ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ತೀವ್ರತೆ ತಡೆಗೆ ಲಸಿಕೆಯ ಅಸ್ತ್ರ

10 ಲಕ್ಷ ದಾಟಿದ ಮೊದಲ ಡೋಸ್‌, ದಾಖಲೆ ಬರೆದ ಜಿಲ್ಲೆಯ ಸಾಧನೆ
Last Updated 26 ಸೆಪ್ಟೆಂಬರ್ 2021, 4:03 IST
ಅಕ್ಷರ ಗಾತ್ರ

ಶಿವಮೊಗ್ಗ: ಜಿಲ್ಲೆಯಲ್ಲಿ ಮೊದಲ ಡೋಸ್‌ ಕೋವಿಡ್‌ ಲಸಿಕೆ ಪಡೆದವರ ಸಂಖ್ಯೆ ಶನಿವಾರ 10 ಲಕ್ಷ ದಾಟುವ ಮೂಲಕ ಹೊಸ ದಾಖಲೆ ಮುಟ್ಟಿದೆ. ಈ ಸಾಧನೆ ಕೋವಿಡ್‌ ವಿರುದ್ಧದ ಹೋರಾಟಕ್ಕೆ ಮತ್ತಷ್ಟು ಶಕ್ತಿ ತುಂಬಿದೆ.

65 ಸಾವಿರ ಕಾಲೇಜು ಉಪನ್ಯಾಸಕರು, ವಿದ್ಯಾರ್ಥಿಗಳಲ್ಲಿ 60 ಸಾವಿರಕ್ಕೂ ಹೆಚ್ಚಿನ ಜನರಿಗೆ ಲಸಿಕೆ ನೀಡಲಾಗಿದೆ.

9 ಖಾಸಗಿ ಆಸ್ಪತ್ರೆಗಳು ಸೇರಿನಿತ್ಯವೂ 160 ಕೇಂದ್ರಗಳಲ್ಲಿ ಲಸಿಕೆ ನೀಡಲಾಗುತ್ತಿದೆ. ಕೆಲವು ಭಾಗಗಳಲ್ಲಿ ಮೇಳಗಳನ್ನು ಮಾಡಿ ಸ್ಥಳದಲ್ಲೇ ಸಾರ್ವಜನಿಕರಿಗೆ ಲಸಿಕೆ ನೀಡಲಾಗುತ್ತಿದೆ.

ಎಷ್ಟೇ ಸುರಕ್ಷಾ ಕ್ರಮಗಳನ್ನು ಕೈಗೊಂಡರೂ ಸಮುದಾಯದ ಮಧ್ಯೆ ಕೊರೊನಾ ವೈರಸ್‌ ಹರಡುವುದನ್ನು ತಡೆಯಲು ಸಾಧ್ಯವಾಗಿರಲಿಲ್ಲ. ಎರಡನೇ ಅಲೆಯಲ್ಲಿ ಸಾಕಷ್ಟು ಜನರು ಕೋವಿಡ್‌ನಿಂದ ಬಳಲಿದರು. ಅಪಾರ ಸಾವು–ನೋವುಗಳು ಜನರನ್ನು ತಲ್ಲಣಗೊಳಿಸಿದವು. ಇಂತಹ ಸಮಯದಲ್ಲಿ ಸಾಕಷ್ಟು ಜನರಿಗೆ ಲಸಿಕೆ ನೀಡುವುದೊಂದೇ ಕೋವಿಡ್‌ ಹರಡುವಿಕೆಗೆ ಪರಿಹಾರ ಎಂಬ ನಿರ್ಧಾರಕ್ಕೆ ಬಂದ ಜಿಲ್ಲಾಡಳಿತ ಲಸಿಕಾ ಅಭಿಯಾನಕ್ಕೆ ವೇಗ ನೀಡಿತ್ತು.

ಜಿಲ್ಲಾ ಆರೋಗ್ಯ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆ, ಮೆಗ್ಗಾನ್ ಆಸ್ಪತ್ರೆ ಸಹಯೋಗದಲ್ಲಿ ಲಸಿಕಾ ವಿತರಣೆಯ ಕಾರ್ಯ ಚುರುಕಿನಿಂದ
ನಡೆಯುತ್ತಿದೆ. ಒಂದು ವೇಳೆ ಮೂರನೇ ಅಲೆ ಜಿಲ್ಲೆಗೆ ಬಂದರೂ ಎರಡನೇ ಅಲೆಯಷ್ಟು ತೀವ್ರವಾಗಿರಲಾರದು ಎನ್ನುವುದು ಜಿಲ್ಲೆಯ ವೈದ್ಯರ ಅಭಿಮತ.

ಭರವಸೆ ಕ್ಷೀಣಗೊಳಿಸಿದ್ದ ಆರಂಭದ ಎಡವಟ್ಟುಗಳು:

ಜಿಲ್ಲೆಯಲ್ಲಿ ಲಸಿಕಾ ಅಭಿಯಾನ ಆರಂಭವಾದಾಗ ಸಾಕಷ್ಟು ಎಡವಟ್ಟುಗಳಾಗಿದ್ದವು. ಮೊದಲು ಸೀಮಿತ ಸ್ಥಳಗಳಲ್ಲಿ ಲಸಿಕೆ ನೀಡಲಾಗುತ್ತಿತ್ತು. ಜನರು ಟೋಕನ್‌ ಪಡೆದು ದಿನವಿಡಿ ಸರದಿಯಲ್ಲಿ ನಿಂತು ಲಸಿಕೆ ಪಡೆಯಬೇಕಿತ್ತು. ಮೊದಲು 60 ವರ್ಷ ಮೇಲ್ಪಟ್ಟವರಿಗೆ ನೀಡಲಾಯಿತು. ನಂತರ 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಆರಂಭವಾಯಿತು. ಈ ಮಧ್ಯೆ ಸರ್ಕಾರ ಯಾವುದೇ ಪೂರ್ವಸಿದ್ಧತೆ ಮಾಡಿಕೊಳ್ಳದೆ, ದಿಢೀರನೆ 18 ವರ್ಷ ಮೇಲ್ಪಟ್ಟವರಿಗೂ ಲಸಿಕೆ ಪಡೆಯಲು ಅವಕಾಶ ಮಾಡಿಕೊಟ್ಟಿತು. ಆಗ ಶುರುವಾದ ಸಮಸ್ಯೆಗೆ ಜನರು ಹೈರಾಣಾದರು. ನಿತ್ಯವೂ ಲಸಿಕಾ ಕೇಂದ್ರಗಳ ಮುಂದೆ ಜನಜಂಗುಳಿ ಕಾಣತೊಡಗಿತು. ಸರ್ಕಾರ, ಜಿಲ್ಲಾಡಳಿತಕ್ಕೆ ಜನರು ಹಿಡಿಶಾಪ ಹಾಕಿದ್ದರು. ಈ ಮಧ್ಯೆ ಎರಡನೇ ಡೋಸ್‌ ಲಸಿಕೆ ಪಡೆಯುವರಿಗೂ ತೊಂದರೆಯಾಯಿತು.
ಕೇಂದ್ರ ಸರ್ಕಾರ ಎರಡನೇ ಡೋಸ್‌ ಲಸಿಕೆಯ ಅಂತರ 6 ವಾರಗಳಿಂದ 12 ವಾರಗಳಿಗೆ ಹೆಚ್ಚಿಸಿದ ಕಾರಣ ಮತ್ತೆ ಗೊಂದಲವಾಗಿತ್ತು.

ಖಾಸಗಿ ಆಸ್ಪತ್ರೆಗಳಲ್ಲಿ ಅಧಿಕ ಶುಲ್ಕ:

ಈ ಮಧ್ಯೆ ಖಾಸಗಿ ಆಸ್ಪತ್ರೆಗಳಲ್ಲೂ ಲಸಿಕೆ ವಿತರಣೆಗೆ ಅವಕಾಶ ಮಾಡಿಕೊಡಲಾಯಿತು. ಒಂದು ಡೋಸ್‌ ಲಸಿಕೆಗೆ ₹ 1 ಸಾವಿರದವರೆಗೂ ಮಾರಾಟ ಮಾಡಲಾಯಿತು.

ಲಸಿಕೆ ಕೊರತೆ ವಿರುದ್ಧ ಕಾಂಗ್ರೆಸ್, ಜೆಡಿಎಸ್‌ ಸೇರಿ ವಿವಿಧ
ಸಂಘಟನೆಗಳು ಪ್ರತಿಭಟನೆಯನ್ನೂ ನಡೆಸಿದ್ದವು. ವಿವಿಧ ಪಕ್ಷಗಳ ಮುಖಂಡರು, ಕಾರ್ಯಕರ್ತರು ಚುನಾವಣೆಗಳಲ್ಲಿ ಕರೆತರುವ ಮಾದರಿಯಲ್ಲಿ ವಾಹನಗಳ ಮೂಲಕ ಜನರನ್ನು ಕರೆತಂದು ಲಸಿಕೆ ಕೊಡಿಸಲು ಆರಂಭಿಸಿದ್ದರು. ಇಂತಹ ಎಲ್ಲ ಅಡತಡೆ ದಾಟಿ ಲಸಿಕಾ ಅಭಿಯಾನ ಗುರಿಮುಟ್ಟುವತ್ತ ಸಾಗಿದೆ.

‘ಎರಡನೇ ಡೋಸ್‌ ಲಸಿಕೆ ಪಡೆಯಿರಿ’

ಜಿಲ್ಲೆಯಲ್ಲಿ 18.50 ಲಕ್ಷ ಜನಸಂಖ್ಯೆ ಇದೆ. 18 ವರ್ಷ ಮೇಲ್ಪಟ್ಟ ಅಂದರೆ, ನಿಯಮದ ಪ್ರಕಾರ ಲಸಿಕೆ ಪಡೆಯಲು ಅರ್ಹರಾದವರ ಸಂಖ್ಯೆ 13,27,340 ಇದೆ. ಇದುವರೆಗೂ ಶೇ 76ರಷ್ಟು ಜನರು ಮೊದಲ ಡೋಸ್‌ ಪಡೆದಿದ್ದಾರೆ. ಕೋವಿಶೀಲ್ಡ್‌ ಪಡೆದು 84 ದಿನಗಳು, ಕೋವ್ಯಾಕ್ಸಿನ್ ಪಡೆದು 28 ದಿನಗಳು ಆದವರು ಸಮೀಪದ ಲಸಿಕಾ ಕೇಂದ್ರಕ್ಕೆ ಬಂದು ಎರಡನೇ ಡೋಸ್‌ ಪಡೆಯಬೇಕು.

–ಡಾ.ನಾಗರಾಜ ನಾಯ್ಕ,ಜಿಲ್ಲಾ ನೋಡಲ್‌ ಅಧಿಕಾರಿ, ಲಸಿಕಾ ಅಭಿಯಾನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT