ಶುಕ್ರವಾರ, ಆಗಸ್ಟ್ 23, 2019
22 °C
ಕೊಲ್ಹಾರ ಪಟ್ಟಣದ ಆರಾಧ್ಯ ದೈವ ದಿಂಗಬರೇಶ್ವರ

ಶ್ರಾವಣ; ಪ್ರತಿದಿನ ಜರುಗುವ ರುದ್ರಾಭಿಷೇಕ

Published:
Updated:
Prajavani

ಕೊಲ್ಹಾರ: ಪಟ್ಟಣದ ದಿಗಂಬರೇಶ್ವರ ಸಂಸ್ಥಾನ ಮಠದ ದಿಂಗಬರೇಶ್ವರ ಜಗದ್ಗುರು ಕೊಲ್ಹಾರ ಪಟ್ಟಣದ ಭಕ್ತರ ಪಾಲಿನ ಆರಾಧ್ಯ ದೈವ. ಪವಿತ್ರ ಶ್ರಾವಣ ಮಾಸದಲ್ಲಿ ದಿಗಂಬರೇಶ್ವರ ಗದ್ದುಗೆಗೆ ಪ್ರತಿದಿನ ರುದ್ರಾಭೀಷೇಕ ಹಾಗೂ ವಿಶೇಷ ಪೂಜಾ ಕೈಂಕರ್ಯಗಳು ನೆರವೇರುತ್ತವೆ. ಇದು ಸುಮಾರು ಒಂದು ಶತಮಾನದಿಂದಲೂ ಆಚರಿಸಿಕೊಂಡು ಬಂದಿರುವ ದೈವ ಸೇವೆ ಎಂಬುದು ಶ್ರೀಮಠದ ವಿಶೇಷ.

ಶ್ರಾವಣ ಬಂದರೆ ಶ್ರೀಮಠದ ಭಕ್ತರಿಗೆ ವಿಶೇಷ ಹುಮ್ಮಸ್ಸು. ಚಳಿ, ಮಳೆಯನ್ನು ಲೆಕ್ಕಿಸದೇ ಶ್ರಾವಣ ಮಾಸದ ಪ್ರತಿ ದಿನವೂ ಬೆಳಿಗ್ಗೆ ಶ್ರೀಮಠಕ್ಕೆ ಮಹಿಳೆಯರು, ಮಕ್ಕಳಾದಿಯಾಗಿ ದೊಡ್ಡ ಭಕ್ತಗಣವೇ ಬರುತ್ತದೆ. ಇಲ್ಲಿ ಜರುಗುವ ರುದ್ರಾಭಿಷೇಕ ಹಾಗೂ ವಿಶೇಷ ಪೂಜಾ ಕೈಂಕರ್ಯದಲ್ಲಿ ಎಲ್ಲರೂ ಭಕ್ತಿಭಾವದಿಂದ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗುತ್ತಾರೆ.

‘ಶ್ರಾವಣ ಮಾಸದಲ್ಲಿ ಪ್ರತಿದಿನ ಬೆಳಿಗ್ಗೆ ನಡೆಯುವ ರುದ್ರಾಭಿಷೇಕ ಪೂಜಾಕಾರ್ಯದ ಆಚರಣೆ ಇಂದು ನಿನ್ನೆಯದಲ್ಲ. ಇದು ಪವಾಡ ಪುರುಷ, ವಾಕ್ಸಿದ್ಧಿಯೋಗಿ ಕಲ್ಲಪಯ್ಯ ಮಹಾಶೀವಯೋಗಿ ಪೂರ್ವದಿಂದಲೂ ಅಂದರೆ, ಸುಮಾರು ನೂರಾರು ವರ್ಷಗಳಿಂದ ಆಚರಿಸಿಕೊಂಡು ಬಂದಿರುವ ಸಂಪ್ರದಾಯ ಎನ್ನುತ್ತಾರೆ’ ಮಠದ ಪೀಠಾಧಿಪತಿ ಕಲ್ಲಿನಾಥ ಸ್ವಾಮೀಜಿ.

ಶ್ರಾವಣ ಮಾಸ ಸಮೀಪಿಸುತ್ತಿದ್ದಂತೆ ಶ್ರೀಮಠದ ಭಕ್ತರು ವಿವಿಧ ಸಂಕಲ್ಪಗಳನ್ನು ಇಟ್ಟುಕೊಂಡು ರುದ್ರಾಭಿಷೇಕದ ಪೂಜಾ ಸೇವೆಗಾಗಿ ಮೊದಲೇ ತಮ್ಮ ಹೆಸರನ್ನು ನೋಂದಾಯಿಸುತ್ತಾರೆ. ಭಕ್ತರ ಸಂಖ್ಯೆ ಹೆಚ್ಚಾಗಿರುವ ಕಾರಣ ದಿನಕ್ಕೆ 3-4 ಭಕ್ತರ ಹೆಸರಿನಲ್ಲಿ ರುದ್ರಾಭಿಷೇಕ ಜರುಗುತ್ತದೆ. ಸುಮಾರು 2-3 ತಾಸು ಜರುಗುವ ಪೂಜೆಯನ್ನು ಭಕ್ತರು ಭಕ್ತಿಭಾವ ಪರವಶರಾಗಿ ದೇವರನ್ನು ಕಣ್ತುಂಬಿಕೊಳ್ಳುತ್ತಾರೆ.

‘ನಾನು ಸುಮಾರು 40 ವರ್ಷಗಳಿಂದ ದಿಗಂಬರೇಶ್ವರ ಮುತ್ಯಾನ ಸೇವೆ ಮಾಡುತ್ತ ಬಂದಿದ್ದೇನೆ. ಪ್ರತಿದಿನ ಬಂದು ಮುತ್ಯಾನ ದರ್ಶನ ಮಾಡುತ್ತೇನೆ. ಶ್ರಾವಣ ಮಾಸದಲ್ಲಿ ಜರುಗುವ ಅಭಿಷೇಕ, ಪೂಜೆ, ಭಕ್ತಿಗೀತೆ, ಮಂಗಳಾರತಿ ಹಾಗೂ ಕರ್ಪೂರಾರತಿ ಗೀತೆಗಳನ್ನು ಹಾಡಿ ದೇವರ ಸೇವೆ ಮಾಡುತ್ತೇನೆ. ದೇವರ ಕೃಪೆ ನಮ್ಮ ಮೇಲಿದೆ ಎನ್ನುತ್ತಾರೆ’ ಮಠದ ಭಕ್ತೆ, ಕೊಲ್ಹಾರ ಪಟ್ಟಣದ ಮಲ್ಲಮ್ಮ ಶಿವಾನಂದ ದೇಸಾಯಿ.

‘ಶ್ರಾವಣ ಮಾಸದ ಮೂರನೇ ಗುರುವಾರ ಅಜ್ಜನವರ ಪರುವು ಆಚರಿಸಲಾಗುವುದು. ಅಂದು ಅಜ್ಜನವರ ಕುದುರೆ ಮೆರವಣಿಗೆ ಮೂಲಕ ಕಳ್ಳಿಮಠಕ್ಕೆ ತೆರಳಲಾಗುವುದು. ಅಲ್ಲಿ ಊರಿನ ಎಲ್ಲಾ ಭಕ್ತರು ಮನೆಯಿಂದ ಬುತ್ತಿ ಕಟ್ಟಿಕೊಂಡು ಬರುತ್ತಾರೆ. ಅಲ್ಲದೇ ಮಠದ ವತಿಯಿಂದ ಅನ್ನ ಸಂತರ್ಪಣೆ ಸಹ ಏರ್ಪಡಿಸಲಾಗಿರುತ್ತದೆ. ಕಳ್ಳಿಮಠದಿಂದ ಸಂಜೆ ಮರಳಿ ದಿಗಂಬರೇಶ್ವರ ಮಠಕ್ಕೆ ಬಂದ ನಂತರ ದೇವರ ಹೇಳಿಕೆಗಳು ಜರುಗುತ್ತವೆ. ಇದು ಸಹ ಶ್ರಾವಣಮಾಸದ ವಿಶೇಷ ಆಚರಣೆ ಎನ್ನುತ್ತಾರೆ’ ಮಠದ ಭಕ್ತೆ, ಮುತ್ತಕ್ಕ ಸದಾಶಿವ ಗಣಿ.

Post Comments (+)