ಗುರುವಾರ , ಸೆಪ್ಟೆಂಬರ್ 29, 2022
26 °C
‘ನಮ್ಮ ನಡಿಗೆ ಶಾಂತಿ ಕಡೆಗೆ’ ಜಾಥಾ: ಅಪಾರ ಸಂಖ್ಯೆಯ ಜನರು ಭಾಗಿ

ಶಿವಮೊಗ್ಗ: ಶಾಂತಿ–ಸೌಹಾರ್ದದ ಸಂದೇಶ ಸಾರಿದ ‘ನಡಿಗೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಕೋಮು ಗಲಭೆಗಳಿಂದಾಗಿ ಅಶಾಂತಿಯ ವಾತಾವರಣ ನಿರ್ಮಾಣಗೊಂಡಿದ್ದ ನಗರದಲ್ಲಿ ಶನಿವಾರ ನಡೆದ ‘ನಮ್ಮ ನಡಿಗೆ ಶಾಂತಿ ಕಡೆಗೆ’ ಎಂಬ ಸದ್ಭಾವನಾ ಜಾಥಾ ಶಾಂತಿ–ಸೌಹಾರ್ದದ ಸಂದೇಶವನ್ನು ಸಾರಿತು. ನಗರದ ಅಭಿವೃದ್ಧಿಯ ದೃಷ್ಟಿಯಿಂದ ಕೋಮುಸೌಹಾರ್ದ ಕಾಪಾಡುವ ಅಗತ್ಯತೆಯನ್ನು ಒತ್ತಿ ಹೇಳಿತು.

ನಗರದಲ್ಲಿ ಈಚೆಗೆ ನಡೆದಿದ್ದ ಕೋಮು ಗಲಭೆಗಳಿಂದ ವ್ಯಾಪಾರ–ವಹಿವಾಟಿನ ಮೇಲೂ ಪರಿಣಾಮ ಬೀರಿತ್ತು. ಹೀಗಾಗಿ ವಿವಿಧ ಸಂಘಟನೆಗಳು ಜಿಲ್ಲಾಡಳಿತದ ಸಹಯೋಗದಲ್ಲಿ ಪಕ್ಷ–ಧರ್ಮಾತೀತವಾಗಿ ಜಾಥಾವನ್ನು ಹಮ್ಮಿಕೊಂಡಿದ್ದವು. ಹಿಂದೂ, ಮುಸ್ಲಿಂ ಹಾಗೂ ಕಿಶ್ಚನ್‌ ಧರ್ಮಗುರುಗಳು, ಪ್ರಗತಿಪರ ಸಂಘಟನೆಗಳ ಮುಖಂಡರು, ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಜಾಥಾದಲ್ಲಿ ಹೆಜ್ಜೆ ಹಾಕಿದರು.

ನಗರದ ಸಿಮ್ಸ್‌ನಿಂದ ಸೈನ್ಸ್ ಮೈದಾನದವರೆಗೆ ನಡೆದ ಜಾಥಾದಲ್ಲಿ ಪಾಲ್ಗೊಂಡಿದ್ದ ಜನರು, ‘ಸ್ನೇಹ, ಶಾಂತಿ ನಮ್ಮ ಉಸಿರು’, ‘ನಮ್ಮ ನಡಿಗೆ ಶಾಂತಿ ಕಡೆಗೆ’ ಎಂಬ ಘೋಷಣೆಗಳನ್ನು ಕೂಗಿದರು. ಜಾಥಾದ ವಾಹನದಲ್ಲಿದ್ದ ‘ಹಿಂದೂ–ಮುಸ್ಲಿಂ ಶತ್ರುಗಳಲ್ಲ, ನಾವೆಲ್ಲರೂ ಒಂದೇ. ಶಾಂತಿಯಿಂದ ನೆಮ್ಮದಿ ಸಾಧ್ಯ’ ಎಂಬ ಬರಹ; ಹಿಂದೂ–ಮುಸ್ಲಿಂ ವ್ಯಕ್ತಿಗಳು ಪರಸ್ಪರ ಮುತ್ತಿಕ್ಕುತ್ತಿದ್ದ ಚಿತ್ರ ಗಮನ ಸೆಳೆಯಿತು.

ಜಾಥಾಕ್ಕೆ ಸಿರಿಗೆರೆಯ ತರಳಬಾಳು ಬೃಹನ್ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡಿದರು. ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ಡಾ.ಮುಸ್ತಫಾ ಹುಸೇನ್, ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಿಪ್ರಸಾದ್ ಸಾಥ್‌ ನೀಡಿದರು.

ಜಾಥಾ ಬಳಿಕ ನಡೆದ ಸಭೆಯಲ್ಲಿ ಮಾತನಾಡಿದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ‘ದ್ವೇಷ ಬಿಟ್ಟು ಮಾನವೀಯ ಗುಣ ಬೆಳೆಸಿಕೊಂಡರೆ ಶಾಂತಿ ತಾನಾಗಿಯೇ ನಮ್ಮನ್ನು ಆವರಿಸುತ್ತದೆ. ಶಿವಮೊಗ್ಗ ಸಮಾಜವಾದ, ವೈಚಾರಿಕತೆಯ ನೆಲ. ಇಂತಹ ಸ್ಥಳದಲ್ಲಿ ಇತ್ತೀಚೆಗೆ ಕೋಮು ಸೌಹಾರ್ದ ಕದಡುವ ಘಟನೆಗಳು ನಡೆಯುತ್ತಿರುವುದು ವಿಷಾದನೀಯ’ ಎಂದರು. 

ಬೆಕ್ಕಿನ ಕಲ್ಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಜಡೆ ಮಠದ ಮಹಾಂತ ಸ್ವಾಮೀಜಿ, ಬಸವಕೇಂದ್ರದ ಬಸವಮರುಳಸಿದ್ಧ ಸ್ವಾಮೀಜಿ, ಧರ್ಮಗುರು ಡಾ.ಕ್ಲಿಫರ್ಡ್ ರೋಷನ್ ಪಿಂಟೊ, ಜಾಮಿಯಾ ಮಸೀದಿಯ ಮೌಲ್ವಿ ಮುಫ್ತಿ ಅಖ್ವಿಲ್‌ ರಝಾ ಇದ್ದರು.

*
ಶಾಂತಿಗಾಗಿ ನಡೆಯ ನಿಮ್ಮ ಮಿಡಿತ ಶಿವಮೊಗ್ಗದ ಜನರ ಹೃದಯ ಬಡಿತವಾಗಿರಲಿ. ಶಾಂತಿಯ ಬದುಕಿಗಾಗಿ ನಮ್ಮ ಹಿತಾಸಕ್ತಿ, ಸ್ವಾರ್ಥ ಬಿಡಬೇಕು.
– ಡಾ.ಎಸ್.ಜೆ. ಫ್ರಾನ್ಸಿಸ್ ಸೆರಾವೋ, ಬಿಷಪ್‌, ಶಿವಮೊಗ್ಗ

*
ಎಲ್ಲಾ ಧರ್ಮಗಳ ಸಾರ ಒಂದೇ. ಸಮಾನತೆಯ ಸಂದೇಶ ಸಾರಬೇಕಿದೆ. ಧರ್ಮ ಮುಂದಿಟ್ಟುಕೊಂಡು ದ್ವೇಷ ಕಾರುವವರಿಗೆ ಈ ಶಾಂತಿ ನಡಿಗೆ ಒಂದು ಪಾಠವಾಗಲಿ.
– ಮೌಲಾನಾ ಶಾಹುಲ್ ಹಮೀದ್, ಮುಸ್ಲಿಂ ಮುಖಂಡ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು