ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಒಕ್ಕಲಿಗರ ಸಂಘದ ಚುನಾವಣೆ: ಎಸ್.ಕೆ. ಧರ್ಮೇಶ್‌ಗೆ ವಿಜಯಮಾಲೆ

ಉತ್ತರ ಕನ್ನಡ–ಶಿವಮೊಗ್ಗ ಜಿಲ್ಲೆ ಒಳಗೊಂಡ ನಿರ್ದೇಶಕ ಸ್ಥಾನಕ್ಕೆ
Last Updated 16 ಡಿಸೆಂಬರ್ 2021, 5:11 IST
ಅಕ್ಷರ ಗಾತ್ರ

ಶಿವಮೊಗ್ಗ: ಉತ್ತರ ಕನ್ನಡ–ಶಿವಮೊಗ್ಗ ಜಿಲ್ಲೆ ಒಳಗೊಂಡ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಸ್ಥಾನಕ್ಕೆ ಡಿ. 12ರಂದು ನಡೆದಿದ್ದ ಚುನಾವಣೆ ಫಲಿತಾಂಶವು ಬುಧವಾರ ಪ್ರಕಟವಾಗಿದ್ದು, ಎಸ್.ಕೆ. ಧರ್ಮೇಶ್‌ ಸಿರಿಬೈಲ್‌ ಅವರು ಗೆಲುವು ಪಡೆದರು.

ಪ್ರತಿಸ್ಪರ್ಧಿ ಭದ್ರಾವತಿಯ ಎಸ್‌. ಕುಮಾರ್ ವಿರುದ್ಧ ಎಸ್.ಕೆ. ಧರ್ಮೇಶ್‌ ಸಿರಿಬೈಲು ಅವರು 2,322 ಮತಗಳ ಅಂತರದಲ್ಲಿ ಜಯಿಸಿದರು. ಧರ್ಮೇಶ್‌ ಸಿರಿಬೈಲು ಅವರು 5,808 ಮತ ಹಾಗೂ ಎಸ್‌. ಕುಮಾರ್ ಅವರು 3,486 ಮತಗಳನ್ನು ಪಡೆದರು. ಜಿಲ್ಲೆಯಲ್ಲಿ ಒಕ್ಕಲಿಗರ ಸಂಘದ ಚುನಾವಣೆಯ ಸಾಕಷ್ಟು ಕುತೂಹಲ
ಮೂಡಿಸಿತ್ತು.

ಒಕ್ಕಲಿಗರ ಸಂಘದ ಚುನಾವಣೆಯಲ್ಲಿ 11,348 ಮತಗಳು ಚಲಾವಣೆಯಾಗಿದ್ದವು. ಈ ಪೈಕಿ 66 ಮತಗಳು ತಿರಸ್ಕೃತವಾಗಿದೆ. ವಿವಿಧ ಕಾರಣಕ್ಕೆ ಮತಗಳು ತಿರಸ್ಕೃತವಾಗಿದ್ದು, ಎಣಿಕೆ ವೇಳೆ ಅವುಗಳನ್ನು ಪ್ರತ್ಯೇಕಿಸಲಾಗಿತ್ತು. ಮತ ಎಣಿಕೆ ಕೇಂದ್ರದ ಮುಂದೆ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿತ್ತು. ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ಧರ್ಮೇಶ್, ಎಸ್‌.ಕುಮಾರ್ ಮಧ್ಯೆ ತೀವ್ರ ಪೈಪೋಟಿ: ತೀರ್ಥಹಳ್ಳಿ ತಾಲ್ಲೂಕಿನಲ್ಲಿ 4,804 ಮತಗಳಿದ್ದು, ಐವರು ಸ್ಪರ್ಧಾಕಾಂಕ್ಷಿಗಳು ಸ್ಪರ್ಧಿಸಿದ್ದರು. ಭದ್ರಾವತಿ ತಾಲ್ಲೂಕಿನಲ್ಲಿ 4,054 ಮತದಾರರು ಇದ್ದು, ಇಬ್ಬರು ಕಣದಲ್ಲಿ ಇದ್ದರು. ತೀರ್ಥಹಳ್ಳಿಯ ಉದ್ಯಮಿ ಎಸ್.ಕೆ. ಧರ್ಮೇಶ್ ಹಾಗೂ ಭದ್ರಾವತಿಯ ರಾಜಕಾರಣಿ ಎಸ್‌. ಕುಮಾರ್ ಮಧ್ಯೆ ಸಾಕಷ್ಟು ಸ್ಪರ್ಧೆ ಏರ್ಪಟ್ಟಿತ್ತು. ತೀರ್ಥಹಳ್ಳಿಯ ಎಸ್.ಕೆ. ಧರ್ಮೇಶ್‌ ಸಿರಿಬೈಲ್‌ ಅವರು ಒಕ್ಕಲಿಗರ ಸಂಘದ ಚುನಾವಣೆಗಾಗಿ ವರ್ಷದಿಂದ ಸಿದ್ಧತೆ ನಡೆಸಿದ್ದರು. ವಕೀಲ ಎಸ್.ವಿ. ಲೋಕೇಶ್, ಶಿವಮೊಗ್ಗದ ಕೆ.ಎಸ್. ರವಿಕುಮಾರ್ ಸಹ ಬಿರುಸಿನ ಪ್ರಚಾರ ಕೈಗೊಂಡಿದ್ದರು.

ಬೆಂಬಲಿಗರಿಂದ ಸಂಭ್ರಮಾಚಾರಣೆ: ಧರ್ಮೇಶ್ ಸಿರಿಬೈಲ್ ಅವರು ಗೆಲುವು ದಾಖಲಿಸುತ್ತಿದ್ದಂತೆ ಅವರ ಬೆಂಬಲಿಗರು, ಹಿತೈಷಿಗಳು ಸಂಭ್ರಮಾಚರಣೆ ಮಾಡಿದರು. ಮತ ಎಣಿಕೆ ಕೇಂದ್ರದ ಮುಂದೆ ಕುವೆಂಪು ರಸ್ತೆಯಲ್ಲಿ ಪಟಾಕಿ ಸಿಡಿಸಿ, ಘೋಷಣೆಗಳನ್ನು ಕೂಗಿದರು. ಅಲ್ಲದೆ, ಮತ ಎಣಿಕೆ ಕೇಂದ್ರದಿಂದ ಹೊರ ಬರುತ್ತಿದ್ದಂತೆ ಧರ್ಮೇಶ್ ಅವರಿಗೆ ಹೂವಿನ ಹಾರ ಹಾಕಿ ಶುಭಾಶಯ ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT