ಬುಧವಾರ, ಸೆಪ್ಟೆಂಬರ್ 22, 2021
28 °C
ಏತನೀರಾವರಿ ಯೋಜನೆಗೆ ಇಂದು ಬಿ.ಎಸ್‌. ಯಡಿಯೂರಪ್ಪ ಚಾಲನೆ

ಬಹುದಿನದ ‘ನೀರಾವರಿ’ ಕನಸು ನನಸು

ಎಂ.ನವೀನ್ ಕುಮಾರ್ Updated:

ಅಕ್ಷರ ಗಾತ್ರ : | |

Prajavani

ಶಿರಾಳಕೊಪ್ಪ: ತಾಳಗುಂದ, ಉಡುಗಣಿ ಹಾಗೂ ಹೊಸುರು ಹೋಬಳಿಗಳ ರೈತರ ಬಹುದಿನದ ಕನಸಾಗಿದ್ದ ಏತನೀರಾವರಿ ಯೋಜನೆಯನ್ನು ಶನಿವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸುವ ಮೂಲಕ ನನಸು ಮಾಡಲಿದ್ದಾರೆ.

ಬಯಲುಸೀಮೆ ಹಾಗೂ ಮಲೆನಾಡಿಗೆ ಕೊಂಡಿಯಾಗಿರುವ ಈ ಪ್ರದೇಶದಲ್ಲಿ ರೈತರಿಗೆ ನೀರಾವರಿ ಮೂಲಗಳು ಇರಲಿಲ್ಲ. ಈ ಭಾಗದ ರೈತರು ಕೊಳವೆಬಾವಿಗಳನ್ನು ಆಶ್ರಯಿಸಿ ಬೆಳೆ ಬೆಳೆಯುತ್ತಿದ್ದರು. ಕಳೆದ ಬಾರಿ ಮುಖ್ಯಮಂತ್ರಿಯಾಗಿದ್ದಾಗ ರೈತರಿಗೆ ಸಮರ್ಪಕವಾದ ವಿದ್ಯುತ್ ಸ್ಟೇಷನ್‌ಗಳನ್ನು ನಿರ್ಮಿಸಿಕೊಡುವ ಮೂಲಕ ರೈತರ ವಿದ್ಯುತ್ ಸಮಸ್ಯೆಯನ್ನು ಹೋಗಲಾಡಿಸಿದ್ದರು.

ನಂತರ ಈ ಭಾಗದ ಜನರಿಗೆ ನೀರಾವರಿ ಸೌಲಭ್ಯ ಕಲ್ಪಿಸಿಕೊಡಬೇಕು ಎಂದು ಅಂದಿನ ಶಾಸಕರು, ಸಂಸದ ಬಿ.ವೈ.ರಾಘವೇಂದ್ರ ನೇತೃತ್ವದಲ್ಲಿ ಪಾದಯಾತ್ರೆಯನ್ನು ಸಹ ಹಮ್ಮಿಕೊಳ್ಳಲಾಗಿತ್ತು. ರೈತ ಸಂಘಟನೆಗಳು, ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಕೂಡ ನೀರಾವರಿಗಾಗಿ ಪ್ರತಿಭಟನೆ ಮಾಡಿದ್ದವು. ಈ ಸಂದರ್ಭದಲ್ಲಿ ವಿರೋಧ ಪಕ್ಷದ ಸ್ಥಾನದಲ್ಲಿದ್ದ ಯುಡಿಯೂರಪ್ಪ ಅವರು ಸಚಿವ ಡಿ.ಕೆ.ಶಿವಕುಮಾರ್‌ ಅವರ ಮನೆಗೆ ಸಂಸದ ರಾಘವೇಂದ್ರ ಅವರ ಜತೆಗೆ ತೆರಳಿ ನೀರಾವರಿ ಯೋಜನೆಗಾಗಿ ಮನವಿ ಮಾಡಿದ್ದರು.

ಬದಲಾದ ಕಾಲಘಟ್ಟದಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಪಡೆದ ಯಡಿಯೂರಪ್ಪ ಅವರು ಪ್ರಥಮ ಸಚಿವ ಸಂಪುಟ ಸಭೆಯಲ್ಲೇ ₹ 850 ಕೋಟಿ ಮೊತ್ತದ 255 ಕೆರೆ ತುಂಬಿಸುವ ನೀರಾವರಿ ಯೋಜನೆಗೆ ಹಸಿರು ನಿಶಾನೆ ತೋರಿದರು.
ಜೊತೆಗೆ ₹ 105 ಕೋಟಿ ಮೊತ್ತದ ಸೊರಬದ ಮೂಡಿ, ಮೂಗೂರು ಏತನೀರಾವರಿ ಯೋಜನೆಗೆ ಚಾಲನೆ ನೀಡಿದರು.

‘ಹಾವೇರಿ ಜಿಲ್ಲೆ ಹಿರೇಕೆರೂರು ತಾಲ್ಲೂಕಿನ ಪುರದಕೆರೆಯಿಂದ ಈ ಭಾಗಕ್ಕೆ ನೀರು ಹರಿಸುವ ಯೋಜನೆ ವಿರೋಧಿಸಿ ಅಲ್ಲಿನ ಕೆಲವು ಹೋರಾಟಗಾರರು ಪ್ರತಿಭಟನೆ, ಉಪವಾಸ ಸತ್ಯಾಗ್ರಹ ಹಾಗೂ ಪಾದಯಾತ್ರೆ ಸಹ ಮಾಡಿದ್ದರು. ಹೋರಾಟಗಾರರ ಮನವೊಲಿಸಲಾಯಿತು. ಇಷ್ಟೆಲ್ಲ ಶ್ರಮ ಹಾಕಿದ್ದರ ಫಲವಾಗಿ ಈ ಯೋಜನೆ ವೇಗವಾಗಿ ಅನುಷ್ಠಾನಕ್ಕೆ ಬರಲು ಸಾಧ್ಯವಾಯಿತು’ ಎಂದು ಬಿಜೆಪಿ ನಾಯಕರು ಹೇಳುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು