ಸಿದ್ದೇಶ್ವರ ಸ್ವಾಮೀಜಿ ಪ್ರವಚನ ಸಾರ

7

ಸಿದ್ದೇಶ್ವರ ಸ್ವಾಮೀಜಿ ಪ್ರವಚನ ಸಾರ

Published:
Updated:

ನಾವೆಲ್ಲಾ ಈ ಸುಂದರವಾದ ಜಗತ್ತಿನ ಯಾತ್ರಿಕರು. ಯಾತ್ರೆ ಮಾಡುವಾಗ ಅಲ್ಲಲ್ಲಿ ಸುಂದರವಾದ ನೋಟಗಳು, ಫಲಭರಿತ ತೋಟಗಳು ಸಿಗುತ್ತವೆ. ಅವುಗಳನ್ನು ನೋಡುತ್ತಾ, ಅನುಭವಿಸುತ್ತಾ ಮುಂದೆ ಮುಂದೆ ಸಾಗಬೇಕು. ಯಾತ್ರೆ ನಿಲ್ಲಬಾರದು. ಯಾತ್ರೆಯುದ್ದಕ್ಕೂ ನಾವು ನಮ್ಮನ್ನು ಮರೆಯಬೇಕು... ವಿಶ್ವದ ಅಪ್ರತಿಮ ಸೌಂದರ್ಯದಲ್ಲಿ ಬೆರೆಯಬೇಕು. ಹುಟ್ಟಿನಿಂದ ಆರಂಭವಾದ ಈ ಯಾತ್ರೆ, ಕೊನೆಯವರೆಗೂ ನಿರಂತರವಾಗಿ ಮುಂದುವರೆಯಬೇಕು. ಯಾತ್ರೆ ಎಂದರೇ ಪವಿತ್ರವಾದ ಪ್ರಯಾಣ.

ದೇವಲೋಕ-ಮರ್ತ್ಯಲೋಕ, ಸ್ವರ್ಗ-ನರಕ ಎಲ್ಲವೂ ಇಲ್ಲೇ ಇವೆ. ಇದು ಅನಂತ ಲೋಕಗಳ ಜಗತ್ತು. ಭಕ್ತನಿರುವ ತಾಣವೇ ದೇವಲೋಕ. ಭಕ್ತನ ಅಂಗಳವೇ ಮಹಾಕಾಶಿ. ಭಕ್ತನ ಕಾಯವೇ ಕೈಲಾಸ. ನಗು ಮುಖದ ದರ್ಶನವೇ ಸ್ವರ್ಗ. ಕಾಮ ಕ್ರೋಧಾದಿಗಳು ಇರುವಲ್ಲೇ ನರಕ. ಮನೆ ಅದೆಷ್ಟು ದೊಡ್ಡದಾದರೇನು, ಭವ್ಯವಾದರೇನು ? ಅಲ್ಲಿ ಮಾತ್ಸರ್ಯದ ಹೊಗೆಯಾಡುತ್ತಿದ್ದರೆ ಅದೆಂಥ ಮನೆ ? ಕಲ್ಲು-ಮಣ್ಣು-ಸಿಮೆಂಟುಗಳಿಂದ ಮನೆ ಕಟ್ಟಲಾದೀತೇ ? ಪ್ರೀತಿ ವಿಶ್ವಾಸಗಳಿಂದ ಮಾತ್ರ ಒಂದು ಮನೆ ವಾಸ ಯೋಗ್ಯ ಮನೆ ಎನಿಸಿಕೊಳ್ಳುತ್ತದೆ.

ಜಗತ್ತಿನಲ್ಲಿ ಒಬ್ಬೊಬ್ಬರದು ಒಂದೊಂದು ಲೋಕ. ವ್ಯಾಪಾರಿಗಳಿಗೆ ಗಿರಾಕಿಗಳ ಲೋಕ. ವಕೀಲರಿಗೆ ಜಗಳವಾಡುವವರ ಲೋಕ, ವೈದ್ಯರಿಗೆ ರೋಗಿಗಳ ಲೋಕ, ಮಕ್ಕಳಿಗೆ ಗೊಂಬೆ-ಆಟಿಕೆಗಳ ಲೋಕ. ಹೀಗೆ ಜಗತ್ತಿನಲ್ಲಿ ಅದೆಷ್ಟು ಲೋಕಗಳಿವೆಯೋ ? ಅವರವರಿಗೆ ಅವರವರ ಲೋಕವೇ ಎಲ್ಲ. ಬೇರೆ ಲೋಕಗಳು ಗೊತ್ತೇ ಇಲ್ಲ. ಬಡ ರೈತ ಹವಾ ನಿಯಂತ್ರಿತ ಕೋಣೆ ಎಂದರೇನು ಎಂಬುದನ್ನು ಅರಿಯ. ನಿಸರ್ಗದ ತಂಗಾಳಿ, ಸೂರ್ಯನ ಕಿರಣ, ಹೂ-ಹಣ್ಣು-ಫಲ-ಬೀಜ-ವೃಕ್ಷ... ಎಲ್ಲವೂ ಆತನಿಗೆ ಗೊತ್ತು. ರೈತನಿಗೆ ಗೊತ್ತಿರುವುದು ಹವಾನಿಯಂತ್ರಿತ ಕಾರುಗಳಲ್ಲಿ ಓಡಾಡುವ ಧನಿಕರಿಗೆ ಗೊತ್ತಾಗುವುದಿಲ್ಲ.

ಸುಂದರವಾದ ಜಗತ್ತನ್ನು ಅನುಭವಿಸುವುದು, ಆನಂದಿಸುವುದು ಒಂದು ಕಲೆ. ಜೊತೆ ಜೊತೆಗೆ ಜಗತ್ತನ್ನು ಇನ್ನಷ್ಟು ಸುಂದರಗೊಳಿಸುವುದು ಒಂದು ಸಾಧನೆ. ಅದೇ ಮಾನವನ ಪರಮ ಸಿದ್ಧಿಯೂ ಕೂಡ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !