ತೀರ್ಥಹಳ್ಳಿ: ರೈತರು ಸಹಕರಿಸಿದರೆ ಭೂದಾಖಲೆ ಲಭ್ಯ: ಆರಗ ಜ್ಞಾನೇಂದ್ರ

ತೀರ್ಥಹಳ್ಳಿ: ‘ಮಲ್ಲಂದೂರು ಭಾಗದಲ್ಲಿ ನೂರಾರು ವರ್ಷಗಳಿಂದ ಜನಜೀವನ ಇದೆ. ಭೂ ಸುಧಾರಣೆ ಕಾಯ್ದೆ ಜಾರಿಗೊಂಡಿದ್ದರೂ 50 ವರ್ಷಗಳಿಂದ ಜಮೀನು ದಾಖಲೆ ಲಭಿಸಿಲ್ಲ. ರೈತರು ಸಹಕರಿಸಿದರೆ ತಕ್ಷಣ ಕ್ರಮ ಬದ್ಧ ದಾಖಲೆ ಪಡೆಯಲು ಸಾಧ್ಯ’ ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಹೇಳಿದರು.
ತಾಲ್ಲೂಕಿನ ಆಗುಂಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿಂದುಳಿದ ಮಲ್ಲಂದೂರು ಮಜರೆಹಳ್ಳಿಯಲ್ಲಿ ಮಂಗಳವಾರ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಸಮಾಲೋಚನಾ ಸಭೆ ನಡೆಸಿದರು.
‘ಭೂ ಸುಧಾರಣೆ ಕಾಯ್ದೆಯಡಿ ಮಂಜೂರಾದ ಸಾಗುವಳಿ ಪ್ರದೇಶವನ್ನು ತಕ್ಷಣ ಸರ್ವೆ ಮಾಡಿ ರೈತರಿಗೆ ಸೂಕ್ತ ದಾಖಲೆ ಒದಗಿಸಲು ಕ್ರಮ ಕೈಗೊಳ್ಳಬೇಕು. ವಾರದೊಳಗೆ ಸರ್ವೆ ಕಾರ್ಯ ಅಂತಿಮವಾಗಬೇಕು. ಇನಾಂ ಸಾಗುವಳಿ ಜಮೀನು ಮಂಜೂರಾತಿಗೆ ಅರ್ಜಿ ಸಲ್ಲಿಸುವ ವಿಧಾನವನ್ನು ಕಂದಾಯ ಇಲಾಖೆ ರೈತರಿಗೆ ಮಾಹಿತಿ ನೀಡಬೇಕು. ಜಮೀನು ಮಂಜೂರಾತಿಗೆ ಭೂ ನ್ಯಾಯಾಧಿಕರಣ ಸಮಿತಿ ತೀರ್ಮಾನ ಕೈಗೊಳ್ಳಲಿದೆ’ ಎಂದು ತಿಳಿಸಿದರು.
‘ಅತಿ ಹೆಚ್ಚು ಮಳೆ ಸುರಿಯುವ ಮಲ್ಲಂದೂರಿನಲ್ಲಿ ಕುಡಿಯುವ ನೀರಿಲ್ಲದ ಪರಿಸ್ಥಿತಿ ಇದೆ. 10 ವರ್ಷಗಳ ಹಿಂದೆ ಕುಡಿಯುವ ನೀರಿನ ಯೋಜನೆ ಅನುಷ್ಠಾನವಾದರೂ ವಿದ್ಯುತ್ ಸಂಪರ್ಕಕ್ಕೆ ಸಿಗದೇ ಹಾಳಾಗಿದೆ. ಅರಣ್ಯ ಇಲಾಖೆ ಯೋಜನೆ ಅನುಷ್ಠಾನಕ್ಕೆ ತಡೆಯೊಡ್ಡಿದೆ’ ಎಂದು ಗ್ರಾಮಸ್ಥರು ದೂರಿದರು.
‘ಸಾಗುವಳಿ ಅನುಭವ, ಮಂಜೂರಾತಿ ತೀರ್ಮಾನದಲ್ಲಿನ ವ್ಯತ್ಯಾಸ ಸರಿಪಡಿಸುವ ಕ್ರಮದ ಕುರಿತು ಪ್ರಶ್ನಿಸಿದರು. ಸಾಗುವಳಿ ಅನುಭವಕ್ಕೆ ಅನ್ವಯವಾಗುವಂತೆ ದಾಖಲೆ ಸಿದ್ಧಪಡಿಸಲಾಗುತ್ತದೆ. ವಿಸ್ತೀರ್ಣದಲ್ಲಿ ಹೆಚ್ಚು, ಕಡಿಮೆ ಆಗುವ ಕುರಿತು ಆಕ್ಷೇಪಿಸಿದರೆ ಸಮಸ್ಯೆ ಶೀಘ್ರ ಇತ್ಯರ್ಥವಾಗುವುದಿಲ್ಲ’ ಎಂದು ತಹಶೀಲ್ದಾರ್ ಅಮೃತ್ ಅತ್ರೇಶ್ ಉತ್ತರಿಸಿದರು. ಕಾನೂನು ತೊಡಕುಗಳನ್ನು ತಕ್ಷಣ ನಿವಾರಿಸಬೇಕು ಎಂದು ಸೂಚಿಸಿದರು.
ಬಗರ್‌ಹುಕುಂ ಸಕ್ರಮೀಕರಣ ಸಮಿತಿ ಅಧ್ಯಕ್ಷ ಚಕ್ಕೋಡಬೈಲು ರಾಘವೇಂದ್ರ, ಬಿದರಗೋಡು ಗ್ರಾಮ ಪಂಚಾಯಿತಿ ಅಧ್ಯಕ್ಷ ವೆಂಕಟೇಶ್, ಉಪಾಧ್ಯಕ್ಷೆ ಮಮತಾ, ಸದಸ್ಯ ಅಮೃತ್‌ರಾಜ್, ಇಓ ಶೈಲಾ ಎನ್, ಡಿವೈಎಸ್‌ಪಿ ಗಜಾನನ ವಾಮನ ಸುತಾರ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಅಶಾಲತಾ, ಮೆಸ್ಕಾಂ ಎಇಇ ಪ್ರಶಾಂತ್, ಆಗುಂಬೆ ವಲಯಾರಣ್ಯಾಧಿಕಾರಿ ಮಧುಕರ್, ಹೆಬ್ರಿ ವಲಯಾರಣ್ಯಾಧಿಕಾರಿ ಗೌತಮ್ ಇದ್ದರು.
ಭೂ ಸುಧಾರಣೆ ಕಾಯ್ದೆ ವ್ಯಾಪ್ತಿಯ ಸಾಗುವಳಿ ಜಮೀನು ಸರ್ವೆಗೆ 7 ಜನ ಸರ್ವೆಯರ್ ನೇಮಿಸಲಾಗುತ್ತದೆ. ಅತಿ ಶೀಘ್ರದಲ್ಲಿ ಸರ್ವೆ ವರದಿ ಸಲ್ಲಿಸಲು ಕ್ರಮ ಕೈಗೊಳ್ಳಲಾಗುವುದು.
– ನಾರಾಯಣಸ್ವಾಮಿ, ಭೂ ಮಾಪನಾ ಇಲಾಖೆ ಸಹಾಯಕ ನಿರ್ದೇಶಕ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.