ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ | ಬಡವರ ಮಕ್ಕಳು ‘ಅಗ್ನಿಪಥ’ಕ್ಕೆ ಸೇರಿದರೆ ತಪ್ಪೇನು?

ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾ ಜಾಗೃತಿ ಸಮಾವೇಶದಲ್ಲಿ ಆರಗ ಜ್ಞಾನೇಂದ್ರ
Last Updated 26 ಜೂನ್ 2022, 5:39 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ‘ಬಡವರ ಮಕ್ಕಳು ಎಸ್ಸೆಸ್ಸೆಲ್ಸಿ ನಂತರ ಕೂಲಿ ಕೆಲಸಕ್ಕೆ ಹೋಗುವ ಬದಲು ರಾಷ್ಟ್ರ ರಕ್ಷಣೆಗೆ ತೆರಳಲಿ. ಕಾಲೇಜು ಶುಲ್ಕ ಭರಿಸಲಾಗದೇ ವಿದ್ಯಾಭ್ಯಾಸ ಮೊಟಕುಗೊಳಿಸುವ ವಿದ್ಯಾರ್ಥಿಗಳು ‘ಅಗ್ನಿಪಥ’ ಯೋಜನೆಗೆ ಸೇರಿದರೆ ತಪ್ಪೇನು’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರಶ್ನಿಸಿದರು.

ಪಟ್ಟಣದ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಬಿಜೆಪಿ ಜಿಲ್ಲಾ ಹಿಂದುಳಿದ ಮೋರ್ಚಾ ಶನಿವಾರ ಆಯೋಜಿಸಿದ್ದ ಜಾಗೃತಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಕಾಂಗ್ರೆಸ್‌ ಆಡಳಿತದಲ್ಲಿಸಣ್ಣ ಸಮುದಾಯಗಳನ್ನು ಗುರುತಿಸಿ ಮೇಲಕ್ಕೆತ್ತುವ ಕೆಲಸ ಆಗಿರಲಿಲ್ಲ. ದೇಶದಲ್ಲಿ ಕಾಂಗ್ರೆಸ್‌ ಸಂಘರ್ಷಕ್ಕೆ ಇಳಿದಿರುವುದರಿಂದ ನಗಣ್ಯವಾಗಿದೆ. ಈಗ ಅಸ್ತಿತ್ವ ಉಳಿಸಿಕೊಳ್ಳುವ ಹೋರಾಟ ಮಾಡುತ್ತಿದೆ. ಮೋದಿ ಸರ್ಕಾರದ ಉಪಕಾರ ಪಡೆದ ಸಮುದಾಯ ಗಟ್ಟಿಧ್ವನಿಯಾಗುತ್ತಿಲ್ಲ. ಎಲ್ಲಾ ಕ್ಷೇತ್ರದ ಅಭ್ಯುದಯ ಸಹಿಸದೆ ಹೀನ ಕೃತ್ಯಕ್ಕೆ ಕಾಂಗ್ರೆಸ್‌ ಇಳಿದಿದೆ ಎಂದು ಆರೋಪಿಸಿದರು.

‘ಸಂವಿಧಾನದ ಹೆಸರಿನಲ್ಲಿ ಪ್ರಜಾಪ್ರಭುತ್ವ ದಮನ ಮಾಡುವ ಅನಾಚಾರ ನಡೆಯುತ್ತಿದೆ. ಚುನಾವಣಾ ಪೂರ್ವಸಿದ್ಧತೆಗಾಗಿ ಕುವೆಂಪು ಹೆಸರಲ್ಲಿ ಒಕ್ಕಲಿಗ, ಅಂಬೇಡ್ಕರ್‌ ನೆಪದಲ್ಲಿ ಪರಿಶಿಷ್ಟ ಜಾತಿ, ಪಂಗಡ, ಬಸವಣ್ಣ ಜಪದಲ್ಲಿ ಲಿಂಗಾಯತ ಸಮುದಾಯಗಳನ್ನು ಎತ್ತಿಕಟ್ಟಲಾಗುತ್ತಿದೆ’ ಎಂದು ದೂರಿದರು.

‘ಹಿಂದುಳಿದವರ ಸೋಗು ಹಾಕಿ ಕಾಂಗ್ರೆಸ್‌ ಮುಸ್ಲಿಮರ ಓಲೈಕೆ ಮಾಡುತ್ತಿದೆ. ನಾವೇ ಹಿಂದುಳಿದ ವರ್ಗದ ಚಾಂಪಿಯನ್‌ ಎಂದು ಬಿಂಬಿಸುತ್ತಿದ್ದಾರೆ. ಸಿದ್ದರಾಮಯ್ಯ ಸರ್ಕಾರದಲ್ಲೇ ಕುರುಬ ಸಮುದಾಯಕ್ಕೆ ಮಾನ್ಯತೆ ಸಿಕ್ಕಲಿಲ್ಲ. ಕನಕದಾಸರ ಜಯಂತಿಯನ್ನು ಘೋಷಿಸಿದ್ದುಯಡಿಯೂರಪ್ಪ ಸರ್ಕಾರ’ ಎಂದು’ ಇಂಧನ ಸಚಿವ ಸುನಿಲ್‌ ಕುಮಾರ್‌ ಹೇಳಿದರು.

‘ಮಂಗಳೂರಿನಲ್ಲಿ ಹಿಂದುಳಿದ ವರ್ಗಗಳ ಸಮುದಾಯದ ಯುವಕರ ಕಗ್ಗೊಲೆಯಾದಾಗ ಕಾಂಗ್ರೆಸ್ ಮೌನವಹಿಸಿತ್ತು. ಅಂಬೇಡ್ಕರ್‌ ಹೆಸರಿನಲ್ಲಿ ರಾಜಕಾರಣ ಮಾಡುವವರಿಂದ ದೆಹಲಿಯಲ್ಲಿ ಅವರ ಶವ ಸಂಸ್ಕಾರಕ್ಕೆ ಅವಕಾಶ ಸಿಗಲಿಲ್ಲ. ಬಿಜೆಪಿ ಸರ್ಕಾರದಲ್ಲಿ ಸಣ್ಣ ಸಮುದಾಯಕ್ಕೂ ಅವಮಾನ ಆಗಿಲ್ಲ. ಓಬವ್ವ, ಕೈವಾರ ತಾತಯ್ಯ, ನಾರಾಯಣಗುರು ಅವರ ವಿಚಾರ ಪ್ರಸಾರಕ್ಕೆ ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ₹ 400 ಕೋಟಿ ಅನುದಾನ ನೀಡಿದ್ದೇವೆ’ ಎಂದರು.

ಸಂಸದ ಬಿ.ವೈ. ರಾಘವೇಂದ್ರ, ಶಾಸಕ ಕುಮಾರ ಬಂಗಾರಪ್ಪ, ರಾಜ್ಯ ಹಿಂದುಳಿದ ಮೋರ್ಚಾ ಅಧ್ಯಕ್ಷ ನೆ.ಲ. ನರೇಂದ್ರಬಾಬು, ಉಪಾಧ್ಯಕ್ಷ ಅಶೋಕಮೂರ್ತಿ, ಮೋರ್ಚಾ ಜಿಲ್ಲಾಧ್ಯಕ್ಷ ಸಿ.ಎಚ್‌. ಮಾಲತೇ‌ಶ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಮೇಘರಾಜ್‌ ಟಿ.ಡಿ., ತಾಲ್ಲೂಕು ಬಿಜೆಪಿ ಅಧ್ಯಕ್ಷ ಬಾಳೇಬೈಲು ರಾಘವೇಂದ್ರ ಇದ್ದರು.

ವೋಟಿಗಾಗಿ ಪಾದಯಾತ್ರೆ: ಆರಗ ಟೀಕೆ
‘ಅಗ್ನಿವೀರ’ರಿಗೆ ಗೃಹ ಇಲಾಖೆಯಿಂದ ಪೊಲೀಸ್‌, ಅಗ್ನಿಶಾಮಕ ದಳ, ಭದ್ರತಾ ಸಿಬ್ಬಂದಿ ಹುದ್ದೆಗೆ ಪರಿಗಣಿಸುವ ಪ್ರಸ್ತಾವ ಸಲ್ಲಿಸಿದ್ದೇನೆ. ಪಠ್ಯ ಪರಿಷ್ಕರಣೆಯಲ್ಲಿ ಕುವೆಂಪುಗೆ ಅಪಮಾನ ಆಗಿಲ್ಲ. 2017ರಲ್ಲಿ ನಾಡಗೀತೆ ತಿರುಚಿದ ಪ್ರಕರಣದಲ್ಲಿ ಸಿದ್ದರಾಮಯ್ಯ ಸರ್ಕಾರದಲ್ಲಿ ಬಿ. ರಿಪೋರ್ಟ್‌ ನೀಡಲಾಗಿತ್ತು. ಅದನ್ನು ತೆರೆದು ಸೈಬರ್‌ ಅಪರಾಧ ವಿಭಾಗಕ್ಕೆ ವರ್ಗಾವಣೆ ಮಾಡಿದ್ದೇನೆ. ಹಿಂದುಳಿದವರು, ಪರಿಶಿಷ್ಟ ಸಮುದಾಯದವರ ಹೆಸರಲ್ಲಿ ವೋಟಿಗಾಗಿ ಪಾದಯಾತ್ರೆ ಮಾಡುತ್ತಿದ್ದಾರೆ’ ಎಂದು ಆರಗ ಜ್ಞಾನೇಂದ್ರ ಅವರು ಕಿಮ್ಮನೆ ರತ್ನಾಕರ ಅವರ ಪಾದಯಾತ್ರೆ ಬಗ್ಗೆ ಕಿಡಿಕಾರಿದರು.

*

ಹಿಂದುಳಿದ ಸಮುದಾಯಕ್ಕೆ 70 ವರ್ಷಗಳ ಅವಧಿಯಲ್ಲಿ ಸ್ಥಾನಮಾನ ದೊರೆಯಲಿಲ್ಲ. ನರೇಂದ್ರ ಮೋದಿ ಸಂಘಟನೆಯಿಂದ ಹಿಂದುಳಿದ ವರ್ಗಕ್ಕೆ ನ್ಯಾಯ ದೊರೆತಿದೆ.
-ನೆ.ಲ. ನರೇಂದ್ರಬಾಬು, ಬಿಜೆಪಿ ರಾಜ್ಯ ಒಬಿಸಿ ಮೋರ್ಚಾ ಅಧ್ಯಕ್ಷ

*

ಕಾಂಗ್ರೆಸ್‌ ನಾಯಕರನ್ನು ಇ.ಡಿ. ವಿಚಾರಣೆಗೆ ಒಳಪಡಿಸಿದರೆ ಅಧಿಕಾರ ಕಳೆದುಕೊಂಡ ಹತಾಶೆಯಿಂದ ಕಾಂಗ್ರೆಸ್‌ನವರು ಪ್ರತಿಭಟಿಸುತ್ತಾರೆ. ಅಗ್ನಿಪಥ, ಪಠ್ಯಪರಿಷ್ಕರಣೆಯಿಂದ ವಿದ್ಯಾರ್ಥಿಗಳ ಮನಸ್ಸನ್ನು ಕೆಡಿಸಲಾಗುತ್ತಿದೆ.
-ಕುಮಾರ್‌ ಬಂಗಾರಪ್ಪ, ಸೊರಬ ಶಾಸಕ

*

ಕಾರ್ಮಿಕ ಇಲಾಖೆಗೆ ಹೆಚ್ಚು ಅನುದಾನ ಕಲ್ಪಿಸಲಾಗಿದೆ. ಕಾಗಿನೆಲೆ ಅಭಿವೃದ್ಧಿ, ಕೋಟಿ ಚನ್ನಯ್ಯ ಸೇರಿ ಎಲ್ಲಾ ಸಮುದಾಯಕ್ಕೆ ಬಿಜೆಪಿ ಸರ್ಕಾರದಲ್ಲಿ ನ್ಯಾಯ ದೊರೆತಿದೆ.
-ಬಿ.ವೈ. ರಾಘವೇಂದ್ರ, ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT