ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉರಗನಹಳ್ಳಿ ದೊಡ್ಡಕೆರೆ ಏರಿ ಕುಸಿತ: ಆತಂಕ

ಹಲವು ಗ್ರಾಮಗಳಿಗೆ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ
Last Updated 17 ಜುಲೈ 2022, 3:05 IST
ಅಕ್ಷರ ಗಾತ್ರ

ಸೊರಬ: ತಾಲ್ಲೂಕಿನಾದ್ಯಂತ ಸುರಿಯುತ್ತಿರುವ ಧಾರಾಕಾರ ಮಳೆಗೆ ತಾಲ್ಲೂಕಿನ ಉರಗನಹಳ್ಳಿ, ದೇವತಿಕೊಪ್ಪ ಗ್ರಾಮದ ದೊಡ್ಡಕೆರೆ ಏರಿ ಕುಸಿದಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ.

ದೊಡ್ಡಕೆರೆ ಏರಿ ಕುಸಿದಿರುವುದರಿಂದಸಮೀಪದ ಗ್ರಾಮಗಳು ಸೇರಿ ಶಿಕಾರಿಪುರ ತಾಲ್ಲೂಕಿನ ಗಡಿಭಾಗದ ಗ್ರಾಮಗಳಿಗೆ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ.

ಏಷ್ಯಾ ಖಂಡದಲ್ಲಿಯೇ ಅತಿ ಹೆಚ್ಚು ಕೆರೆಗಳನ್ನು ತಾಲ್ಲೂಕು ಹೊಂದಿದ್ದು, ಸುಮಾರು 1,186ಕ್ಕೂ ಅಧಿಕ ಕೆರೆಗಳಿವೆ. ತಾಲ್ಲೂಕಿನ ಕುಬಟೂರು ಗ್ರಾಮದ ದೊಡ್ಡಕೆರೆಯನ್ನು ಹೊರತುಪಡಿಸಿದರೆ ಭೂ ವಿಸ್ತೀರ್ಣದಲ್ಲಿ ಎರಡನೇ ಸ್ಥಾನದಲ್ಲಿರುವ ಉರಗನಹಳ್ಳಿ ಗ್ರಾಮದ ದೊಡ್ಡಕೆರೆ 103.33 ಎಕರೆ ವಿಸ್ತೀರ್ಣ ಹೊಂದಿದೆ. ವರುಣನ ಆರ್ಭಟ ಮುಂದುವರಿದ ಪರಿಣಾಮ ಕೆರೆಯಲ್ಲಿ ನೀರು ಹೆಚ್ಚಳಗೊಂಡು ರಸ್ತೆ ಕುಸಿಯುವ ಆತಂಕ ಎದುರಾಗಿದೆ.

ಅಧಿಕ ಮಳೆಗೆ ಕೆರೆಯ ಒಡಲಿನಲ್ಲಿ ನೀರು ಹೆಚ್ಚಳಗೊಳ್ಳುತ್ತಿರುವುದರಿಂದ ಕೆರೆ ಏರಿ ಒಡೆದರೆ ಕೆರೆ ಅಚ್ಚುಕಟ್ಟು ಪ್ರದೇಶದ ಕೃಷಿ ಭೂಮಿ ಜಲಾವೃತಗೊಳ್ಳುವುದಲ್ಲದೇ, ಸಮೀಪದ ದೇವತಿಕೊಪ್ಪ, ಉರಗನಹಳ್ಳಿ, ಚಿಕ್ಕಾವಲಿ, ಹಿರಿಯಾವಲಿ, ಶಿಕಾರಿಪುರ ತಾಲ್ಲೂಕಿನ ಸಹಸ್ರವಳ್ಳಿ ಗ್ರಾಮ ಸಂಪೂರ್ಣ ಮುಳುಗಡೆಯಾಗುವ ಭೀತಿ ಎದುರಾಗಿದೆ. ಜತೆಗೆ ಜನಜೀವನ ಅಸ್ತವ್ಯಸ್ತಗೊಳ್ಳುವ ಭೀತಿ ಗ್ರಾಮಸ್ಥರನ್ನು ಕಾಡುತ್ತಿದೆ.

ತಾಲ್ಲೂಕಿನಲ್ಲಿ 15 ದಿನಗಳಿಂದ ಎಡಬಿಡದೇ ಮಳೆ ಸುರಿಯುತ್ತಿದೆ. ಗುಡ್ಡ ಪ್ರದೇಶದ ನೀರು ಕೆರೆಯಲ್ಲಿ ಅಧಿಕ ಪ್ರಮಾಣದಲ್ಲಿ ಸಂಗ್ರಹಗೊಳ್ಳುವುದರಿಂದ ಹಿನ್ನೀರು ಜಾಸ್ತಿಯಾಗಿ ಕೆರೆಯ ಏರಿ ಒಡೆಯುವ ಸಂಭವ ಇದೆ. 60 ವರ್ಷಗಳ ಹಿಂದೆ ಇದೇ ರೀತಿ ಮಳೆ ಹೆಚ್ಚಾಗಿ ಕೆರೆ ಏರಿ ಒಡೆದ ಪರಿಣಾಮ ಕೆರೆಯ ನೀರು ಅಡಿಕೆ, ಭತ್ತ ಹಾಗೂ ಶುಂಠಿ ಜಮೀನುಗಳಿಗೆ ನುಗ್ಗಿ ಅಪಾರ ಪ್ರಮಾಣದ ನಷ್ಟ ಉಂಟಾಗಿತ್ತು ಎಂದು ಶ್ರೀಕಾಂತ್ ದೇವತಿಕೊಪ್ಪ ವಿವರಿಸಿದರು.

ಪ್ರತಿ ಬಾರಿ ಮಳೆಗಾಲ ಸಂದರ್ಭದಲ್ಲಿ ಅತಿವೃಷ್ಟಿ ಸಂಭವಿಸಿ ಬೆಳೆಹಾನಿ, ಮನೆಹಾನಿ ಹಾಗೂ ಕೆರೆಏರಿ ಒಡೆದು ಜಮೀನುಗಳಿಗೆ ನೀರು ನುಗ್ಗುವುದು ಸಾಮಾನ್ಯ. ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಶಾಶ್ವತ ಕ್ರಮಕ್ಕೆ ಮುಂದಾಗಿಲ್ಲ. ಇನ್ನಾದರೂ ತಾಲ್ಲೂಕು ಆಡಳಿತ ಪರಿಹಾರ ಮಾರ್ಗಗಳನ್ನು ಕಂಡುಕೊಳ್ಳಬೇಕು ಎಂಬುದು ಗ್ರಾಮಸ್ಥರ ಒತ್ತಾಯ.

ಕೆರೆ ಏರಿ ಬಿರುಕುಗೊಂಡಿರುವ ಬಗ್ಗೆ ಗ್ರಾಮಸ್ಥರು ಸಂಬಂಧಪಟ್ಟ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿರಲಿಲ್ಲ.

ಮೂರು ದಿನಗಳಿಂದ ಮಳೆ ಹೆಚ್ಚಾಗುತ್ತಿದ್ದು, ಮತ್ತಷ್ಟು ಕೆರೆಏರಿ ಬಿರುಕುಗೊಳ್ಳುತ್ತಿರುವ ಬಗ್ಗೆ ಗ್ರಾಮದ ಯುವಕರು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ನಂತರ ಎಚ್ಚೆತ್ತುಕೊಂಡ ಅಧಿಕಾರಿಗಳು ಶನಿವಾರ ಸ್ಥಳಕ್ಕೆ ಭೇಟಿ ನೀಡಿ
ಪರಿಶೀಲಿಸಿದ್ದಾರೆ.

***

ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ಪರಿಶೀಲಿಸಲಾಗಿದೆ. ಮಳೆ ಕಡಿಮೆ ನಂತರ ಕೆರೆಏರಿ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು. ಈ ಮಾರ್ಗದಲ್ಲಿ ಭಾರಿ ವಾಹನಗಳ ಸಂಚಾರ ನಿಷೇಧಿಸಲಾಗಿದೆ.

–ಶೋಭಾಲಕ್ಷ್ಮೀ, ತಹಶೀಲ್ದಾರ್

ಕೆರೆ ಏರಿ ಕುಸಿತಗೊಂಡು ವಾರ ಕಳೆದರೂ ಅಧಿಕಾರಿಗಳು ಭೇಟಿ ನೀಡಿಲ್ಲ. ಮಳೆ ಹೀಗೆಯೇ ಮುಂದುವರಿದರೆ ಎರಡು ದಿನದಲ್ಲಿ ಏರಿ ಸಂಪೂರ್ಣ ಒಡೆದು ಹೋಗಲಿದೆ.

–ನಿರಂಜನಮೂರ್ತಿ, ದೇವತಿಕೊಪ್ಪ ಗ್ರಾಮಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT