ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಟಿ ಔಷಧ ವಿತರಣೆಗೆ ಗ್ರಾಮಸ್ಥರ ವಿರೋಧ

Last Updated 16 ಸೆಪ್ಟೆಂಬರ್ 2020, 14:16 IST
ಅಕ್ಷರ ಗಾತ್ರ

ಸಾಗರ: ತಾಲ್ಲೂಕಿನ ನರಸೀಪುರ ಗ್ರಾಮದಲ್ಲಿ ನಾಟಿ ವೈದ್ಯ ನಾರಾಯಣಮೂರ್ತಿ ಅವರ ನಿಧನದ ನಂತರವೂ ಅವರ ಕುಟುಂಬದವರು ನಾಟಿ ಔಷಧ ವಿತರಿಸುತ್ತಿರುವುದಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದರು.

ಇಲ್ಲಿನ ತಾಲ್ಲೂಕು ಪಂಚಾಯಿತಿಯ ಸಾಮರ್ಥ್ಯ ಸೌಧದಲ್ಲಿ ಬುಧವಾರ ನಡೆದ ಅಧಿಕಾರಿಗಳ, ಗ್ರಾಮಸ್ಥರ ಸಮಾಲೋಚನಾ ಸಭೆಯಲ್ಲಿ ಈ ವಿಷಯ ಚರ್ಚೆಗೆ ಕಾರಣವಾಯಿತು.

ತಾಲ್ಲೂಕಿನ ನರಸೀಪುರ ಗ್ರಾಮದಲ್ಲಿ ನಾಟಿ ಔಷಧ ವಿತರಿಸುತ್ತಿರುವುದರಿಂದರಾಜ್ಯದ ಬೇರೆ ಬೇರೆ ಭಾಗಗಳಿಂದ ಗ್ರಾಮಕ್ಕೆ ಜನರು ಬರುತ್ತಿದ್ದು ಕೋವಿಡ್ ಸಂದರ್ಭದಲ್ಲಿ ಆತಂಕ ಎದುರಿಸುವಂತಾಗಿದೆ.ಔಷಧ ಪಡೆಯಲು ಬರುವವರು ಗ್ರಾಮವನ್ನು ಬಲಯ ಶೌಚಾಲಯ ಮಾಡಿಕೊಂಡಿದ್ದಾರೆ. ರೋಗಿಗಳ ಜೊತೆಗೆ ಮೋಜು ಮಸ್ತಿಗೆಂದು ಬರುವವರು ಕೂಡ ಇದ್ದಾರೆ. ಅಂತವರು ಮದ್ಯ, ಪ್ಲಾಸ್ಟಿಕ್ ಬಾಟಲಿಗಳನ್ನು ಗ್ರಾಮದ ಕೃಷಿಭೂಮಿಯಲ್ಲಿ ಎಸೆದು ಹೋಗುತ್ತಿದ್ದು. ಇದರ ತ್ಯಾಜ್ಯ ನಿರ್ವಹಣೆಯೆ ದೊಡ್ಡ ಸಮಸ್ಯೆಯಾಗಿದೆ ಎಂದು ಗ್ರಾಮಸ್ಥರು ದೂರಿದರು.

‘ಕ್ಯಾನ್ಸರ್‌ನಂತಹ ಮಾರಕ ಕಾಯಿಲೆಗೆ ಔಷಧಿ ಕೊಡುವುದಾಗಿ ನಾರಾಯಣಮೂರ್ತಿ ಕುಟುಂಬದವರು ಪ್ರಚಾರ ಮಾಡುತ್ತಿದ್ದಾರೆ. ಆದರೆ ನಮ್ಮೂರಿನಲ್ಲೇ ಹಲವರು ಕ್ಯಾನ್ಸರ್‌ನಿಂದ ಸಾವನ್ನಪ್ಪಿದ್ದಾರೆ. ಅಂತವರನ್ನು ಬದುಕಿಸಲು ಯಾಕೆ ಅವರಿಗೆ ಸಾಧ್ಯವಾಗಿಲ್ಲ’ ಎಂದು ಗ್ರಾಮಸ್ಥರು ಪ್ರಶ್ನಿಸಿದರು.

‘ನಾರಾಯಣಮೂರ್ತಿ ಕುಟುಂಬದವರು ಔಷಧ ಕೊಡುವುದಕ್ಕೆ ನಮ್ಮ ತಕರಾರು ಇಲ್ಲ. ಆದರೆ ಗ್ರಾಮದ ಹೊರಗೆ ಎಲ್ಲಿಯಾದರೂ ಔಷಧ ಕೊಡಲು ಸ್ಥಳ ವ್ಯವಸ್ಥೆ ಮಾಡಿಕೊಳ್ಳಲಿ. ಇಲ್ಲದಿದ್ದರೆ ಗ್ರಾಮದ 119 ಮನೆಯರು ಊರು ಬಿಟ್ಟು ಹೋಗಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ತಹಶೀಲ್ದಾರ್ ಚಂದ್ರಶೇಖರ್ ನಾಯ್ಕ್, ‘ತಾಲ್ಲೂಕಿನಲ್ಲಿ ಹಿಂದಿಗಿಂತ ಈಗ ಹೆಚ್ಚು ಕೋವಿಡ್ ಪ್ರಕರಣ ಹೆಚ್ಚುತ್ತಿದೆ. ಹೀಗಾಗಿ ಆನ್ ಲೈನ್ ಮೂಲಕ ಔಷಧ ಕಳುಹಿಸುವುದು ಸೂಕ್ತ. ಗ್ರಾಮದ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ಮುಖ್ಯ’ ಎಂದರು.

ನಾಟಿ ವೈದ್ಯ ನಾರಾಯಣಮೂರ್ತಿ ಅವರ ಪುತ್ರಿ ಶುಭಾ ನಾರಾಯಣ ಮೂರ್ತಿ, ‘ಈಗಾಗಲೇ ನಮ್ಮ ತಂದೆಯವರ ಹೆಸರಿನಲ್ಲಿ ಕೆಲವರು ನಕಲಿ ಔಷಧ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ರೋಗಿಗಳ ವಯಸ್ಸು, ರೋಗದ ಗುಣಲಕ್ಷಣ, ತೀವ್ರತೆ ಮೊದಲಾದ ಅಂಶಗಳನ್ನು ಪರಿಗಣಿಸಿ ಔಷಧ ನೀಡಬೇಕಾಗುವುದರಿಂದ ಆನ್‌‌ಲೈನ್ ಮೂಲಕ ಔಷಧ ವಿತರಿಸುವುದು ಕಷ್ಟವಾಗುತ್ತದೆ’ ಎಂದು ಹೇಳಿದರು.

ತಾಲ್ಲೂಕು ಪಂಚಾಯಿತಿ ಸದಸ್ಯೆ ಜ್ಯೋತಿ ಮುರಳೀಧರ್, ‘ಈಗಾಗಲೇ ಉಪವಿಭಾಗಾಧಿಕಾರಿ ಸಭೆ ನಡೆಸಿ ಕೋವಿಡ್ ಪರಿಸ್ಥಿತಿ ಮುಗಿಯುವವರೆಗೂ ಗ್ರಾಮದಲ್ಲಿ ಔಷಧ ವಿತರಿಸುವುದು ಬೇಡ ಎಂದು ಹೇಳಿರುವಾಗ ಮತ್ತೆ ಇದೇ ವಿಷಯಕ್ಕೆ ಸಂಬಂಧಪಟ್ಟಂತೆ ಗ್ರಾಮಸ್ಥರನ್ನು ಕರೆಸಿ ಸಭೆ ನಡೆಸುವುದು ಎಷ್ಟು ಸರಿ’ ಎಂದು ಪ್ರಶ್ನಿಸಿದರು.

ಒಂದು ಹಂತದ ಚರ್ಚೆಯ ನಂತರ ಸಭೆಗೆ ಬಂದ ಉಪವಿಭಾಗಾಧಿಕಾರಿ ಡಾ.ನಾಗರಾಜ್ ಎಲ್., ‘ತೀರಾ ತುರ್ತು ಇದ್ದವರಿಗೆ ಟೋಕನ್ ಪದ್ಧತಿ ಮೂಲಕ ಔಷಧ ವಿತರಿಸುವ ವ್ಯವಸ್ಥೆ ಮಾಡಿದರೆ ಗ್ರಾಮದಲ್ಲಿ ಜನ ಸಂದಣಿ ಉಂಟಾಗದಂತೆ ನೋಡಿಕೊಳ್ಳಬಹುದು. ನಿಗದಿತ ಸಮಯವನ್ನು ಇದಕ್ಕೆ ಮೀಸಲಿಡಿ’ ಎಂದು ಸಲಹೆ ನೀಡಿದರು.

ಈ ಸಲಹೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಗ್ರಾಮಸ್ಥರು ಸಭೆಯಿಂದ ಹೊರನಡೆದರು. ಯಾವುದೇ ಕಾರಣಕ್ಕೂ ನಾವು ನರಸೀಪುರದಲ್ಲಿ ಔಷಧ ನೀಡಲು ಅವಕಾಶ ನೀಡುವುದಿಲ್ಲ ಎಂದು ಗ್ರಾಮಸ್ಥರು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT