ಶುಕ್ರವಾರ, ಏಪ್ರಿಲ್ 23, 2021
24 °C

ಕೋವಿಡ್‌ ಎರಡನೇ ಅಲೆ; ಜನರ ನಿರ್ಲಕ್ಷ್ಯಕ್ಕೆ ತಾ.ಪಂ ಕಳವಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಕೋವಿಡ್ ಎರಡನೇ ಹಂತದ ಅಲೆ ಹೆಚ್ಚುತ್ತಿದ್ದರೂ ಬಹುತೇಕ ಜನರು ಕೋವಿಡ್‌ ನಿರ್ಲಕ್ಷಿಸುತ್ತಿದ್ದಾರೆ ಎಂದು ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆ ಕಳವಳ ವ್ಯಕ್ತಪಡಿಸಿತು.

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಮಾತನಾಡಿದ ಆರೋಗ್ಯಾಧಿಕಾರಿ ಚಂದ್ರಶೇಖರ್‌, ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣಗಳು ಗಣನೀಯವಾಗಿ ಹೆಚ್ಚಾಗುತ್ತಿವೆ. ಹಲವು ತಿಂಗಳುಗಳಿಂದ  98 ಪ್ರಕರಣಗಳು ದಾಖಲಾಗಿದ್ದವು. ಏಪ್ರಿಲ್ ಮೊದಲ ವಾರವೇ 90 ಪ್ರಕರಣಗಳು  ಪತ್ತೆಯಾಗಿವೆ. ಸೋಂಕು ಹರಡುವುದನ್ನು ತಡೆಯಲು ಆರೋಗ್ಯ ಇಲಾಖೆ ಜತೆ ಎಲ್ಲರೂ ಕೈಜೋಡಿಸಬೇಕು. ತಾಲ್ಲೂಕಿನಲ್ಲೂ ವೈದ್ಯರ ಕೊರತೆ ಇದೆ. ಅಗತ್ಯ ವೈದ್ಯರನ್ನು ನೇಮಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದರು.

ಲಸಿಕೆ ಹಾಕಲು ಆರೋಗ್ಯ ಇಲಾಖೆ ಸಿಬ್ಬಂದಿ ಪರದಾಡಬೇಕಾದ ಪರಿಸ್ಥಿತಿ ಇದೆ. ಲಸಿಕೆ ಹಾಕಿಸಿಕೊಳ್ಳಲು ಸ್ವಯಂ ಇಚ್ಚೆಯಿಂದ ಯಾರೂ ಮುಂದೆ ಬರುತ್ತಿಲ್ಲ. ಒತ್ತಾಯ ಪೂರ್ವಕವಾಗಿ ಹಾಕಬೇಕಿದೆ. ಲಸಿಕೆ ಹಾಕಿಸಲು, ಕೋವಿಡ್‌ ಸುರಕ್ಷತಾ ನಿಯಮಗಳನ್ನು ಪಾಲಿಸಲು ಜನಪ್ರತಿನಿಧಿಗಳು ತಮ್ಮ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಶ್ರಮಿಸಬೇಕು. ಜಾಗೃತಿ ಮೂಡಿಸಬೇಕು ಎಂದು ಕೋರಿದರು. ಕೋವಿಡ್‌ ಹೆಚ್ಚಳ ಕುರಿತು ಎಲ್ಲ ಸದಸ್ಯರೂ ಆತಂಕ ವ್ಯಕ್ತಪಡಿಸಿದರು.

ಹಲವು ರೈತರಿಗೆ ಮೆಕ್ಕೆ ಜೋಳದ ಹಾನಿಗೆ ಪರಿಹಾರ ಬಂದಿಲ್ಲ. ಪರಿಹಾರ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು. ಕೃಷಿ ಕಿಸಾನ್ ಸಮ್ಮಾನ್ ಯೋಜನೆ ಅಡಿ 29 ಸಾವಿರ ರೈತರಿದ್ದರೂ  ಕೇವಲ 22 ಸಾವಿರ ರೈತರಿಗೆ ಹಣ ಸಂದಾಯವಾಗಿದೆ. ಉಳಿದವರಿಗೆ ಸಂದಾಯ ವಾಗಿಲ್ಲ ಎಂದು ಸದಸ್ಯರು ಸಭೆಯ ಗಮನಕ್ಕೆ ತಂದರು. ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಲ್ಲೂ ಹಣ ಸರಿಯಾಗಿ ವಿತರಣೆಯಾಗುತ್ತಿಲ್ಲ ಎಂದು ಕೆಲವು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. 

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಗೀತಾ ರಾಜಶೇಖರ್, ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಜಿ.ಶ್ರೀಧರ್, ಇ.ಒ.ಡಾ.ಕಲ್ಲಪ್ಪ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು