ಭಾನುವಾರ, ಡಿಸೆಂಬರ್ 8, 2019
25 °C
ಕೇಂದ್ರ ಕಾರಾಗೃಹ: ಕಾಯಿಲೆ ಕಾಣಿಸಿಕೊಂಡರೆ ಮೆಗ್ಗಾನ್ ಆಸ್ಪತ್ರೆಯತ್ತ ದೌಡು

ಕೈದಿಗಳ ಆರೋಗ್ಯ ತಪಾಸಣೆಗೂ ವೈದ್ಯರ ಬರ!

ಚಂದ್ರಹಾಸ ಹಿರೇಮಳಲಿ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಸುಸಜ್ಜಿತ ಕಟ್ಟಡ, ಅತ್ಯುತ್ತಮ ಮೂಲಸೌಕರ್ಯ ಹೊಂದಿರುವ ಇಲ್ಲಿನ  ಕೇಂದ್ರ ಕಾರಾಗೃಹ ದಲ್ಲಿ ಆರೋಗ್ಯ ಸಮಸ್ಯೆಗೆ ಒಳಗಾದ ಕೈದಿಗಳಿಗೆ ಆರು ತಿಂಗಳಿನಿಂದ ವೈದ್ಯಕೀಯ ಸೇವೆ ಸ್ಥಗಿತಗೊಂಡಿದೆ.

ವಿಚಾರಣಾಧೀನ ಕೈದಿಗಳ ನೆಲೆಯಾಗಿದ್ದ ಹಳೇ ಕಾರಾಗೃಹವನ್ನು ಸೋಗಾನೆ ಬಳಿ 12 ಎಕರೆಯಲ್ಲಿ ನೂತನವಾಗಿ ನಿರ್ಮಿಸಿದ ಸುಸಜ್ಜಿತ ಕಟ್ಟಡಕ್ಕೆ ಎರಡು ವರ್ಷಗಳ ಹಿಂದೆ ಸ್ಥಳಾಂತರಿಸಲಾಗಿತ್ತು. ಈಗ ಅಲ್ಲಿ ವಿಚಾರಣಾಧೀನ ಕೈದಿಗಳ ಜತೆ ಶಿಕ್ಷಗೆ ಒಳಗಾದ ಅಪರಾಧಿಗಳಿಗೂ ಅವಕಾಶ ಕಲ್ಪಿಸಲಾಗಿದೆ. ಪ್ರಸ್ತುತ 480 ಪುರುಷ, 50 ಮಹಿಳಾ ಕೈದಿಗಳು ಇದ್ದಾರೆ. ಇಷ್ಟೊಂದು ಸಂಖ್ಯೆಯ ಕೈದಿಗಳ ಆರೋಗ್ಯ ನೋಡಿಕೊಳ್ಳಲು, ಆರೋಗ್ಯದಲ್ಲಿ ದಿಢೀರ್ ಏರುಪೇರು ಉಂಟಾದಾಗ ಚಿಕಿತ್ಸೆ ನೀಡಲು ಒಬ್ಬ ವೈದ್ಯರೂ ಇಲ್ಲ. 

ಶಿವಮೊಗ್ಗ ನಗರದ  ಹೃದಯ ಭಾಗದಲ್ಲಿ ಇದ್ದ ಜಿಲ್ಲಾ ಕಾರಾಗೃಹದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದ ಡಾ.ರಘು ಪ್ರಸಾದ್ ಅವರೇ ನೂತನ ಕೇಂದ್ರ ಕಾರಾಗೃಹದಲ್ಲೂ ಸೇವೆ ಮುಂದುವರಿಸಿ
ದ್ದರು. 6 ತಿಂಗಳ ಹಿಂದೆ ಕಾರಾಗೃಹದಲ್ಲಿನ ಕೈದಿಗಳ ತಂಡ ವೈದ್ಯರ ಮೇಲೆ ಹಲ್ಲೆ  ನಡೆಸಿತ್ತು.  ಈ ಕಾರಣಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿಯೋಜಿಸಿದ್ದ 
ವೈದ್ಯರು 15 ವರ್ಷಗಳ ಸೇವೆಗೆ ವಿದಾಯ ಹೇಳಿದ್ದರು. ನಂತರ ಬದಲಿ ವೈದ್ಯರ ನೇಮಕವನ್ನೇ ಮಾಡಿಲ್ಲ. ಕೆಲವು ಕೈದಿಗಳು ಮಾಡಿದ ತಪ್ಪಿಗೆ ಇತರ ಕೈದಿಗಳು ಪರಿತಪಿಸುವಂತಾಗಿದೆ. 

ಕಾರಾಗೃಹದಲ್ಲಿ 14 ಕೈದಿಗಳು ಸಕ್ಕರೆ ಕಾಯಿಲೆ, ಐವರು ಟಿ.ಬಿ ಕಾಯಿಲೆ ಇರುವವರು ಇದ್ದಾರೆ. ಚರ್ಮ ಸಂಬಂಧಿ ಸಮಸ್ಯೆಯಿಂದ ಬಳಲುವವರ ಸಂಖ್ಯೆಯೂ ಹೆಚ್ಚಾಗಿದೆ. ಕೆಲವರಿಗೆ ಕಣ್ಣಿನ ಸಮಸ್ಯೆ ಇದೆ. ವೈದ್ಯರಿಲ್ಲದ ಕಾರಣಕ್ಕೆ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಹೃದಯ ಸಂಬಂಧಿ ಸಮಸ್ಯೆ ಹೊಂದಿದ್ದ ಮೂವರು ಕೈದಿಗಳನ್ನು ಬೆಂಗಳೂರು ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ. ಈಗ ಅವರು ಜಯದೇವ ಹೃದ್ರೋಗ ಸಂಸ್ಥೆಯಿಂದ ಚಿಕಿತ್ಸೆ 
ಪಡೆಯುತ್ತಿದ್ದಾರೆ.

ಮೆಗ್ಗಾನ್ ಆಸ್ಪತ್ರೆಯತ್ತ ದೌಡು: ಕಾರಾಗೃಹದಲ್ಲಿ ಕಾಯಂ ವೈದ್ಯರಿಲ್ಲದ ಕಾರಣ ಕಾರಾಗೃಹದಿಂದ ಪ್ರತಿದಿನ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರೋಗಿಗಳನ್ನು ಕರೆದುಕೊಂಡು ಬರಲಾಗುತ್ತಿದೆ. ತುರ್ತು ಅಗತ್ಯವಿದ್ದರೆ ಅಲ್ಲಿಯ ವೈದ್ಯರನ್ನೇ ಕಾರಾಗೃಹಕ್ಕೆ ಕರೆತರಲಾಗುತ್ತದೆ. ಚಿಕಿತ್ಸೆ ನೀಡಿದ ನಂತರ ಮತ್ತೆ ಆಸ್ಪತ್ರೆಗೆ ಮರಳಿ ಬಿಡುತ್ತಾರೆ. ಶಂಕರ ಹಾಗೂ ವಾಸನ್ ಐ ಕೇರ್ ಆಸ್ಪತ್ರೆಯ ವೈದ್ಯರಿಂದ ಕಣ್ಣಿನ ತಪಾಸಣಾ ಶಿಬಿರ ನಡೆಸಲಾಗುತ್ತಿದೆ. ಭದ್ರಾವತಿಯ ನಿರ್ಮಲ ಆಸ್ಪತ್ರೆ, ಪ್ರಶಾಂತಿನಿ ಸಾಯಿ ಸೇವಾ ಟ್ರಸ್ಟ್ ಸಹಯೋಗದಲ್ಲಿ ಪ್ರತಿ 15 ದಿನಗಳಿಗೊಮ್ಮೆ ಕಾರಾಗೃಹದಲ್ಲಿ ಆರೋಗ್ಯ ತಪಾಸಣಾ ಶಿಬಿರ 
ಆಯೋಜಿಸಲಾಗುತ್ತಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಗುತ್ತಿಗೆ ಆಧಾರದ ಮೇಲೆ ವೈದ್ಯರ ನೇಮಕ ಮಾಡಿಕೊಳ್ಳಲು ಕಾರಾಗೃಹ ಇಲಾಖೆಗೆ ಅನುಮತಿ ನೀಡಿದೆ.  ಹೀಗೆ ನೇಮಕಗೊಂಡ ವೈದ್ಯರು ಬೆಳಗ್ಗೆಯಿಂದ ಸಂಜೆಯ ತನಕ ಕಾರಾಗೃಹದಲ್ಲೇ ಇದ್ದು, ಕೈದಿಗಳಿಗೆ ಆರೋಗ್ಯ ತಪಾಸಣೆ ನಡೆಸಿ ಚಿಕಿತ್ಸೆ ನೀಡಬೇಕಾಗುತ್ತದೆ. ಆದರೆ, ಕಾರಾಗೃಹದಲ್ಲಿ ಸೇವೆ ಸಲ್ಲಿಸಲು ವೈದ್ಯರೂ ಆಸಕ್ತಿ
ತೋರುತ್ತಿಲ್ಲ.

ಕಾರಾಗೃಹದ ಮುಖ್ಯ ಅಧೀಕ್ಷಕ ಡಾ.ಪಿ.ರಂಗನಾಥ್ ಅವರು ಆಯುರ್ವೇದ ವೈದ್ಯರು. ಹಲವು ಪ್ರಕರಣಗಳಲ್ಲಿ ಅವರೇ ಕೈದಿಗಳ ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ.  ಸಣ್ಣಪುಟ್ಟ ಕಾಯಿಲೆಗಳಿಗೆ ಔಷಧ ಸೂಚಿಸುತ್ತಿದ್ದಾರೆ.  ಕೆಲಸದ ಒತ್ತಡ, ಕಾರ್ಯ ನಿಮಿತ್ತ ಬೇರೆ ಊರಿಗೆ ತೆರಳಿದ ವೇಳೆ ಕೈದಿಗಳಿಗೆ ತೊಂದರೆ ಆಗುತ್ತಿದೆ. ಅದರಲ್ಲೂ ರಾತ್ರಿ ಸಮಯದಲ್ಲಿ ಆರೋಗ್ಯದಲ್ಲಿ ಏರುಪೇರಾದರೆ ಕಾರಾಗೃಹ ಸಿಬ್ಬಂದಿ ವೈದ್ಯರನ್ನು ಕರೆ ತರಲು ಹರಸಾಹಸ ಪಡುತ್ತಾರೆ. 

ಪ್ರತಿಕ್ರಿಯಿಸಿ (+)