟಿ ನೀಡಲಿವೆ’ ಎಂದು ಹೇಳಿದರು.

ವಿದ್ಯಾರ್ಥಿಗಳು ಒಳ್ಳೆಯ ಶಿಕ್ಷಣ ಪಡೆದರೆ ತಂದೆ, ತಾಯಂದಿರಿಗೆ, ಶಿಕ್ಷಕರಿಗೆ ಸಂತೋಷವಾಗುತ್ತದೆ. ವಿಶೇಷವಾಗಿ ಹೆಣ್ಣುಮಕ್ಕಳ ಶಿಕ್ಷಣ ಪ್ರೌಢಶಾಲೆಗೆ ಕೊನೆಯಾಗಬಾರದು. ಪ್ರತಿಯೊಬ್ಬ ಬಾಲಕಿಯೂ ಉನ್ನತ ಶಿಕ್ಷಣ ಪಡೆಯಬೇಕು ಎಂದು ಶಿಕ್ಷಣ ಸಚಿವರು ಆಶಿಸಿದರು.

ಸ್ಮಾರ್ಟ್‌ ಸಿಟಿ ವ್ಯವಸ್ಥಾಪಕ ನಿರ್ದೇಶಕ ಚಿದಾನಂದ ವಟಾರೆ, ‘ನಗರದ 45 ಶಾಲೆಗಳಲ್ಲಿ ಡಿಜಿಟಲ್ ಕ್ಲಾಸ್ ರೂಂ ಸಜ್ಜುಗೊಳಿಸಲಾಗಿದೆ. ಡಿಜಿಟಲ್ ಕ್ಲಾಸ್‍ನಲ್ಲಿ ಇಂಟರ್‌ರಿಯಾಕ್ಟಿವ್ ಬೋರ್ಡ್, ವಿದ್ಯಾರ್ಥಿಗಳಿಗೆ ಲ್ಯಾಟ್‍ಟಾಪ್, ಸಿಸಿಟಿವಿ ಕ್ಯಾಮೆರಾ ಸೇರಿ ಅತ್ಯಾಧುನಿಕ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಈಗಾಗಲೇ 300 ಶಿಕ್ಷಕರಿಗೆ ತರಬೇತಿ ನೀಡಲಾಗಿದೆ’ ಎಂದರು.

ಸ್ಮಾರ್ಟ್‌ ಕ್ಲಾಸ್‍ನಿಂದ ಕಲಿಕೆಗೆ ಅನುಕೂಲವಾಗಿದೆ. ಪ್ರಾಯೋಗಿಕವಾಗಿ ನೋಡಿ ತಿಳಿದುಕೊಳ್ಳಲು ಸಾಧ್ಯವಾಗಿದೆ. ವಿಡಿಯೊಗಳು ಕಲಿಕೆ ಸುಲಭಗೊಳಿಸಿವೆ. ಇಂತಹ ಶಾಲೆಯಲ್ಲಿ ಕಲಿಯುತ್ತಿರುವುದು ಹೆಮ್ಮೆಯ ವಿಷಯ ಎಂದು ವಿದ್ಯಾರ್ಥಿನಿ ವೇದಿಕಾ ಅನಿಸಿಕೆ
ವ್ಯಕ್ತಪಡಿಸಿದಳು.

ನಂತರ ಬಿ.ಎಚ್‌. ರಸ್ತೆ, ಬಿ.ಬಿ. ರಸ್ತೆ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ, ಡಿಜಿಟಲ್‌ ಶಿಕ್ಷಣ ವ್ಯವಸ್ಥೆ ಪರಿಶೀಲಿಸಿದರು.

ಪಾಲಿಕೆ ಮೇಯರ್ ಸುವರ್ಣಾ ಶಂಕರ್, ಉಪ ಮೇಯರ್ ಸುರೇಖಾ ಮುರಳೀಧರ್, ಆರ್ಯವೈಶ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಿ.ಎಸ್. ಅರುಣ್, ಪಾಲಿಕೆ ಸದಸ್ಯರಾದ ಎಸ್‌.ಎನ್‌. ಚನ್ನಬಸಪ್ಪ, ವಿಶ್ವಾಸ್‌ ಇದ್ದರು.

ಆರ್‌ಟಿಇ ಬಾಕಿ ಬಿಡುಗಡೆಗೆ ಆಗ್ರಹ

ಕೊರೊನಾ ಸಂಕಷ್ಟದ ಮಧ್ಯೆ ಖಾಸಗಿ ಶಾಲೆಗಳು ನಲುಗಿವೆ.ಖಾಸಗಿ ಶಾಲೆಗಳು ಶಿಕ್ಷಕರಿಗೆ ವೇತನ ನೀಡಲೂ ಆಗದೇ ಸಂಕಷ್ಟದಲ್ಲಿವೆ. ಹಾಗಾಗಿ, ಆರ್‌ಟಿಇ ಅಡಿ ಜಿಲ್ಲೆಯ 276 ಶಾಲೆಗಳಿಗೆ ಬರಬೇಕಿರುವ ಬಾಕಿ ₹ 9.44 ಕೋಟಿ ತಕ್ಷಣ ಬಿಡುಗಡೆ ಮಾಡಬೇಕು ಎಂದು ಪಾಲಿಕೆ ವಿರೋಧ ಪಕ್ಷದ ನಾಯಕ ಎಚ್‌.ಸಿ. ಯೋಗೀಶ್ ನೇತೃತ್ವದ ಪಾಲಿಕೆ ಸದಸ್ಯರ ನಿಯೋಗ ಶಿಕ್ಷಣ ಸಚಿವರಿಗೆ ಮನವಿ ಮಾಡಿತು.

ಸ್ಮಾರ್ಟ್ ‌ಸಿಟಿ ಯೋಜನೆಯಲ್ಲಿ ನಗರದ 45 ಶಾಲೆಗಳಲ್ಲಿ ಸ್ಮಾರ್ಟ್‌ ಕ್ಲಾಸ್‌ ಆರಂಭಿಸಲಾಗಿದೆ. ಅದಕ್ಕಾಗಿ ₹ 8,50,3,009 ವೆಚ್ಚ ಮಾಡಲಾಗಿದೆ. ಗುತ್ತಿಗೆದಾರರು ಶೇ 15.81ರಷ್ಟು ಕಡಿಮೆ ದರಕ್ಕೆ ಟೆಂಡರ್‌ ಪಡೆದಿದ್ದಾರೆ. ಉಳಿತಾಯದ ಮೊತ್ತ ₹ 1.7 ಕೋಟಿ ಇದೆ. ಈ ಹಣದಲ್ಲಿ ಉಳಿದ ಸರ್ಕಾರಿ ಶಾಲೆಗಳಲ್ಲೂ ಡಿಜಿಟಲ್‌ ಶಿಕ್ಷಣಕ್ಕೆ ಅವಕಾಶ ಮಾಡಿಕೊಡಬೇಕು. ಶಿಕ್ಷಕರಿಗೆ ಹೆಚ್ಚಿನ ತರಬೇತಿ ಕೊಡಿಸಬೇಕು ಎಂದು ಕೋರಿದರು.

ಅನುದಾನ ರಹಿತ ಶಿಕ್ಷಣ ಸಂಸ್ಥೆಗಳು ಪ್ರಥಮ ಪಿಯು ಆರಂಭಿಸಿವೆ. ಇದರಿಂದ ಸರ್ಕಾರಿ, ಅನುದಾನ ಕಾಲೇಜುಗಳ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಅನುದಾನಿತ ಶಿಕ್ಷಣ ಸಂಸ್ಥೆಗಳು ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲು ಸರ್ಕಾರ ಅನುಮತಿ ನೀಡಿಲ್ಲ. ಇದರಿಂದ ಮಕ್ಕಳಿಗೆ ತೊಂದರೆಯಾಗುತ್ತಿದೆ. ಶಾಲೆಗಳಲ್ಲಿ ಏಕರೂಪದ ಶುಲ್ಕ ನಿಗದಿ ಮಾಡಬೇಕು ಎಂದು ಒತ್ತಾಯಿಸಿದರು.

ಪಾಲಿಕೆ ಸದಸ್ಯರಾದ ರೇಖಾ ರಂಗನಾಥ್‌,ಮಂಜುಳಾ ಶಿವಣ್ಣ, ಕಾಂಗ್ರೆಸ್ ಪಕ್ಷದ ಮುಖಂಡರಾದ ರಂಗೇಗೌಡ, ಮಾಲತೇಶ್, ಪವನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT