ಗುರುವಾರ , ಜುಲೈ 7, 2022
23 °C
ಸನ್ಮಾನ ಕಾರ್ಯಕ್ರಮ

ಲಸಿಕೆ: ವಿಜ್ಞಾನಿಗಳ ಸಾಧನೆ ಸ್ಮರಣೀಯ- ಶಾಸಕ ಎಚ್. ಹಾಲಪ್ಪ ಹರತಾಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಾಗರ: ಪ್ರಪಂಚದ ವಿವಿಧ ದೇಶಗಳಲ್ಲಿ ಜನರು ಕೋವಿಡ್‌ನಿಂದ ತತ್ತರಿಸಿದ ವೇಳೆಯಲ್ಲೇ 9 ತಿಂಗಳೊಳಗೆ ಕೋವಿಡ್ ಪ್ರತಿಬಂಧಕ ಲಸಿಕೆ ಕಂಡುಹಿಡಿದ ಭಾರತೀಯ ವಿಜ್ಞಾನಿಗಳ ಸಾಧನೆ ಅತ್ಯಂತ ಸ್ಮರಣೀಯ ಎಂದು ಶಾಸಕ ಎಚ್.ಹಾಲಪ್ಪ ಹರತಾಳು ಹೇಳಿದರು.

ಇಲ್ಲಿನ ದೇವರಾಜ ಅರಸು ಸಭಾಭವನದಲ್ಲಿ ಆರೋಗ್ಯ ಇಲಾಖೆ ನೌಕರರ ಸಂಘ ಗುರುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಲಸಿಕಾ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾಮಾಜಿಕ ಸೇವಾ ಕಾರ್ಯಕರ್ತರನ್ನು, ಆರೋಗ್ಯ ಇಲಾಖೆ ನೌಕರರನ್ನು ಸನ್ಮಾನಿಸಿ ಅವರು ಮಾತನಾಡಿದರು.

ವಿಜ್ಞಾನಿಗಳ ಸಾಧನೆಯ ಜೊತೆಗೆ ಸಮರ್ಥ ರಾಜಕೀಯ ನಾಯಕತ್ವ ಕೂಡ ದೇಶಕ್ಕೆ ದೊರಕಿದ್ದರಿಂದ ಉಚಿತವಾಗಿ ಭಾರತದ ನೂರು ಕೋಟಿ ಪ್ರಜೆಗಳಿಗೆ ಕೋವಿಡ್ ಪ್ರತಿಬಂಧಕ ಲಸಿಕೆ ನೀಡಲು ಸಾಧ್ಯವಾಗಿದೆ. ಇದೊಂದು ಅಸಮಾನ್ಯವಾದ ಸಾಧನೆ ಎಂದು ಅಭಿಪ್ರಾಯಪಟ್ಟರು.

‘ದೇಶದಲ್ಲಿ ಈ ಹಿಂದೆ ಸಿಡುಬು, ಪೋಲಿಯೊ ಬಂದಾಗ ವ್ಯಾಪಕ ಪ್ರಮಾಣದಲ್ಲಿ ಲಸಿಕೆ ನೀಡಲಾಗಿತ್ತು. ಆದರೆ ಕೋವಿಡ್‌ನಿಂದ ಆದಷ್ಟು ಭೀಕರ ಪರಿಣಾಮ ಹಿಂದಿನ ಸಂದರ್ಭಗಳಲ್ಲಿ ಆಗಿರಲಿಲ್ಲ ಎಂಬುದನ್ನು ನಾವು ಮರೆಯುವಂತಿಲ್ಲ. ಲಸಿಕಾ ಅಭಿಯಾನ ಯಶಸ್ವಿಯಾಗಿ ನಡೆಯಲು ಸಹಕರಿಸಿದವರನ್ನು ನಾವು ಸ್ಮರಿಸಬೇಕು’ ಎಂದರು.

ಲಸಿಕಾ ಸಂಯೋಜಕ ಮ.ಸ. ನಂಜುಂಡಸ್ವಾಮಿ, ‘ಲಸಿಕೆ ಕೊರತೆ ಇದ್ದ ಸಂದರ್ಭದಲ್ಲೂ ಯಾವುದೇ ಗೊಂದಲವಿಲ್ಲದಂತೆ ಲಸಿಕೆ ವಿತರಿಸಿದ ಶ್ರೇಯಸ್ಸು ಇಲ್ಲಿನ ಲಸಿಕಾ ಕೇಂದ್ರಕ್ಕೆ ಸಲ್ಲುತ್ತದೆ. ಪಕ್ಷ, ಜಾತಿ, ಧರ್ಮ ನೋಡದೆ ವಿವಿಧ ವರ್ಗಕ್ಕೆ ಸೇರಿದ ಕಾರ್ಯಕರ್ತರು ಸೇವಾ ಮನೋಭಾವದಿಂದ ಇಲ್ಲಿ ಕೆಲಸ ಮಾಡಿರುವುದರಿಂದ ಅದು ಸಾಧ್ಯವಾಗಿದೆ’ ಎಂದು ತಿಳಿಸಿದರು.

ಲಸಿಕೆ ಅಧಿಕಾರಿ ಡಾ.ವಾಸುದೇವ ಪ್ರಭು, ‘ತಾಲ್ಲೂಕಿನಲ್ಲಿ ಈವರೆಗೆ 2 ಲಕ್ಷ ಜನರು ಮೊದಲ ಹಾಗೂ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ. ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಅ.21ರಿಂದ 31ರವರೆಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿದೆ’ ಎಂದರು.

ಲಸಿಕೆ ಕೇಂದ್ರದಲ್ಲಿ ಸೇವೆ ಸಲ್ಲಿಸಿದ ಪಿ.ಆರ್. ಪ್ರಭಾಕರ ಶೆಟ್ಟಿ, ಮಾಲತಿ, ಪ್ರವೀಣ್ ರಾವ್, ರಾಮಚಂದ್ರ ಹೆಗಡೆ, ಮಹ್ಮದ್ ಜಿಕ್ರಿಯಾ, ಜಯರಾಮ್, ನಾಗರಾಜ್ ಅವರನ್ನು ಸನ್ಮಾನಿಸಲಾಯಿತು. ಸರ್ಕಾರಿ ಆಸ್ಪತ್ರೆಯ ಸರ್ಜನ್ ಡಾ. ಪ್ರಕಾಶ್ ಬೋಸ್ಲೆ ಇದ್ದರು. ಉದಯಕುಮಾರ್ ಕುಂಸಿ ಪ್ರಾರ್ಥಿಸಿದರು. ವೈ. ಮೋಹನ್ ಸ್ವಾಗತಿಸಿದರು. ಡಾ.ಸುಮಾ ವಂದಿಸಿದರು. ಜುಬೇದಾ ಅಲಿ ನಿರೂಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು