ಶನಿವಾರ, ಆಗಸ್ಟ್ 13, 2022
24 °C

ಯೋಜನೆ ಪೂರ್ಣಗೊಳ್ಳದೇ ಚಿತ್ರದುರ್ಗಕ್ಕೆ ನೀರು: ರೈತ ಸಂಘ ಆಕ್ಷೇಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ತುಂಗಾದಿಂದ ಭದ್ರಾ ಜಲಾಶಯಕ್ಕೆ ನೀರು ಹರಿಸುವ ನಾಲಾ ಕಾಮಗಾರಿ ಪೂರ್ಣಗೊಳ್ಳದೆ ಚಿತ್ರದುರ್ಗಕ್ಕೆ ನೀರು ಹರಿಸಬಾರದು ಎಂದು ರೈತ ಸಂಘದ ಮುಖಂಡ ಕೆ.ಟಿ.ಗಂಗಾಧರ್ ಆಗ್ರಹಿಸಿದರು.

ಚಿತ್ರದುರ್ಗದ ವಾಣಿವಿಲಾಸ ಸಾಗರಕ್ಕೆ ಭದ್ರಾ ಜಲಾಶಯದಿಂದ ಪ್ರತಿ ವರ್ಷ 21.5 ಟಿಎಂಸಿ ಅಡಿ ನೀರು ಹರಿಸುವ ಯೋಜನೆ ರೂಪಿಸಲಾಗಿತ್ತು. ಅದಕ್ಕಾಗಿ ತುಂಗಾ ಜಲಾಶಯದಿಂದ 15.5 ಟಿಎಂಸಿ ಅಡಿ ನೀರು ಭದ್ರಾ ಜಲಾಶಯಕ್ಕೆ ಹರಿಸಲು ನಿರ್ಧರಿಸಲಾಗಿತ್ತು. ಈ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಯಂತ್ರಗಳನ್ನೂ ಅಳವಡಿಸಿಲ್ಲ. ಇದೇ ವೇಗದಲ್ಲಿ ಕಾಮಗಾರಿ ನಡೆದರೆ ಎರಡು ವರ್ಷಗಳು ಬೇಕಾಗುತ್ತದೆ. ಈ ಕಾಮಗಾರಿ ಪೂರ್ಣಗೊಳ್ಳದೇ ಚಿತ್ರದುರ್ಗಕ್ಕೆ ನೀರು ಹರಿಸಿದರೆ ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ತೊಂದರೆಯಾಗುತ್ತದೆ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಕಳವಳ ವ್ಯಕ್ತಪಡಿಸಿದರು.

ತುಂಗಾ ಜಲಾಶಯದಿಂದ ಈ ವರ್ಷ ಲಕ್ಷಾಂತರ ಕ್ಯುಸೆಕ್ ನೀರು ವ್ಯರ್ಥವಾಗಿ ಹರಿದುಹೋಗಿದೆ. ಭದ್ರಾ ಜಲಾಶಯಕ್ಕೆ ನೀರು ಹರಿಸುವ ಕಾಮಗಾರಿ ತ್ವರಿತವಾಗಿ ಕೈಗೊಂಡರೆ ನೀರು ವ್ಯರ್ಥವಾಗುವುದನ್ನು ತಪ್ಪಿಸಬಹುದಿತ್ತು. ಕಾಮಗಾರಿ ಪೂರ್ಣಗೊಳಿಸಲು, ನಂತರವೇ ಚಿತ್ರದುರ್ಗಕ್ಕೆ ನೀರು ಹರಿಸಲು ಮುಖ್ಯಮಂತ್ರಿಗೂ ಪತ್ರ ಬರೆಯಲಾಗಿದೆ ಎಂದರು.

ಈ ವರ್ಷ ಭದ್ರಾ ಜಲಾಶಯದಲ್ಲಿ 67.650 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಇದರಲ್ಲಿ 13.832 ಟಿಎಂಸಿ ಅಡಿ ನೀರು ಡೆಡ್ ಸ್ಟೊರೇಜ್‍. 8 ಟಿಎಂಸಿ ಅಡಿ ನೀರು ಚಿಕ್ಕಮಗಳೂರು, ದಾವಣಗೆರೆ, ಹಾವೇರಿ, ಗದಗ ಜಿಲ್ಲೆಗಳ ಕುಡಿಯುವ ನೀರಿಗೆ ಬಳಸಿಕೊಳ್ಳಲಾಗುತ್ತದೆ. ಆಗ ಜಲಾಶಯದಲ್ಲಿ 46 ಟಿಎಂಸಿ ಅಡಿ ನೀರು ಮಾತ್ರ ಉಳಿಯುತ್ತದೆ. ಇದರಲ್ಲಿ 6.5 ಟಿಎಂಸಿ ನೀರನ್ನು ವಾಣಿ ವಿಲಾಸ ಸಾಗರಕ್ಕೆ ಹರಿಸಿದರೆ ಉಳಿಯುವುದು 39.5 ಟಿಎಂಸಿ ನೀರು ಮಾತ್ರ. ಇದರಿಂದ ಅಚ್ಚುಕಟ್ಟು ಪ್ರದೇಶದ ಬೇಸಿಗೆ ಬೆಳೆಗಳಿಗೆ ನೀರಿನ ಅಭಾವವಾಗುತ್ತದೆ ಎಂದರು.

ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ಅನುಷ್ಠಾನಕ್ಕೆ ತೋರುತ್ತಿರುವ ಆಸಕ್ತಿ ತುಂಗಾ ಜಲಾಶದಿಂದ ಭದ್ರಾ ಜಲಾಶಯಕ್ಕೆ ನೀರು ಹರಿಸುವ ಕಾಮಗಾರಿಯ ಬಗ್ಗೆಯೂ ತೋರಿಸಿದರೆ ರೈತರಿಗೆ ಹೆಚ್ಚಿನ ಅನುಕೂಲವಾಗಿಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ವೀರೇಶ್, ಕೆ.ಆರ್.ಮಂಜುನಾಥ್, ಸಣ್ಣರಂಗಪ್ಪ, ಪರಮೇಶ್ವರ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.