ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದಿವಾಸಿಗಳಿಂದ ಚುನಾವಣೆ ಬಹಿಷ್ಕಾರ

ಹೆಬ್ಬಳ ಪುನರ್ವಸತಿ ಕೇಂದ್ರ ಮತ್ತು ನೇರಳಕುಪ್ಪೆ ಬಿ ಹಾಡಿ ಮೂಲಸಮಸ್ಯೆ ಬಗೆಹರಿಸಲು ಒತ್ತಾಯ
Last Updated 25 ಏಪ್ರಿಲ್ 2018, 12:22 IST
ಅಕ್ಷರ ಗಾತ್ರ

ಹುಣಸೂರು: ತಾಲ್ಲೂಕಿನ ಹೆಬ್ಬಳ್ಳ ಪುನರ್ವಸತಿ ಕೇಂದ್ರ ಮತ್ತು ನೇರಳಕುಪ್ಪೆ ಬಿ ಹಾಡಿ ಆದಿವಾಸಿಗಳು ವಿಧಾನಸಭೆ ಚುನಾವಣೆ ಬಹಿಷ್ಕರಿಸುವುದಾಗಿ ಘೋಷಿಸಿ ಫಲಕ ಹಾಕಿದ್ದಾರೆ.

ಆದಿವಾಸಿಗಳ ಸ್ವಾತಂತ್ರಕ್ಕಾಗಿ 2018ರ ವಿಧಾನಸಭೆ ಚುನಾವಣೆ ಬಹಿಷ್ಕಾರ ಎಂದು ಫ್ಲೆಕ್ಸ್‌ನಲ್ಲಿ ಮುದ್ರಿಸಿದ್ದು, ಅದನ್ನು ನೇರಳಕುಪ್ಪೆ ಬಿ ಹಾಡಿ ಪ್ರವೇಶದಲ್ಲೇ ಹಾಕಲಾಗಿದೆ.

ಹಾಡಿಯ ನಿವಾಸಿಗರಿಗೆ ಸೇರಬೇಕಿರುವ ಭೂಮಿಯ ಹಕ್ಕುಪತ್ರವನ್ನು ಅನ್ಯರಿಗೆ ವಿತರಿಸಿ ಗಿರಿಜನರು ಭೂಮಿ ವಂಚಿತರನ್ನಾಗಿ ಮಾಡಲಾಗಿದೆ. ಈ ಸಮಸ್ಯೆ ಬಗೆಹರಿಸದ ಹೊರತು ಚುನಾವಣೆ ಪ್ರಕ್ರಿಯೆಯಲ್ಲಿ ಭಾಗಹಿಸುವುದಿಲ್ಲ  ಎಂದು ಅವರು ಎಚ್ಚರಿಸಿದ್ಧಾರೆ.

‘ನಾಗರಹೊಳೆ ಅರಣ್ಯದಿಂದ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಗಿರಿಜನರಿಗೆ ‍ಪ್ಯಾಕೇಜ್‌ನಲ್ಲಿ ಘೋಷಿಸಿದಂತೆ ಕೃಷಿ ಭೂಮಿ ನೀಡಿದ್ದರೂ, ಅದಕ್ಕೆ ಈವರೆಗೂ ಹಕ್ಕು ಪತ್ರ ನೀಡಿಲ್ಲ.  ಹಕ್ಕುಪತ್ರ ಇಲ್ಲದೆ ಬೇಸಾಯಕ್ಕೆ ಬ್ಯಾಂಕ್‌ಗಳು ಸಾಲ ನೀಡುತ್ತಿಲ್ಲ. ಕೃಷಿಗೆ ಬಂಡವಾಳ ಇಲ್ಲದೆ ಖಾಸಗಿ ವ್ಯಕ್ತಿಗಳಿಂದ ಹಣ ಪಡೆದು ಮುಸುಕಿನ ಜೋಳ ಬೆಳೆದು ಅವರಿಗೆ ಮಾರಾಟ ಮಾಡಬೇಕಾಗಿದೆ. ಈ ಎಲ್ಲ ಸಮಸ್ಯೆ ಸಂಬಂಧಿಸಿದ ಅಧಿಕಾರಿಗಳಿಗೆ ಮನವರಿಕೆ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಚುನಾವಣೆ ಬಹಿಷ್ಕರಿಸಲು ನಿರ್ಧರಿಸಲಾಗಿದೆ ಎಂದು ಪುನರ್ವಸತಿ ಕೇಂದ್ರ ಹರೀಶ್‌  ತಿಳಿಸಿದರು.

ಕಾಡಿನಿಂದ 130 ಕುಟುಂಬವನ್ನು ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿ ಸಿದ್ದು, ನಾಗರಿಕ ಸೌಲಭ್ಯ ಇಲ್ಲದೆ 2013 ರಿಂದಲೂ ಜೀವನ ದೂಡುತ್ತಿದ್ದೇವೆ. ಕಳೆದ ಸಾಲಿನ ಚುನಾವಣೆಯಲ್ಲಿ ಎಲ್ಲ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರೂ ಈವರೆಗೂ ಯಾವುದೇ ಸಮಸ್ಯೆ ಬಗೆಹರಿಯಲಿಲ್ಲ. ಕುಡಿಯುವ ನೀರಿಗೂ ಸಮಸ್ಯೆ ಕಾಡುತ್ತಿದೆ ಎಂದು ಕೇಂದ್ರದ ನಿವಾಸಿ ಆದಿವಾಸಿ ಮಹಿಳೆ ದಿವ್ಯಾ ಆಕ್ರೋಶ ವ್ಯಕ್ತಪಡಿಸಿದರು.

ನಾಗಾಪುರ ಪುನರ್ವಸತಿ ಕೇಂದ್ರದ ಗಿರಜನರು ನಿರಂತರವಾಗಿ ನಡೆಸುತ್ತಿದ್ದ ಹೋರಾಟಕ್ಕೆ ಕಂದಾಯ ಇಲಾಖೆ ಸ್ಪಂದಿಸಿ 250 ಕುಟುಂಬಗಳಿಗೆ ನೀಡಿದ್ದ 730 ಹೆಕ್ಟೇರ್‌ ಪ್ರದೇಶದ ಗಡಿ ಗುರುತಿಸುವ ಕೆಲಸ ಮುಕ್ತಾಯಗೊಂಡಿದೆ. ಕೆರೆ, ಶಾಲೆ ಆವರಣ ಹೊರತುಪಡಿಸಿ ಭೂಮಿ ಗುರುತಿಸಲಾಗಿದೆ. ಬ್ಲಾಕ್‌ 1ರ ಫಲಾನುಭವಿಗೆ ಈಗಾಗಲೇ ತಲಾ 5 ಎಕರೆ ಭೂಮಿ ಗುರುತಿಸಿ ಕಲ್ಲು ಹಾಕಲಾಗಿದೆ. ಈ ಬ್ಲಾಕ್‌ನಲ್ಲಿ ಇಬ್ಬರಿಗೆ ಭೂಮಿ ಕೊರತೆ ಕಾಣಿಸಿದ್ದು, ಈ ಫಲಾನುಭವಿಗೆ ಬ್ಲಾಕ್‌ 2ರಲ್ಲಿ ಭೂಮಿ ಗುರುತಿಸಿ ನೀಡಲಾಗುವುದು ಎಂದು ಉಪವಿಭಾಗಾಧಿಕಾರಿ ಕೆ. ನಿತೀಶ್‌ ತಿಳಿಸಿದರು.

ಹೆಬ್ಬಳ್ಳ ಮತ್ತು ನೇರಳಕುಪ್ಪೆ ಬಿ ಹಾಡಿ ಆದಿವಾಸಿಗಳು ಯಾವ ಕಾರಣಕ್ಕೆ ಚುನಾವಣೆ ಬಹಿಷ್ಕರಿಸಿದ್ದಾರೆ ಎಂಬ ಬಗ್ಗೆ ತಿಳಿದು ಮುಂದಿನ ಕ್ರಮ ತೆಗೆದುಕೊಳ್ಳುತ್ತೇನೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT