ಭಾವವೇ ಬದುಕಿನ ವೈಭವ

7

ಭಾವವೇ ಬದುಕಿನ ವೈಭವ

Published:
Updated:

ಭಾವ ಇಲ್ಲದ ಬದುಕು ಯಾಂತ್ರಿಕ. ಅದು ಕೇವಲ ತೋರಿಕೆಯ ಬದುಕು. ಭಾವ ನಮ್ಮ ಕಣ್ಣಿಗೆ ಕಾಣುವುದಿಲ್ಲ. ಆದರೆ ಅದು ಇಲ್ಲದಿದ್ದರೆ ಬದುಕಿನ ವೈಭವವೇ ಇಲ್ಲವಾಗುತ್ತದೆ. ಪ್ಲಾಸ್ಟಿಕ್ ಹೂವಿಗೆ ಪರಿಮಳ ಇಲ್ಲ. ಅದರ ರೂಪ-ಬಣ್ಣ ಹೂವಿನಂತೆಯೇ ಇರುವುದಾದರೂ ಅದು ಹೂವಲ್ಲ. ಭಾವದಿಂದಲೇ ಅನುಭವ-ಅನುಭಾವ ಎರಡೂ ಸಾಧ್ಯ. ವಿಶ್ವವನ್ನೂ ವಿಶ್ವಾತ್ಮನನ್ನೂ ಅರಿಯಬೇಕಾದರೆ, ಅನುಭವಿಸಬೇಕಾದರೆ ಭಾವವೇ ಬೇಕು. ಭಾವ ಇಲ್ಲದ ಬದುಕು ಸಿಮೆಂಟ್‌ ಇಲ್ಲದ ಕಟ್ಟಡದಂತೆ ಬೇಗನೆ ಬಿದ್ದು ಹೋಗುತ್ತದೆ. ಭಾವ ಎಂಬುದು ಸಂಬಂಧಗಳನ್ನು ಗಟ್ಟಿಗೊಳಿಸುವ ಅಂಟು-ನಂಟು.

ಎಲ್ಲಿಯೋ ಹುಟ್ಟಿ, ಎಲ್ಲಿಯೋ ಬೆಳೆದ ಎರಡು ಗಂಡು-ಹೆಣ್ಣುಗಳನ್ನು ವಿವಾಹ ಬಂಧಿಸುತ್ತದೆ. ಒಂದು ಹೆಣ್ಣು ಯಾವುದೋ ಮನೆಯನ್ನು, ನನ್ನ ಮನೆ ಎಂದು ಹೇಳುವಂತೆ ಮಾಡುತ್ತದೆ. ಪುರೋಹಿತ ವಧು-ವರರ ಬಟ್ಟೆಗೆ ಗಂಟು ಹಾಕಿ, ಇದು ಬ್ರಹ್ಮಗಂಟು ಎನ್ನುತ್ತಾನೆ. ಅದನ್ನು ಎಲ್ಲರೂ ನಂಬುತ್ತಾರೆ. ಅಂದೇ ಆ ಗಂಟು ಬಿಚ್ಚುತ್ತಾರೆ. ಆದರೆ ಬ್ರಹ್ಮಗಂಟು ಎಂಬ ಭಾವ ಮನದಲ್ಲಿ ಉಳಿದುಬಿಡುತ್ತದೆ. ಈ ಭಾವ ಎರಡು ಜೀವಿಗಳನ್ನು, ಎರಡು ಕುಟುಂಬಗಳನ್ನು ಶಾಶ್ವತವಾಗಿ ಬೆಸೆಯುತ್ತದೆ.

ಭಾವದಲ್ಲಿ ಸಂದೇಹದ ಬಿರುಕು ಉಂಟಾಗಬಾರದು. ಹಾಗೇನಾದರೂ ಆದರೆ ಬದುಕು ರಾಮಾಯಣವಾಗುತ್ತದೆ. ಯಾರ ಜತೆಗೆ 14 ವರ್ಷ ವನವಾಸ ಮಾಡಿದನೋ, ಯಾರಿಗಾಗಿ ಲಂಕೆಯವರೆಗೆ ಹೋಗಿ ಮಹಾಯುದ್ಧವನ್ನು ಮಾಡಿದನೋ, ಅಂಥ ರಾಮ, ಯಾರದೋ ಮಾತಿಗಾಗಿ ಸೀತೆಯನ್ನು ಕಾಡಿಗೆ ಅಟ್ಟಿದ. ಭಾವ ಕೆಟ್ಟಿತ್ತು. ಬದುಕು ಒಡೆದಿತ್ತು. ರಾಮಾಯಣವಾಗಿತ್ತು.

ನಾನು-ನನ್ನದು ಎಂಬ ಭಾವ ಇತಿಮಿತಿಯಲ್ಲಿರಬೇಕು. ಅತಿಯಾದರೆ ಅದು ಅಹಂಕಾರವಾಗುತ್ತದೆ. ಜಾತಿ-ಮತ-ಪಂಥಗಳ ಕುರಿತಾದ ನಮ್ಮ ಭಾವನೆಗಳು ಮಿತಿಯಲ್ಲಿದ್ದರೆ ಅಪಾಯವಿಲ್ಲ. ಅತಿಯಾದರೆ ಅನರ್ಥಕ್ಕೆ ಎಡೆ ಮಾಡಿಕೊಡುತ್ತದೆ. ಬೆಳಕು ಸೌಮ್ಯವಾಗಿರಬೇಕು-ಶಾಂತವಾಗಿರಬೇಕು. ಅದು ಕಣ್ಣು ಕುಕ್ಕುವಂತಿರಬಾರದು. ಒಲೆ ಹತ್ತಿ ಉರಿದರೆ ನಿಲ್ಲಬಹುದು. ಧರೆ ಹತ್ತಿ ಉರಿದರೆ ನಿಲ್ಲಲಾಗದು. ಇದು ಬಸವಣ್ಣನವರ ಮಾತು. ಒಲೆಯಲ್ಲಿರುವ ಬೆಂಕಿ ಅನ್ನವನ್ನು ಬೇಯಿಸುತ್ತದೆ. ಅದು ಒಲೆ ದಾಟಿ ಬಂದರೆ ಮನೆಯನ್ನೇ ದಹಿಸುತ್ತದೆ.

ಸಂಗ್ರಹ: ಸುಭಾಸ ಯಾದವಾಡ

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !