ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ: ಕೃಷಿ ಕಾಯ್ದೆಗೆ ವ್ಯಾಪಕ ವಿರೋಧ, ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

ಬೃಹತ್ ಪ್ರತಿಭಟನಾ ಮೆರವಣಿಗೆ
Last Updated 28 ಸೆಪ್ಟೆಂಬರ್ 2021, 3:13 IST
ಅಕ್ಷರ ಗಾತ್ರ

ಶಿವಮೊಗ್ಗ: ಕೃಷಿ ಕಾಯ್ದೆ ತಿದ್ದುಪಡಿ ವಿರೋಧಿಸಿ ಸಂಯುಕ್ತ ಕಿಸಾನ್ ಮೋರ್ಚಾಸೋಮವಾರ ಕರೆ ನೀಡಿದ್ದ ಭಾರತ್‌ ಬಂದ್‌ಗೆ ಶಿವಮೊಗ್ಗದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

ಭಾರತ್ ಬಂದ್‌ಗೆ ಹಲವೆಡೆ ವ್ಯಾಪಾರಿಗಳು, ರೈತರಿಂದ ಉತ್ತಮ ಸ್ಪಂದನ ದೊರೆಯಿತು. ಕೆಎಸ್‌ಆರ್‌ಟಿಸಿ ಸೇರಿದಂತೆ ಕೆಲವು ವಾಹನಗಳು ರಸ್ತೆಗಿಳಿದಿದ್ದರೂ, ವಾಹನಗಳ ಸಂಚಾರ ವಿರಳವಾಗಿತ್ತು. ಕೆಲವು ಅಂಗಡಿಗಳು ಕೆಲವು ಬಾಗಿಲು ಹಾಕಿದ್ದರೆ, ಕೆಲವು ತೆರೆದಿದ್ದವು. ಕೆಲ ಶಾಲಾ–ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ವ್ಯಾಪಾರ–ವಹಿವಾಟು ನಿತ್ಯದಂತೆ ಇರಲಿಲ್ಲ.ಖಾಸಗಿ, ಸರ್ಕಾರಿ ಬಸ್ ಸಂಚಾರ, ಆಟೊ, ರೈಲು, ವಾಹನಗಳಲ್ಲೂ ವ್ಯತ್ಯಯ ಕಂಡುಬಂತು. ಎಪಿಎಂಸಿ ತರಕಾರಿ ಮಾರುಕಟ್ಟೆ ಬೆಳಿಗ್ಗೆಯಿಂದಲೇ ಬಂದ್ ಆಗಿತ್ತು.

ವಿವಿಧ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸಿದವು. ನಗರದ ಖಾಸಗಿ ಬಸ್‌ನಿಲ್ದಾಣದ ಮುಂಭಾಗ ಹಲವು ಕನ್ನಡಪರ ಸಂಘಟನೆಗಳ ಪ್ರಮುಖರು ಪ್ರತಿಭಟನೆ ನಡೆಸಿದರು. ಪೊಲೀಸ್ ಬಂದೋಬಸ್ತ್ ಇದ್ದ ಕಾರಣ ಖಾಸಗಿ ಬಸ್ ಸಂಚಾರ ತಡೆಯುವ ಯತ್ನ ಫಲಿಸಲಿಲ್ಲ.

ರೈತರಿಂದ ಬೈಕ್‌ ಜಾಥಾ: ಭಾರತ ಬಂದ್‌ಗೆ ಬೆಂಬಲ ನೀಡುವಂತೆ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಮನವಿ ಮಾಡಿದರು. ಅಶೋಕ ವೃತ್ತ ಸೇರಿ ವಿವಿಧೆಡೆ ಕೆ.ಟಿ.ಗಂಗಾಧರ್‌, ಜೆಡಿಎಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಶ್ರೀಕಾಂತ್‌, ಕಾಂಗ್ರೆಸ್‌ ಮುಖಂಡ ಎನ್‌.ರಮೇಶ್‌ ಸೇರಿ ಹಲವು ಪ್ರಮುಖರು ಅಂಗಡಿಗಳು, ಹೋಟೆಲ್‌ಗಳಿಗೆ ತೆರಳಿ ಬಂದ್‌ಗೆ ಬೆಂಬಲಿಸುವಂತೆ ಮನವಿ ಮಾಡಿದರು. ರೈತ ಸಂಘದ ಕಾರ್ಯಕರ್ತರು ನಗರದ ಹಲವೆಡೆ ಬೈಕ್‌ ಜಾಥಾ ನಡೆಸಿದರು.

ಬೃಹತ್ ಪ್ರತಿಭಟನೆ: ನಗರದ ವಿವಿಧ ಸಂಘಟನೆಗಳ ಪ್ರಮುಖರು ರಾಮಣ್ಣ ಶ್ರೇಷ್ಠಿ ಪಾರ್ಕ್‌ನಿಂದ ಮೆರವಣಿಗೆಯಲ್ಲಿ ಹೊರಟು ಗಾಂಧಿ ಬಜಾರ್‌, ಅಮೀರ್ ಅಹ್ಮದ್ ವೃತ್ತ, ಗೋಪಿ ವೃತ್ತ ಮಾರ್ಗವಾಗಿ ಮಹಾವೀರ ವೃತ್ತಕ್ಕೆ ತಲುಪಿದರು. ನಂತರ ವೃತ್ತದಲ್ಲೇ ಬಹಿರಂಗ ಸಭೆ ನಡೆಸಲಾಯಿತು.

ರೈತ ಸಂಘದ ಗೌರವಾಧ್ಯಕ್ಷ ಎಚ್.ಆರ್. ಬಸವರಾಜಪ್ಪ, ‘ದೆಹಲಿಯಲ್ಲಿ 10 ತಿಂಗಳಿಂದ ರೈತರು ಅಹೋರಾತ್ರಿ ಹೋರಾಟ ನಡೆಸುತ್ತಿದ್ದರೂ ಕೇಂದ್ರ ಸರ್ಕಾರ ರೈತರೊಂದಿಗೆ ಮಾತುಕತೆ ಮಾಡದೇ ಏಕಪಕ್ಷೀಯ ಧೋರಣೆ ಅನುಸರಿಸುತ್ತಿದೆ. ಮುಂದಿನ ದಿನಗಳಲ್ಲಿ ರೈತರು ಸರ್ಕಾರಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತ ನಾಯಕ ಕೆ.ಟಿ.ಗಂಗಾಧರ್, ‘ಜನಸಾಮಾನ್ಯರ ಊಟದ ತಟ್ಟೆಗೆ ಕೇಂದ್ರ ಸರ್ಕಾರ ಕೈಹಾಕಿದ್ದು, ರೈತರು ಮತ್ತು ದೇಶದ ಜನ ಸಾಮಾನ್ಯ ಮುಂದಿನ ದಿನಗಳಲ್ಲಿ ಕಾರ್ಪೊರೇಟ್ ಕಂಪನಿಗಳ ಗುಲಾಮರಾಗುತ್ತಾರೆ. ವಂಶ ಪಾರಂಪರ್ಯದಿಂದ ಉಳಿಸಿಕೊಂಡ ಭೂಮಿಯನ್ನು ಮುಂದಿನ ಪೀಳಿಗೆ ಕಳೆದುಕೊಳ್ಳಲಿದೆ. ಆಹಾರಕ್ಕಾಗಿ ಸಂಕಟಪಡುವ ದಿನ ದೂರವಿಲ್ಲ’ ಎಂದು ಕಳವಳ ವ್ಯಕ್ತಪಡಿಸಿದರು.

ಕೃಷಿ ಕಾಯ್ದೆ ತಿದ್ದುಪಡಿ ನೀತಿ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.

ಕಿಸಾನ್ ಮೋರ್ಚಾ ಸಂಚಾಲಕರಾದ ಎಂ.ಶ್ರೀಕಾಂತ್, ಎನ್.ರಮೇಶ್, ಕೆ.ಎಲ್.ಅಶೋಕ್, ಕೆ.ಪಿ.ಶ್ರೀಪಾಲ್, ಯಮುನಾ ರಂಗೇಗೌಡ, ಸಿಐಟಿಯು ಪ್ರಮುಖರಾದ ಹನುಮಕ್ಕ, ಮಧುಸೂದನ್, ನಾಗರಾಜ್ ಕಂಕಾರಿ, ಶಾಂತಾ ಸುರೇಂದ್ರ, ಎಚ್.ಪಿ.ಗಿರೀಶ್, ರವಿಕುಮಾರ್, ಫಾಲಾಕ್ಷಿ, ಹಾಲೇಶಪ್ಪ ಇದ್ದರು.

‘ಸಂಪೂರ್ಣ ಬಂದ್ ಆಗದಿದ್ದರೂ ಬೆಂಬಲ’
ಕೊರೊನಾ ಸಂಕಷ್ಟದಲ್ಲಿರುವ ವ್ಯಾಪಾರಸ್ಥರು, ಆಟೊ ಚಾಲಕರು, ಖಾಸಗಿ ಬಸ್ ಮಾಲೀಕರು ನೈತಿಕ ಬೆಂಬಲ ವ್ಯಕ್ತಪಡಿಸಿದ್ದಾರೆ. ರೈತರ ಭೂಮಿಯನ್ನು ಕಸಿದುಕೊಂಡು ಕಾರ್ಪೋರೇಟ್ ಕಂಪನಿಗಳಿಗೆ ಅನುಕೂಲ ಮಾಡಿಕೊಡುವ ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ತಿದ್ದುಪಡಿ ನೀತಿಯನ್ನು ರೈತರು ಸಂಪೂರ್ಣವಾಗಿ ವಿರೋಧಿಸಿದ್ದಾರೆ. ಮುಂದಿನ ದಿನಗಳಲ್ಲಿ ಈ ಪ್ರತಿಭಟನೆ ಇನ್ನೂ ದೊಡ್ಡ ಪ್ರಮಾಣದಲ್ಲಿ ಹೊರಹೊಮ್ಮಲಿದೆ ಎಂದುರೈತ ಸಂಘದ ಗೌರವಾಧ್ಯಕ್ಷಎಚ್‌.ಆರ್‌. ಬಸವರಾಜಪ್ಪ ಹೇಳಿದರು.

‘ಬೆಳೆಗೆ ಸೂಕ್ತ ಬೆಲೆ ಕೊಡಿ’
ಯಾವುದೇ ಕಾರಣಕ್ಕೂ ಜೀವನಾವಶ್ಯಕ ವಸ್ತುಗಳ ಮಾರಾಟ ಮತ್ತು ಉತ್ಪನ್ನ ಕಾಯ್ದೆ ತಿದ್ದುಪಡಿ ಮಾಡಬಾರದು. ಎಪಿಎಂಸಿ ಕಾಯ್ದೆಗೆ ತಂದಿರುವ ತಿದ್ದುಪಡಿ ರದ್ದುಗೊಳಿಸಬೇಕು, ವಿದ್ಯುತ್ ಖಾಸಗೀಕರಣಕ್ಕೆ ಕೈ ಹಾಕಬಾರದು. ಕನಿಷ್ಠ ಬೆಂಬಲ ಬೆಲೆಯನ್ನು ಎಂಎಸ್‌ಪಿ ಕಾನೂನಿನ ಚೌಕಟ್ಟಿನಲ್ಲಿ ತರಬೇಕು. ರೈತರ ಬೆಳೆಗಳಿಗೆ ಸೂಕ್ತ ಬೆಲೆ ನಿಗದಿ ಮಾಡಬೇಕು ಎಂದು ರೈತ ನಾಯಕ ಕೆ.ಟಿ.ಗಂಗಾಧರ್ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT