ನಿರಂಜನ ವಿ.
ತೀರ್ಥಹಳ್ಳಿ: ಸಾವಿರಾರು ಜನರನ್ನು ಆಕರ್ಷಿಸುತ್ತಿರುವ ತಾಲ್ಲೂಕಿನ ಭೀಮನಕಟ್ಟೆ-ಸೌಳಿ ತೂಗು ಸೇತುವೆ ನಿರ್ವಹಣೆ ಇಲ್ಲದೆ ಹಾಳಾಗಿದೆ.
ಮುಳುಬಾಗಿಲು, ಹೆಗ್ಗೋಡು ಗ್ರಾಮ ಪಂಚಾಯಿತಿ ಆಡಳಿತದ ತಿಕ್ಕಾಟದಲ್ಲಿ ಸೇತುವೆ ಶಿಥಿಲಗೊಂಡಿದ್ದು, ಅಪಾಯ ಆಹ್ವಾನಿಸುತ್ತಿದೆ.
ಮಾಲತಿ ನದಿಗೆ ಅಡ್ಡಲಾಗಿ ಈ ತೂಗು ಸೇತುವೆಯನ್ನು 2007ರಲ್ಲಿ ನಿರ್ಮಿಸಲಾಗಿದೆ. ತುಂಗಾ ಮತ್ತು ಮಾಲತಿ ನದಿ ಸೇರುವ ಈ ಪ್ರದೇಶದಲ್ಲಿ ನೈಸರ್ಗಿಕವಾಗಿ ಡ್ಯಾಂ ಸೃಷ್ಟಿಯಾಗಿದೆ.
ಎಂತಹ ಬಿರು ಬೇಸಿಗೆಯಲ್ಲಿಯೂ ಇಲ್ಲಿ ನೀರು ಕಡಿಮೆಯಾಗುವುದಿಲ್ಲ. ಸೌಳಿ, ಅಲಗೇರಿ, ಬಾಳೇಕೋಡ್ಲು, ಗೊರಕೋಡು, ಹೊಳೆಮಾದ್ಲು, ಬಿಕ್ಕೊಳ್ಳಿ, ಬೋಗಾರುಕೊಪ್ಪ ಮಜಿರೆ ಗ್ರಾಮಗಳಿಗೆ ಸಂಚಾರಕ್ಕೆ ಈ ಸೇತುವೆಯೇ ಆಧಾರ.
ಈ ಗ್ರಾಮಗಳು ತೀರ್ಥಹಳ್ಳಿಗೆ ಸಮೀಪವಿದ್ದರೂ ನದಿ ದಾಟಲು ಸಂಪರ್ಕಕ್ಕಾಗಿ 20 ಕಿ.ಮೀ. ಸುತ್ತುವರಿಯಬೇಕಿತ್ತು. ಇದನ್ನು ಮನಗಂಡ ಹಿರಿಯರು ಇಲ್ಲಿ ಸೇತುವೆ ನಿರ್ಮಿಸಬೇಕು ಎಂದು 50 ವರ್ಷಗಳಿಂದ ಬೇಡಿಕೆ ಸಲ್ಲಿಸುತ್ತಾ ಬಂದಿದ್ದರು.
ತುಕ್ಕಿನಿಂದ ಸೇತುವೆಗೆ ಬಲವರ್ಧನೆ ನೀಡುವ ಹಲವು ರಾಡ್‌ಗಳ ಜೋಡಣೆ ಕಳಚಿಕೊಂಡಿದೆ. ಆಡಳಿತದ ನಿರ್ಲಕ್ಷ್ಯ ಧೋರಣೆ ಮುಂದುವರಿಸಿದರೆ ದುರಂತ ಸಂಭವಿಸುವ ಸಾಧ್ಯತೆ ಇದೆ.ಸೌಳಿ ನಾಗರಾಜ್, ಗ್ರಾಮಸ್ಥ
1983ರಲ್ಲಿ ಅಂದಿನ ಶಾಸಕ ಡಿ.ಬಿ. ಚಂದ್ರೇಗೌಡ ಅವಧಿಯಲ್ಲಿ ಸೇತುವೆ ನೀಲನಕ್ಷೆ ಸಿದ್ಧಗೊಂಡು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿತ್ತು. ಆಡಳಿತಾತ್ಮಕ ಗೊಂದಲದಿಂದ ಪ್ರಸ್ತಾಪ ಮೊಟಕುಗೊಳಿಸಲಾಗಿತ್ತು. ಅನಂತರ ಪ್ರತಿ ಚುನಾವಣೆಯಲ್ಲಿ ಸೇತುವೆ ಪ್ರಮುಖ ವಿಚಾರವಾಗಿತ್ತು. ಉದ್ದೇಶಿತ ಸೇತುವೆ ಕಾಮಗಾರಿ ಬಿಟ್ಟು 2007ರಲ್ಲಿ ಅಂದಿನ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಪದ್ಮನಾಭ ಭಟ್ ₹ 25 ಲಕ್ಷ ವೆಚ್ಚದ ಅನುದಾನ ನೀಡಿ ತೂಗು ಸೇತುವೆ ನಿರ್ಮಿಸಲು ಕ್ರಮ ಕೈಗೊಂಡಿದ್ದರು.
ಆದರೆ ಈಗ ಸೇತುವೆ ಶಿಥಿಲಗೊಂಡಿದೆ. ಮಳೆಗಾಲ ಆರಂಭವಾಗಿರುವುದರಿಂದ ಕಬ್ಬಿಣದ ಸೇತುವೆಗೆ ಹಿಡಿದಿರುವ ತುಕ್ಕು ಹೆಚ್ಚಾಗುವ ಆತಂಕ ಎದುರಾಗಿದೆ. ಹಲವು ಕಡೆಗಳಲ್ಲಿ ಕಬ್ಬಿಣದ ಸರಳುಗಳು ತುಕ್ಕಿನಿಂದಾಗಿ ತನ್ನ ಸಾಮರ್ಥ್ಯ ಕಳೆದುಕೊಂಡಿದ್ದು ಮುರಿದು ಬೀಳುವ ಹಂತಕ್ಕೆ ತಲುಪಿದೆ.
ಸೇತುವೆ ನಿರ್ವಹಣೆಗೆ ಪ್ರತಿ ವರ್ಷ ₹ 2 ಲಕ್ಷ ಅನುದಾನ ಬೇಕಿದೆ. ಸಂಪೂರ್ಣ ದುರಸ್ತಿಗೆ ₹ 15 ಲಕ್ಷಕ್ಕೂ ಹೆಚ್ಚು ಅನುದಾನ ಬೇಕಿದೆ. ಇದು ಬಿಕ್ಕಟ್ಟಿಗೆ ಕಾರಣವಾಗಿದೆ. ತಾಲ್ಲೂಕಿನ ಹೆಗ್ಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸೇತುವೆ ಪ್ರದೇಶ ಹೆಚ್ಚಿದ್ದು, ಮುಳುಬಾಗಿಲು ಗ್ರಾಮ ಪಂಚಾಯಿತಿಯ ಕಡಿಮೆ ಹಳ್ಳಿಗಳು ಸೇತುವೆ ಪ್ರಯೋಜನ ಪಡೆಯುತ್ತವೆ. ಈ ಕಾರಣ ನಿರ್ವಹಣೆಯನ್ನು ಹೆಗ್ಗೋಡು ಗ್ರಾಮ ಪಂಚಾಯಿತಿ ವಹಿಸಲಿ ಎಂಬುದು ಮುಳುಬಾಗಲು ಪಂಚಾಯಿತಿ ಆಡಳಿತದ ವಾದ. ಸೇತುವೆಯ ಪ್ರಯೋಜನ ಮುಳುಬಾಗಿಲಿಗೂ ಅನ್ವಯಿಸುವುದರಿಂದ ವೆಚ್ಚ ಭರಿಸಲಿ ಎಂಬ ವಾದವನ್ನು ಹೆಗ್ಗೋಡು ಗ್ರಾ.ಪಂ. ಮುಂದಿಟ್ಟಿದೆ. ಎರಡೂ ಗ್ರಾಮ ಪಂಚಾಯಿತಿ ನಡುವಿನ ತಿಕ್ಕಾಟದಿಂದ ಜನರು ಸಂಕಷ್ಟ ಎದುರಿಸುವಂತಾಗಿದೆ.
ಕಾಮಗಾರಿಯ ವೇಳೆ ಸೇತುವೆಗೆ 25 ವರ್ಷ ಆಯಸ್ಸಿದೆ ಎಂದು ನಿಗದಿಪಡಿಸಲಾಗಿತ್ತು. ಆದರೆ ಸೇತುವೆ ಮೇಲೆ ನಿರಂತರ ದ್ವಿಚಕ್ರ ವಾಹನ ಸಂಚರಿಸುತ್ತಿರುವ ಪರಿಣಾಮ ಸೇತುವೆ ಶಿಥಿಲಗೊಂಡಿದೆ ಎನ್ನುತ್ತಾರೆ ಗ್ರಾಮದ ಸೌಳಿ ನಾಗರಾಜ್.
ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಶೀಘ್ರ ಸೇತುವೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎಂಬುದು ಸ್ಥಳೀಯರ ಒತ್ತಾಯ.
ಪ್ರವಾಸಿ ತಾಣ
ಮಲೆನಾಡು ಭಾಗದಲ್ಲಿರುವ ನೈಸರ್ಗಿಕ ಪ್ರವಾಸಿ ತಾಣಗಳನ್ನು ನೋಡಲು ರಾಜ್ಯವಲ್ಲದೇ ಹೊರ ರಾಜ್ಯಗಳಿಂದಲೂ ಅತೀ ಹೆಚ್ಚು ಸಂಖ್ಯೆಯಲ್ಲಿ ಜನರು ಬರುತ್ತಾರೆ. ಅಂತಹ ಸ್ಥಳಗಳಲ್ಲಿ ಭೀಮನಕಟ್ಟೆಯ ತೂಗು ಸೇತುವೆ ಕೂಡ ಒಂದು. ಸ್ಥಳೀಯರಿಂದಲೇ ಮಾಹಿತಿ ಪಡೆದು ಅಥವಾ ಸಾಮಾಜಿಕ ಜಾಲತಾಣದಲ್ಲಿ ಫೋಟೊಗಳನ್ನು ಹುಡುಕಿ ಸೇತುವೆ ನೋಡಲು ಅನೇಕರು ಬರುತ್ತಾರೆ. ಇದರಿಂದ ಆತಂಕ ಎದುರಾಗಿದೆ. ಸೇತುವೆಯ ಸೌಂದರ್ಯ ವೀಕ್ಷಣೆಗೆ ಬರುವ ಪ್ರವಾಸಿಗರು ಅದು ಶಿಥಿಲಗೊಂಡಿರುವುದನ್ನು ಕಂಡು ನೋಡಿ ಮರುಗುವಂತಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.