ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ ದೇವರು ಶಿವಮೊಗ್ಗಕ್ಕೆ ಬಂದು 12 ವರ್ಷಗಳಾದವು

Last Updated 21 ಜನವರಿ 2019, 15:45 IST
ಅಕ್ಷರ ಗಾತ್ರ

ಶಿವಮೊಗ್ಗ: ನಡೆದಾಡುವ ದೇವರು ಎಂದೇ ಜನರು ನಂಬಿರುವ ಸಿದ್ಧಗಂಗೆಯ ಶಿವಕುಮಾರ ಸ್ವಾಮೀಜಿ ಅವರು ಕೊನೆಯ ಬಾರಿ ಶಿವಮೊಗ್ಗಕ್ಕೆ ಬಂದದ್ದು 12 ವರ್ಷಗಳ ಹಿಂದೆ.

ಗಾಂಧಿ ಬಜಾರ್‌ನ ಬಸವೇಶ್ವರ ವೀರಶೈವ ಸೇವಾ ಸಮಾಜ ಸಂಘ ನಿರ್ಮಿಸಿದ್ದ ಬಸವ ಭವನದ ಉದ್ಘಾಟನಾ ಸಮಾರಂಭಕ್ಕೆ ಬಂದಿದ್ದರು. ಸೆ. 6ರಂದು ನಡೆದ ಕಾರ್ಯಕ್ರಮದಲ್ಲಿ ಶ್ರೀಗಳ ಜತೆಗೆ ಬೆಕ್ಕಿನ ಕಲ್ಮಠದ ಮಲ್ಲಿಕಾರ್ಜುನ ಮರುಘ ರಾಜೇಂದ್ರ ಸ್ವಾಮೀಜಿ, ಮಳಲಿ ಮಠದ ಗುರು ನಾಗಭೂಷಣ ಸ್ವಾಮೀಜಿ, ಅಮದಿನ ಉಪ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಜಲ ಸಂಪನ್ಮೂಲ ಸಚಿವ ಕೆ.ಎಸ್. ಈಶ್ವರಪ್ಪ, ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ವರ ಭಾಗವಸಿದ್ದರು. ನಂತರ ಶ್ರೀಗಳು ಯಡಿಯೂರಪ್ಪ ಒಡೆತನದ ಪೆಸಿಟ್ ಕಾಲೇಜು ಕಾರ್ಯಕ್ರಮಕ್ಕೆ ತೆರಳಿದ್ದರು.

‘ಸಿದ್ಧಗಂಗಾ ಶ್ರೀ ಜತೆಗೆ ಅವರ ಮಠದಲ್ಲೇ ಇಷ್ಟಲಿಂಗ ಪೂಜೆ ಮಾಡಿ, ಪ್ರಸಾದ ಸೇವಿಸಿದ್ದೆ. ಪೂಜಾ ಸಾಮಗ್ರಿಗಳನ್ನು ಮುಟ್ಟಿ ಆಶೀರ್ವದಿಸಿ ಕೊಟ್ಟಿದ್ದರು. ಮೂರನೇ ಬಾರಿ ಹೋದಾಗ ಸಾಕಷ್ಟು ಸುಸ್ತಾಗಿದ್ದರು. ಅವರೊಂದು ಮರೆಯಲಾಗದ ಚೇತನ’ ಎಂದು ಬಸವ ಕೇದ್ರದ ಬಸವ ಮರುಳಸಿದ್ದ ಸ್ವಾಮೀಜಿ ನೆನಪಿಸಿಕೊಂಡರು.

ಬೆಕ್ಕಿನ ಕಲ್ಮಠದ ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮೀಜಿ ಅವರಿಗೂ ಸಿದ್ಧಗಂಗಾ ಶ್ರೀಗಳಿಗೂ ಬಿಡಿಸಲಾರದ ನಂಟು. ಬೆಕ್ಕಿನ ಕಲ್ಮಠ ಶ್ರೀಗಳ ಪೂರ್ವಾಶ್ರಮದ ತಂದೆ ಹಾಗೂ ಸಿದ್ಧಗಂಗಾ ಶ್ರೀ ಬೆಂಗಳೂರಿನ ಗುಬ್ಬಿ ತೋಟರಪ್ಪನ ಛತ್ರದಲ್ಲಿ ಒಟ್ಟಿಗೆ ಇದ್ದರು. ಶ್ರೀಗಳು ಐದಾರು ವರ್ಷಕ್ಕೆ ಹಿರಿಯರು ಎಂದು ನೆನಪು ಮಾಡಿಕೊಂಡರು.

ಸಿದ್ಧಗಂಗಾ ನಿಧನಕ್ಕೆ ಎಲ್ಲೆಡೆ ಕಂಬನಿ:

ಶಿವಮೊಗ್ಗ: ನಡೆದಾಡುವ ದೇವರು, ಶತಾಯುಷಿ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ನಿಧನಕ್ಕೆ ಜಿಲ್ಲೆಯ ವಿವಿಧ ಮಠಾಧೀಶರು, ರಾಜಕೀಯ ಪಕ್ಷಗಳು, ಸಂಘ ಸಂಸ್ಥೆಗಳು, ಸಾರ್ವಜನಿಕರು ಕಂಬನಿ ಮಿಡಿದಿದ್ದಾರೆ.

ಜೆಡಿಎಸ್‌: ಶ್ರೀಗಳ ನಿಧನದ ಹಿನ್ನಲೆಯಲ್ಲಿ ಜಿಲ್ಲಾ ಜೆಡಿಎಸ್‌ ಕಚೇರಿಯಲ್ಲಿ ಸಭೆ ನಡೆಸಿ ಸಂತಾಪ ಸೂಚಿಸಲಾಯಿತು. ಜಿಲ್ಲಾ ಘಟಕದ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಮಾತನಾಡಿ, ‘ರಾಜ್ಯದಲ್ಲಿ ಆಹಾರ, ಆರೋಗ್ಯ, ಶಿಕ್ಷಣದ ಕ್ರಾಂತಿಯನ್ನೇ ಮಾಡಿದ ಸಿದ್ಧಗಂಗಾ ಶ್ರೀಗಳು ನಿಧನ ಹೊಂದಿರುವುದು ಇಡೀ ಸಮಾಜಕ್ಕೆ ತುಂಬಲಾರದ ನಷ್ಟ’ ಎಂದು ವಿಷಾದ ವ್ಯಕ್ತಪಡಿಸಿದರು. ಜೆಡಿಎಸ್‌್ ಮುಖಂಡರಾದ ಜಿ.ಮಾದಪ್ಪ, ಜಿ.ಡಿ.ಮಂಜುನಾಥ್, ಶಾಂತ ಸುರೇಂದ್ರ, ಸಿದ್ದಪ್ಪ ಇದ್ದರು.

ಬಿಜೆಪಿ: ಶ್ರೀಗಳ ನಿಧನಕ್ಕೆ ಜಿಲ್ಲಾ ಬಿಜೆಪಿಯಿಂದಲೂ ಸಂತಾಪ ಸೂಚಿಸಲಾಯಿತು. ನಗರದ ಗೋಪಿವೃತ್ತದಲ್ಲಿ ಶ್ರೀಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಸಂತಾಪ ಸೂಚಿಸಲಾಯಿತು. ಶಾಸಕ ಕೆ.ಎಸ್.ಈಶ್ವರಪ್ಪ, ಮೇಯರ್ ಲತಾ ಗಣೇಶ್, ಉಪಮೇಯರ್ ಚನ್ನಬಸಪ್ಪ, ಎಸ್‌.ಎಸ್‌್.ಜ್ಯೋತಿಪ್ರಕಾಶ್, ಬಳ್ಳೇಕೆರೆ ಸಂತೋಷ್, ವೀರಭದ್ರಪ್ಪ ಪೂಜಾರ್, ಪಿ.ರುದ್ರೇಶ್ ಇದ್ದರು.

ಕಾಂಗ್ರೆಸ್‌: ಜಿಲ್ಲಾ ಕಾಂಗ್ರೆಸ್‌ನಿಂದಲೂ ಶ್ರೀಗಳ ನಿಧನಕ್ಕೆ ಸಂತಾಪ ಸೂಚಿಸಲಾಯಿತು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಅಧ್ಯಕ್ಷತೆಯಲ್ಲಿ ಸಂತಾಪ ಸಭೆ ನಡೆಸಿ, ಮೌನ ಆಚರಿಸಲಾಯಿತು. ಮಾಜಿ ಶಾಸಕ ಎಚ್.ಎಂ.ಚಂದ್ರಶೇಖರಪ್ಪ, ಜೀವ ವೈವಿದ್ಯ ಮಂಡಳಿ ಅಧ್ಯಕ್ಷ ಎಸ್.ಪಿ.ಶೇಷಾದ್ರಿ, ಸಿ.ಎಸ್.ಚಂದ್ರಭೂಪಾಲ, ಜಿ.ಪಲ್ಲವಿ ಇದ್ದರು.

ಜಿಲ್ಲಾ ಕ್ರೈಸ್ತ ಒಕ್ಕೂಟ: ಸಿದ್ಧಗಂಗಾ ಶ್ರೀಗಳ ನಿಧನಕ್ಕೆ ಜಿಲ್ಲಾ ಕ್ರೈಸ್ತ ಒಕ್ಕೂಟ ಸಂತಾಪ ಸೂಚಿಸಿದೆ. ಒಕ್ಕೂಟದ ಅಧ್ಯಕ್ಷ ಬಿ.ಏಸುದಾಸ್ ಮಾತನಾಡಿ, ‘ಸಮಾಜಕ್ಕೆ ಸಿದ್ಧಗಂಗಾ ಶ್ರೀಗಳ ಕೊಡುಗೆ ಅಪಾರ. ಅವರು ಬಡವರು, ನಿರ್ಗತಿಕರಿಗಾಗಿ ಬದುಕಿದವರು. ನಿಸ್ವಾರ್ಥದಿಂದ ಸಮಾಜದ ಏಳಿಗೆಗೆ ಸೇವೆ ಮಾಡಿದ್ದಲ್ಲದೆ, ನಿಷ್ಕಲ್ಮಷ ವ್ಯಕ್ತಿತ್ವದಿಂದ ಕೋಟ್ಯಂತರ ಭಕ್ತಾದಿಗಳನ್ನು ಪಡೆದಿದ್ದಾರೆ. ಅವರ ಅಗಲಿಕೆಯಿಂದ ಇಡೀ ಸಮಾಜ ಬಡವಾಗಿದೆ’ ಎಂದು ವಿಷಾಧಿಸಿದರು.

ಪ್ರೆಸ್‌ಟ್ರಸ್ಟ್‌ ಸಂತಾಪ:

ಶಿವಮೊಗ್ಗದ ಪ್ರೆಸ್ ಟ್ರಸ್ಟ್ ನಲ್ಲಿ ಸಿದ್ಧಗಂಗಾ ಶ್ರೀಗಳು ಶಿವೈಕ್ಯರಾದ ಹಿನ್ನೆಲೆಯಲ್ಲಿಸೋಮವಾರ ಸಂಜೆ ಪತ್ರಕರ್ತರು ಶ್ರೀಗಳಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ಶ್ರದ್ದಾಂಜಲಿ ಸಭೆಯಲ್ಲಿ ಪ್ರೆಸ್ ಟ್ರಸ್ಟ್ ನ ಅಧ್ಯಕ್ಷಮಂಜುನಾಥ್ ಮಾತನಾಡಿ, ನಡೆದಾಡುವ ದೇವರುಎಂದುಹೆಸರು ವಾಸಿಯಾದ ಸಿದ್ಧಗಂಗಾ ಶ್ರೀಗಳಿಗೆ ಶ್ರದ್ಧಾಂಜಲಿ ಎಂದರೆ ತಪ್ಪಾಗುತ್ತದೆ. ಅವರೇ ದೇವರಾಗಿದ್ದರಿಂದ ಅವರ ಅಗಲಿಕೆಗೆ ನಾವು ಗೌರವ ಸಲ್ಲಿಸಬಹುದು ಎಂದರು.

ಆಗಿನ ಕಾಲದಲ್ಲಿ ರೈತರ ಹೋರಾಟಕ್ಕೆ ರಾಜ್ಯದ ನಾನಾ ಭಾಗಗಳಿಂದ ಬಂದ ರೈತ ಸಂಘದ ಪದಾಧಿಕಾರಿಗಳಿಗೆ ಊಟ ಮತ್ತು ವಸತಿ ನೀಡಿ ಮಠ ಆಶ್ರಯ ನೀಡಿತ್ತು ಎಂದು ಸ್ಮರಿಸಿದರು.

ಅವರು ಬದುಕಿದ್ದಾಗ ತಾನು ಯಾವಾಗ ಸತ್ತರೂ ಸಹ ಮಕ್ಕಳ ಅನ್ನದಾಸೋಹಕ್ಕೆ ಚ್ಯುತಿಬರಬರಾದು ಎಂದು ಹೇಳಿದ ಹಿನ್ನಲೆಯಲ್ಲಿ ಅವರ ಸಾವಿನ ಸುದ್ದಿಯನ್ನ ತಡವಾಗಿ ಪ್ರಕಟಿಸಲಾಯಿತು ಎಂದರು.

ರಾಜೇಶ್ ಕಾಮತ್, ನೂರುಲ್ಲಾ ಎಂಬ ಮುಸಲ್ಮಾನ್ ಹುಡುಗನಿಗೆ ಮಠ ಹೇಗೆ ಆಶ್ರಯ ನೀಡಿತ್ತುಎಂದರೆ ಯಾವ ಜಾತಿ ಧರ್ಮಕ್ಕೂ ಮಠ ಸೀಮಿತಗೊಳ್ಳದೆ ಮಾನವೀಯತೆ ಹಾಗೂ ಸಾಮಾಜಿಕ ಕಳಕಳಿಯನ್ನಿಟ್ಟುಕೊಂಡು ಬೆಳೆದುನಿಂತ ಹಿನ್ನಲೆಯಲ್ಲಿ ಇಂದು ಮಠ ಮತ್ತು ಶ್ರೀಗಳಿಬ್ಬರೂ ಎಲ್ಲೆಯನ್ನ ದಾಟಿ ನಿಲ್ಲುತ್ತಾರೆ ಎಂದರು.

ಟ್ರಸ್ಟ್‌ನ ಪದಾಧಿಕಾರಿಗಳಾದ ಸೂರ್ಯನಾರಾಯಣ್, ಜೇಸುದಾಸ್, ಗಿರೀಶ್ ಉಮ್ರಾಯ್, ಪದ್ಮನಾಭ್, ಕಿರಣ್ ಕುಮಾರ್ ಕಂಕಾರಿ, ಪ್ರಶಾಂತ್ ಗೌಡ, ನಿತಿನ್, ರಾಮಚಂದ್ರ ಗುಣಾರಿಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT