ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡಿಗರ ಕಾವ್ಯದ ಕರ್ತೃತ್ವ ಶಕ್ತಿ ಅನಾವರಣ

‘ಕಾವ್ಯಾಕಾಶದ ಸಂಕ್ರಾಂತಿ ಸೂರ್ಯ’ ಕುರಿತು ಡಾ.ಶಂಕರಶಾಸ್ತ್ರಿ ಹೇಳಿಕೆ
Last Updated 13 ನವೆಂಬರ್ 2021, 5:02 IST
ಅಕ್ಷರ ಗಾತ್ರ

ಸಾಗರ: ‘ಕಾವ್ಯಾಕಾಶದ ಸಂಕ್ರಾಂತಿ ಸೂರ್ಯ’ ಕೃತಿಯು ಅಡಿಗರ ಕಾವ್ಯದ ಕರ್ತೃತ್ವ ಶಕ್ತಿಯನ್ನು ಅನಾವರಣಗೊಳಿಸುವ ವಿಶಿಷ್ಟ ಕೃತಿಯಾಗಿದೆ ಎಂದು ಅಧ್ಯಾಪಕ ಡಾ. ಶಂಕರ ಶಾಸ್ತ್ರಿ ಹೇಳಿದರು.

ಇಲ್ಲಿನ ಸರ್ಕಾರಿ ಪದವಿಪೂರ್ವ ಬಾಲಕಿಯರ ಕಾಲೇಜಿನಲ್ಲಿ ಪರಸ್ಪರ ಸಾಹಿತ್ಯ ವೇದಿಕೆ ಶುಕ್ರವಾರ ಏರ್ಪಡಿಸಿದ್ದ ‘ಹೊಸ ಓದು ಮಾಲಿಕೆ’ ಕಾರ್ಯಕ್ರಮದಲ್ಲಿ ಲೇಖಕ ವಿ. ಗಣೇಶ್ ಅವರು ಸಂಪಾದಿಸಿರುವ ‘ಕಾವ್ಯಾಕಾಶದ ಸಂಕ್ರಾಂತಿ ಸೂರ್ಯ’ ಕೃತಿ ಕುರಿತು ಅವರು ಮಾತನಾಡಿದರು.

‘ಅಡಿಗರ ಕಾವ್ಯದ ಒಟ್ಟೂ ಆಶಯವನ್ನು ಸಮರ್ಥವಾಗಿ ಬಿಂಬಿಸುವ ಲೇಖನಗಳನ್ನು ಒಳಗೊಂಡಿರುವ ಕಾವ್ಯಾಕಾಶದ ಸಂಕ್ರಾಂತಿ ಸೂರ್ಯ ಕೃತಿಯಲ್ಲಿ ಒಂದಕ್ಕೊಂದು ಭಿನ್ನ ದೃಷ್ಟಿಕೋನದ ಬರಹಗಳು ಇರುವುದು ಕೃತಿಗೆ ವಿಭಿನ್ನ ಆಯಾಮ ಒದಗಿಸಿದೆ’ ಎಂದು ಅವರು ವಿಶ್ಲೇಷಿಸಿದರು.

‘ಅಡಿಗರು ಪುರಾಣವನ್ನು ವರ್ತಮಾನಕ್ಕೆ ಪರಿಣಾಮಕಾರಿಯಾಗಿ ಒಗ್ಗಿಸಿದ ಬಗೆ, ಪ್ರತಿಮೆಗಳನ್ನು ಪ್ರಭಾವಶಾಲಿಯಾಗಿ ಕಟ್ಟಿದ ರೀತಿ, ಕಾವ್ಯದ ಕುರಿತು ಅಡಿಗರಿಗೆ ಇದ್ದ ತುಡಿತದ ಸಮರ್ಥ ಚಿತ್ರಣವನ್ನು ಕೃತಿಯಲ್ಲಿನ ವಿವಿಧ ಲೇಖನಗಳು ಕಟ್ಟಿಕೊಡುತ್ತಲೇ ಅಡಿಗರು ಸಂಖ್ಯೆಗಿಂತ ಸತ್ವಕ್ಕೆ ಹೆಚ್ಚು ಮಹತ್ವ ಕೊಟ್ಟ ಕವಿ ಎಂಬುದನ್ನು ಕೃತಿ ಸಾಬೀತುಪಡಿಸುತ್ತದೆ’ ಎಂದು ಅವರು ವಿವರಿಸಿದರು.

ಉಪನ್ಯಾಸಕಿ ವೃಂದಾ ಹೆಗಡೆ, ‘ಒಂದು ಕೃತಿಯನ್ನು ಸ್ತ್ರೀವಾದಿ ನೆಲೆಯಲ್ಲಿ ಓದುವುದು ಹೊಸ ಓದು ಅನಿಸಿಕೊಳ್ಳುತ್ತದೆ. ಆದರೆ ಈ ನೆಲೆಯಲ್ಲಿ ಅಡಿಗರ ಕವಿತೆಗಳನ್ನು ವಿಮರ್ಶಿಸಿದ ಲೇಖನಗಳ ಕೊರತೆ ಇರುವುದು ಕೃತಿಯ ಒಂದು ಮಿತಿಯಾಗಿದೆ’ ಎಂದು ಅಭಿಪ್ರಾಯಪಟ್ಟರು.

ನಿವೃತ್ತ ಉಪನ್ಯಾಸಕ ಜೋಸೆಫ್ ಗೊನ್ಸಾಲ್ವಿಸ್, ‘ಹೊಸತನದ ಕಲ್ಪನೆ ಅಡಿಗರ ಕಾವ್ಯ ಶಕ್ತಿಯ ಅಂತಃಸತ್ವ ಎಂಬುದನ್ನು ಕೃತಿ ಹಿಡಿದಿಟ್ಟಿದೆ. ಸಾಗರಕ್ಕೂ ಅಡಿಗರಿಗೂ ಇದ್ದ ಅವಿನಾಭಾವ ಸಂಬಂಧದ ಕುರಿತ ಲೇಖನಗಳೂ ಇರುವ ಕಾರಣಕ್ಕೆ ಕೃತಿ ಈ ನೆಲಕ್ಕೆ ಹತ್ತಿರವಾಗಿದೆ’ ಎಂದರು.

ಲೇಖಕ ರಾಧಾಕೃಷ್ಣ ಬಂದಗದ್ದೆ, ‘ಅಡಿಗರ ಯಾವ ಮೋಹನ ಮುರಳಿ ಕರೆಯಿತು ಕಾವ್ಯವನ್ನು ತಾಳಮದ್ದಲೆಗೆ ಅಳವಡಿಸುವ ಪ್ರಕ್ರಿಯೆ ನಡೆಯುತ್ತಿದೆ. ಈ ಮೂಲಕ ಒಂದು ಶತಮಾನ ದಾಟಿದ ನಂತರವೂ ಅಡಿಗರ ಕಾವ್ಯ ತನ್ನ ಪ್ರಭಾವಳಿಯನ್ನು ಉಳಿಸಿಕೊಂಡಿದೆ ಎಂಬುದು ಮನದಟ್ಟಾಗುವ ಜೊತೆಗೆ ಅವರ ಕಾವ್ಯಕ್ಕಿರುವ ವಿವಿಧ ಆಯಾಮಗಳ ಪರಿಚಯವೂ ಆಗುತ್ತದೆ’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಸಾಹಿತಿ ನಾ.ಡಿಸೋಜ, ‘ಚಾಲ್ತಿಯಲ್ಲಿರುವ ಧಾಟಿಯಲ್ಲೇ ಕಾವ್ಯ ರಚಿಸುವುದು ನನ್ನ ಪಾಲಿಗೆ ನರಕ ಎಂದು ಹೇಳುವ ಮೂಲಕ ಅಡಿಗರು ಕನ್ನಡದಲ್ಲಿ ಹೊಸ ಕಾವ್ಯ ಪರಂಪರೆಗೆ ನಾಂದಿ ಹಾಡಿದರು. ನವ್ಯ ಕವಿತೆಯ ಜೊತೆಗೆ ನವ್ಯ ವಿಮರ್ಶೆ ಕೂಡ ಆರಂಭವಾಗಿದ್ದು ಅಡಿಗರಿಂದಲೇ’ ಎಂದರು.

ಪರಸ್ಪರ ಸಾಹಿತ್ಯ ವೇದಿಕೆಯ ಡಾ.ಸರ್ಫ್ರಾಜ್ ಚಂದ್ರಗುತ್ತಿ, ಲೇಖಕ ವಿ. ಗಣೇಶ್ ಇದ್ದರು. ವಕೀಲರಾದ ಟಿ.ಬಿ. ಮಂಜುನಾಥ ಶೆಟ್ಟಿ, ರೂಪೇಶ್, ಡಾ. ಗಂಗಾಧರ ಮಾತನಾಡಿದರು. ಭದ್ರಪ್ಪ ಗೌಡರು ಅಡಿಗರ ಕವಿತೆಗಳನ್ನು ಹಾಡಿದರು. ಎಸ್.ಎಂ. ಗಣಪತಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT