ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಲಿಕೆ ಆಡಳಿತದ ವಿರುದ್ಧ ಸ್ವಪಕ್ಷ ಸದಸ್ಯರ ಧ್ವನಿ !

ಅಧಿಕಾರಿಗಳ ನಿರ್ಲಕ್ಷ್ಯ, ಆಡಳಿತ ವೈಫಲ್ಯ, ಕಾಮಗಾರಿ ವಿಳಂಬದ ವಿರುದ್ಧ ಆಕ್ರೋಶ
Last Updated 7 ಮೇ 2022, 3:11 IST
ಅಕ್ಷರ ಗಾತ್ರ

ಶಿವಮೊಗ್ಗ: ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಆಡಳಿತ ಪಕ್ಷದ ವಿರುದ್ಧ ಸ್ವಪಕ್ಷದ ಸದಸ್ಯರೇ ಧ್ವನಿ ಎತ್ತಿದ ಪ್ರಸಂಗ ನಡೆಯಿತು.

ಸ್ಥಾಯಿ ಸಮಿತಿ ಅಧ್ಯಕ್ಷ ಧೀರರಾಜ್ ಹೊನ್ನವಿಲೆ, ‘ಕಂದಾಯ ಇಲಾಖೆಯ ಅಕ್ರಮಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. ಬೆಲೆ ಬಾಳುವ 12 ನಿವೇಶನಗಳನ್ನು ಅಕ್ರಮ ಖಾತೆ ಮಾಡಿರುವುದು ಬೆಳಕಿಗೆ ಬಂದಿದೆ. ಪಾಲಿಕೆ ಸದಸ್ಯರು ಪ್ರಕರಣವನ್ನು ಬೆಳಕಿಗೆ ತಂದ ನಂತರ ಖಾತೆ ಬ್ಲಾಕ್ ಮಾಡಲಾಗಿದೆ. ಕಂದಾಯ ಅಧಿಕಾರಿಗಳು ಯಾವುದೇ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಪಾಲಿಕೆಗೆ ಅಲೆದು ಅಲೆದು ಹೈರಾಣಾಗಿ ಕೆಲವರು ಪ್ರಾಣ ಕಳೆದುಕೊಂಡಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಸದಸ್ಯ ಆರ್.ಸಿ. ನಾಯ್ಕ್ ಮಾತನಾಡಿ, ‘ಪಾಲಿಕೆಯ ನಿಜವಾದ ಸುಪ್ರೀಂ ಯಾರು ಎಂಬುದೇ ಗೊತ್ತಾಗುತ್ತಿಲ್ಲ. ಆಯುಕ್ತರು ಆದೇಶ ನೀಡಿದ್ದರೂ ಪಾಲಿಕೆ ಅಡ್ಮಿನ್ ಅಡ್ಡಗಾಲು ಹಾಕುತ್ತಿದ್ದಾರೆ. ಪಾಲಿಕೆ ವಕೀಲರು ಪಾಲಿಕೆ ಆಸ್ತಿ ಉಳಿಸಲು ಆಸಕ್ತಿ ವಹಿಸುತ್ತಿಲ್ಲ’ ಎಂದು ದೂರಿದರು.

ಇದಕ್ಕೆ ಅನೇಕ ಸದಸ್ಯರು ಧ್ವನಿಗೂಡಿಸಿ ಆಡಳಿತದ ವೈಖರಿ ಟೀಕಿಸಿದರು. ವಿರೋಧಪಕ್ಷದ ಸದಸ್ಯರು, ಮೂರು ಜನ ಸ್ಥಾಯಿ ಸಮಿತಿ ಸದಸ್ಯರೇ ಆಡಳಿತ ವೈಖರಿ ಬಗ್ಗೆ ದಾಖಲೆ ಸಮೇತ ಟೀಕೆ ಮಾಡುತ್ತಿದ್ದಾರೆ ಎಂದರೆ ಪಾಲಿಕೆಯ ಆಡಳಿತ ವೈಫಲ್ಯವಲ್ಲವೇ ಎಂದು ಲೇವಡಿ ಮಾಡಿದರು.

ಕಾಮಗಾರಿ ವಿಳಂಬದ ಬಗ್ಗೆ ಮತ್ತು ಕುಡಿಯುವ ನೀರಿನ ಸಮಸ್ಯೆ ಬಗ್ಗೆ ವಿಪಕ್ಷ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಅನುಮೋದನೆ ಗೊಂಡಿರುವ ಕಾಮಗಾರಿ ವಿವರ ಸಂಬಂಧಪಟ್ಟ ಅಧಿಕಾರಿ ಸಭೆಗೆ ನೀಡುವಂತೆ ನಾಗರಾಜ್ ಕಂಕಾರಿ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸಭೆಯಲ್ಲಿ ಕೋಲಾಹಲ ಉಂಟಾಗಿ ಮೇಯರ್ ಹಾಗೂ ಪಾಲಿಕೆ ವಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.

ಒಟ್ಟು 13 ಪ್ಯಾಕೇಜ್‌ಗೆ ಹೂಳು ತೆಗೆಯುವ ಟೆಂಡರ್ ಆಗಿದ್ದು, 8 ಕಾಮಗಾರಿ ಪೂರ್ಣಗೊಂಡಿದೆ. ಉಳಿದ ಕಾಮಗಾರಿ ಈ ತಿಂಗಳ ಅಂತ್ಯದೊಳಗೆ ಮುಗಿಸಲಾಗುವುದು ಎಂದು ಪಾಲಿಕೆಯ ಮುಖ್ಯ ಎಂಜಿನಿಯರ್ ಡಂಕಪ್ಪ ಸ್ಪಷ್ಟಪಡಿಸಿದರು.

ಸಭೆಯಲ್ಲಿ ಉಪಮೇಯರ್ ಶಂಕರ್ ಗನ್ನಿ, ಆಯುಕ್ತ ಮಾಯಣ್ಣ ಗೌಡ, ಸ್ಥಾಯಿ ಸಮಿತಿ ಅಧ್ಯಕ್ಷರು, ಪಾಲಿಕೆ ಸದಸ್ಯರು, ಅಧಿಕಾರಿ ಇದ್ದರು.

ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ

ಸ್ಮಾರ್ಟ್ ಸಿಟಿ ಕಾಮಗಾರಿ ಆರಂಭವಾದ ಮೇಲೆ ಹಲವು ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ಉಂಟಾಗಿದೆ. ಟೆಂಡರ್ ಆದ ಕಾಮಗಾರಿಗಳು ಕೂಡ ಸರಿಯಾಗಿ ನಡೆಯುತ್ತಿಲ್ಲ. ಪಾಲಿಕೆ ಸದಸ್ಯರನ್ನು ಜನ ಬಾಯಿಗೆ ಬಂದಂತೆ ಟೀಕಿಸುತ್ತಿದ್ದು, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ವಾರ್ಡ್ ಜನರಿಗೆ ಉತ್ತರ ಕೊಡಲಾಗುತ್ತಿಲ್ಲ ಎಂದು ಸಭೆಯ ಪ್ರಾರಂಭದಲ್ಲೇ ವಿರೋಧಪಕ್ಷದ ಸದಸ್ಯರಾದ ರಮೇಶ್ ಹೆಗ್ಡೆ ಮತ್ತು ನಾಗರಾಜ್ ಕಂಕಾರಿ ಆಕ್ರೋಶ ವ್ಯಕ್ತಪಡಿಸಿದರು.

ಹೂಳು ತೆಗೆಯಿಸಲು ಆಗ್ರಹ

ರಾಜಕಾಲುವೆ ಹೂಳು ತೆಗೆಯುವಂತೆ ಹಲವು ಬಾರಿ ಮನವಿ ಮಾಡಿದ್ದೇನೆ. ಈ ಕಾಮಗಾರಿಗೆ ಟೆಂಡರ್ ಕೂಡ ಆಗಿದೆ. ಜನವರಿಯಿಂದಲೇ ಈ ಬಗ್ಗೆ ಒತ್ತಾಯಿಸಿದ್ದೇನೆ. ಏಪ್ರಿಲ್ ಕಳೆದು ಮಳೆಗಾಲ ಆರಂಭವಾದರೂ ಶರಾವತಿ ನಗರ ಮತ್ತು ಹೊಸಮನೆಯ ರಾಜಕಾಲುವೆಯ ಹೂಳು ತೆಗೆಸಿಲ್ಲ. ಸಣ್ಣ ಮಳೆ ಬಂದರೂ ಮನೆಗಳಿಗೆ ನೀರು ನುಗ್ಗುತ್ತಿದೆ ಎಂದು ಹೊಸಮನೆ ಸದಸ್ಯೆ ರೇಖಾ ರಂಗನಾಥ್ ಆಕ್ರೋಶ ವ್ಯಕ್ತಪಡಿಸಿದರು.

ಬಹುತೇಕ ಕಾಮಗಾರಿಗಳು ಪೂರ್ಣ

ಮಹಾತ್ಮ ಗಾಂಧಿ ಪಾರ್ಕ್ ಅಭಿವೃದ್ಧಿ ಕಾಮಗಾರಿ ಪ್ಯಾಕೇಜ್ 1ರಲ್ಲಿ ₹ 3 ಕೋಟಿ, ಪ್ಯಾಕೇಜ್ 2ರಲ್ಲಿ ವಾರ್ಡ್ ನಂ.30ರ ಸೀಗೆಹಟ್ಟಿಯಲ್ಲಿ ವ್ಯಾಯಾಮ ಶಾಲೆ ಮತ್ತು ಲೈಬ್ರರಿ ಕಾಮಗಾರಿಗೆ ₹ 55 ಲಕ್ಷ, ಕೃಷಿ ಕಚೇರಿಯಲ್ಲಿರುವ ಪಾರ್ಕ್ ಅಭಿವೃದ್ಧಿ ಕಾಮಗಾರಿಗೆ ₹ 78 ಲಕ್ಷ, ಮೆಸ್ಕಾಂ ಸಿ.ಎಸ್.ಡಿ.-1 ವ್ಯಾಪ್ತಿಗೆ ಬರುವ ಯೂನಿಟ್ 1 ಮತ್ತು 3ರಲ್ಲಿ ಬೀದಿ ದೀಪಗಳಿಗೆ ಸಂಬಂಧಿಸಿದಂತೆ ಮೂಲಸೌಕರ್ಯ ಸರಿಪಡಿಸುವ ಕುರಿತು ₹ 40 ಲಕ್ಷ, ಮೆಸ್ಕಾಂ ಸಿ.ಎಸ್.ಡಿ.–2 ವ್ಯಾಪ್ತಿಗೆ ಬರುವ ವಾರ್ಡ್‌ಗಳಲ್ಲಿ ಮೂಲಸೌಕರ್ಯಕ್ಕೆ ₹ 20 ಲಕ್ಷ, ಮೆಸ್ಕಾಂ ಸಿ.ಎಸ್.ಡಿ-3 ವ್ಯಾಪ್ತಿಯ ವಾರ್ಡ್‌ಗಳಲ್ಲಿ ಮೂಲಸೌಕರ್ಯ ಸರಿಪಡಿಸಲು ₹ 22 ಲಕ್ಷ ಒಟ್ಟು ₹ 5.15 ಕೋಟಿ ಕಾಮಗಾರಿ ಅನುಮೋದನೆಗೊಂಡಿದ್ದು, ಬಹುತೇಕ ಕಾಮಗಾರಿ ಪೂರ್ಣಗೊಂಡಿವೆ. ಇನ್ನು ಉಳಿದ ಕಾಮಗಾರಿಗಳನ್ನು ನಡೆಸಲಾಗುತ್ತಿದೆ ಎಂದು ಅಧಿಕಾರಿ ರಮೇಶ್ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT