ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿಜಯಾದೇವಿ ಅಲ್ಲಮನ ಚರಿತ್ರೆ ರೂಪಿಸಿದ ಸಂಶೋಧಕಿ’

Last Updated 21 ಮಾರ್ಚ್ 2022, 5:22 IST
ಅಕ್ಷರ ಗಾತ್ರ

ಶಿವಮೊಗ್ಗ: ಕರ್ನಾಟಕದ ಇತಿಹಾಸದಲ್ಲಿ ಅಲ್ಲಮನ ಚರಿತ್ರೆಯೊಂದನ್ನು ರೂಪಿಸಿದ ಬಹುದೊಡ್ಡ ಸಂಶೋಧಕಿ ವಿಜಯಾದೇವಿ ಎಂದು ಸಹ್ಯಾದ್ರಿ ಕಾಲೇಜಿನ ಡಾ.ಶುಭ ಮರವಂತೆ ಹೇಳಿದರು.

ಇಲ್ಲಿನ ವೆಂಕಟೇಶ ನಗರದ ಬಸವಕೇಂದ್ರದಲ್ಲಿ ಭಾನುವಾರ ಆಯೋಜಿಸಿದ್ದ ಪ್ರೊ.ವಿಜಯಾದೇವಿ ಅವರ ಅಲ್ಲಮಪ್ರಭುದೇವರು: ಚರಿತ್ರೆ, ಸಂಸ್ಕೃತಿ, ಜ್ಞಾನದ ಶೋಧಗಳು' ಸಂಶೋಧನಾ ಗ್ರಂಥ ಶರಣಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಪ್ರೊ.ವಿಜಯಾದೇವಿ ಅವರು ಅಲ್ಲಮಪ್ರಭು ಅವರ ಜೀವನವನ್ನೇ ಕಟ್ಟಿಕೊಡುವ ಪುಸ್ತಕವನ್ನು ಬರೆದಿದ್ದು, ಅದು ಅಲ್ಲಮನ ಬಗ್ಗೆ ಹೊಸ ವಿಚಾರಗಳನ್ನು ನೀಡುತ್ತದೆ. ಅಲ್ಲಮನ ಬಗ್ಗೆ ಸಾಕಷ್ಟು ಚರಿತ್ರೆಗಳು ರಚನೆಯಾಗಿವೆ. ಆದರೆ, ಇವರ ಪುಸ್ತಕದಲ್ಲಿ ಸಾಕಷ್ಟು ವಿಚಾರಗಳನ್ನು ಅತ್ಯಂತ ಉತ್ತಮವಾಗಿ ವಿಶ್ಲೇಷಿಸಿದ್ದಾರೆ’ ಎಂದು ಬಣ್ಣಿಸಿದರು.

‘ಈ ಚರಿತ್ರೆಯ ಮೂಲಕ ಅಲ್ಲಮನ ಧೀಮಂತಿಕೆ ಅರ್ಥವಾಗುತ್ತದೆ. ಆತನ ಭಾಷೆ, ಜ್ಞಾನದ ವಿಸ್ತಾರ ಎಲ್ಲವೂ ಭಿನ್ನವಾಗಿರುವುದು ಕಂಡುಬರುತ್ತದೆ. ಅವರ ವಚನ ಮತ್ತು ಸಾಹಿತ್ಯಿಕ ಕೊಡುಗೆಗಳು ಕನ್ನಡ ಸಾಹಿತ್ಯಕ್ಕೆ ಮೌಲ್ಯಯುತವಾಗಿವೆ’ ಎಂದರು.

‘ಅಲ್ಲಮ ಹಲವು ವಚನಗಳನ್ನು ಓದಿದಾಗ ಅವರಿಗೆ ಸಂಗೀತದ ಬಗ್ಗೆ ಬಹುದೊಡ್ಡ ಜ್ಞಾನವಿತ್ತು ಎನ್ನುವುದು ಗೊತ್ತಾಗುತ್ತದೆ. ವಚನಕಾರರಾದ ಬಸವಣ್ಣ, ಅಕ್ಕಮಹಾದೇವಿ, ಅಲ್ಲಮರನ್ನು ಸಮಾಜಮುಖಿಯಾದ ಸಾಕಷ್ಟು ಕಾರ್ಯಗಳನ್ನು ಮಾಡಿದ್ದಾರೆ’ ಎಂದು ತಿಳಿಸಿದರು.

ಪುಸ್ತಕದ ಲೇಖಕಿ ಪ್ರೊ.ವಿಜಯಾದೇವಿ ಮಾತನಾಡಿ, ‘ಅಲ್ಲಮನ ಬಗ್ಗೆ ಬರೆಯಬೇಕು ಎಂದುಕೊಂಡು ಹುಡುಕಾಟ ಆರಂಭಿಸಿದೆ. ಮೊದಲು ಸಂಶೋಧನೆಯನ್ನು ಆರಂಭಿಸಿದ್ದೇ ಶಾಸನಗಳ ಮೂಲಕ. ವಚನಕಾರರ ಬಗ್ಗೆ ಶಾಸನಗಳಲ್ಲಿ ತುಂಬ ಕಡಿಮೆ ಉಲ್ಲೇಖಗಳಿವೆ. ಆದರೂ, ಅಲ್ಲಮನ ಬಗ್ಗೆ ಕೆಲವು ಮಾಹಿತಿಗಳು ಲಭ್ಯವಾದವು. ಅಲ್ಲಮಪ್ರಭುದೇವರ ‘ಚರಿತ್ರೆ, ಸಂಸ್ಕೃತಿ ಮತ್ತು ಜ್ಞಾನ' ಹೀಗೆ ಮೂರು ವಿಚಾರಗಳಲ್ಲಿ ಕಂಡು ಬರೆದಿದ್ದೇನೆ’ ಎಂದರು.

ಬೆಕ್ಕಿನಕಲ್ಮಠದ ಡಾ.ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಬಸವಕೇಂದ್ರದ ಡಾ. ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ಕೃತಿಯನ್ನು ಲೋಕಾರ್ಪಣೆ ಮಾಡಿದರು. ಬಸವಕೇಂದ್ರದ ಅಧ್ಯಕ್ಷ ಜಿ. ಬೆನಕಪ್ಪ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರು ವಿಶ್ವ ವಿದ್ಯಾಲಯದ ಡಾ.ಕಾ.ವೆಂ. ಶ್ರೀನಿವಾಸಮೂರ್ತಿ ಕಾರ್ಯಕ್ರಮದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT