ಶನಿವಾರ, ಅಕ್ಟೋಬರ್ 16, 2021
29 °C
ಅರಣ್ಯ ಇಲಾಖೆ ಅಧಿಕಾರಿಗಳಿಗೆ ಆರಗ ತರಾಟೆ

ಕಾಮಗಾರಿಯ ಲೆಕ್ಕ ಮುಚ್ಚಿಡುವುದೇಕೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತೀರ್ಥಹಳ್ಳಿ: ಅರಣ್ಯ ಅಭಿವೃದ್ಧಿ ಕಾಮಗಾರಿ ಕುರಿತು ಸರ್ಕಾರಕ್ಕೆ ಅರಣ್ಯ ಇಲಾಖೆ ಪಾರದರ್ಶಕವಾಗಿ ವರದಿ ಸಲ್ಲಿಸಲ್ಲ. ಅನುದಾನ, ವೆಚ್ಚದ ಮಾಹಿತಿ ಮುಚ್ಚಿಡುತ್ತಿರುವುದಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಅರಣ್ಯ ಇಲಾಖೆ ಅಧಿಕಾರಿಗಳನ್ನು ತೀವ್ರ ತರಾಟೆ ತೆಗೆದುಕೊಂಡರು.

ಸೋಮವಾರ ಪಟ್ಟಣದ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಸರ್ಕಾರಕ್ಕೆ ಪೂರ್ಣ ಮಾಹಿತಿ ನೀಡದ ಇಲಾಖೆ ಅಧಿಕಾರಿಗಳ ವಿರುದ್ಧ ಟಿಎಪಿಸಿಎಂಎಸ್ ಅಧ್ಯಕ್ಷ ನಾಗರಾಜ್ ಶೆಟ್ಟಿ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಗಂಭೀರ ಚರ್ಚೆ ನಡೆಯಿತು.

ಶೇಕಡವಾರು ಸಾಧನೆ, ಭೌತಿಕ ಗುರಿಗಳನ್ನು ಇಲಾಖೆಯಿಂದ ತೋರಿಸಲಾಗುತ್ತಿದೆ. ವಿವಿಧ ಯೋಜನೆಗಳಿಗಾಗಿ ಸರ್ಕಾರದಿಂದ ಕೋಟ್ಯಂತರ ರೂಪಾಯಿ ಅನುದಾನ ಪಡೆಯುತ್ತಿದೆ. ಲೆಕ್ಕ ವರದಿಯನ್ನು ಮಾತ್ರ ಮುಚ್ಚಿಡಲಾಗುತ್ತಿದೆ. ಅರಣ್ಯ ಇಲಾಖೆಯ ಕಾಮಗಾರಿ ಪ್ರಗತಿಯ ಕುರಿತು ಎಸಿಎಫ್, ಆರ್‌ಎಫ್ಒ ಅಧಿಕಾರಿಗಳ ಪ್ರತ್ಯೇಕ ಸಭೆ ನಡೆಸಲು ಆರಗ ಆದೇಶಿಸಿದರು.

ಕುಡಿಯುವ ನೀರು, ಕೃಷಿ ಉಪಯೋಗಕ್ಕಾಗಿ ಸರ್ಕಾರ ಹಲವು ಯೋಜನೆಗಳನ್ನು ನೀಡುತ್ತಿದೆ. ಫಲಾನುಭವಿಗಳು ಇದರ ಉಪಯೋಗ ಪಡೆಯುವಾಗ ವರ್ಷಗಳು ಕಳೆದಿವೆ. ಎರಡು ವರ್ಷಗಳು ಕಳೆದರೂ ಫಲಾನುಭವಿಗಳ ಕೈ ಸೇರದಿರುವ ಉದಾಹರಣೆ ಇದೆ. ಮೆಸ್ಕಾಂ, ಪರಿಶಿಷ್ಟ ಜಾತಿ, ಪಂಗಡ, ದೇವರಾಜ್ ಅರಸು ನಿಗಮ, ಗ್ರಾಮ ಪಂಚಾಯಿತಿ ಮುಂತಾದ ಇಲಾಖೆ, ನಿಗಮಗಳು ಜಂಟಿಯಾಗಿ ಯೋಜನೆಗಳನ್ನು ಮಾಡಬೇಕು. ಪ್ರಗತಿ ಕಾಮಗಾರಿಯಲ್ಲಿ ಇಲಾಖೆಗಳು ಸಂಬಂಧವೇ ಇಲ್ಲದಂತಿವೆ ಎಂದು ಆರಗ ಅಸಮಾಧಾನ ವ್ಯಕ್ತಪಡಿಸಿದರು.

ಅಡಿಕೆ ಎಲೆಚುಕ್ಕಿ ರೋಗ ರೈತರನ್ನು ಕಂಗೆಡಿಸಿದ್ದರೆ, ಕೃಷಿ ಗೊಬ್ಬರ ನಿಗದಿತ ದರಕ್ಕಿಂತ ಅಧಿಕ ಬೆಲೆಗೆ ಮಾರಾಟವಾಗುತ್ತಿದೆ. ಕೃಷಿ, ತೋಟಗಾರಿಕಾ ಇಲಾಖೆ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಆಡಳಿತ ಅಧಿಕಾರಿ ಗಣೇಶ್, ಇಒ ಡಾ. ಆಶಾಲತಾ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.