ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂದಗತಿಯ ಮತದಾನ; ಸಂಪೂರ್ಣ ಶಾಂತಿಯುತ

ನಗರ ಪಾಲಿಕೆ ಚುನಾವಣೆ: ಭದ್ರತಾ ಕೊಠಡಿ ಸೇರಿದ 206 ಅಭ್ಯರ್ಥಿಗಳ ಭವಿಷ್ಯ
Last Updated 31 ಆಗಸ್ಟ್ 2018, 13:22 IST
ಅಕ್ಷರ ಗಾತ್ರ

ಶಿವಮೊಗ್ಗ:ಸಣ್ಣಪುಟ್ಟ ವಾಗ್ವಾದ, ನೂಕಾಟಗಳ ಹೊರತಾಗಿ ನಗರ ಪಾಲಿಕೆಯ 35 ವಾರ್ಡ್‌ಗಳಿಗೆ ಶುಕ್ರವಾರ ನಡೆದ ಚುನಾವಣೆ ಬಹುತೇಕ ಶಾಂತಿಯುತವಾಗಿ ನೆರವೇರಿತು.

35 ಸದಸ್ಯ ಬಲದ ಪಾಲಿಕೆಯಲ್ಲಿ ಸ್ಥಾನ ಪಡೆಯಲು ಚುನಾವಣಾ ಕಣಕ್ಕೆ ಇಳಿದಿರುವ206 ಅಭ್ಯರ್ಥಿಗಳ ಭವಿಷ್ಯ ರಾತ್ರಿ ವೇಳೆಗೆ ಸಹ್ಯಾದ್ರಿ ಕಾಲೇಜಿನ ಭದ್ರತಾ ಕೊಠಡಿಯಲ್ಲಿಭದ್ರವಾದವು.

ಸಾಕಷ್ಟು ಜಿದ್ದಾಜಿದ್ದಿನಿಂದ ಕೂಡಿದ್ದ ಚುನಾವಣೆಯಲ್ಲಿ ಅಭ್ಯರ್ಥಿಗಳು, ಅವರ ಬೆಂಬಲಿಗರು, ಬಂಧುಗಳು, ಪಕ್ಷದ ಮುಖಂಡರು, ಕಾರ್ಯಕರ್ತರು, ಇಡೀ ದಿನ ಬೀದಿಗಳಲ್ಲೇ ನಿಂತು ಮತದಾರರ ಓಲೈಸಲು ಸಮಯ ವ್ಯಯಿಸಿದರು.

ಬೆಳಿಗ್ಗೆ 7ರಿಂದಲೇ ಮಂದಗತಿ ಮತದಾನ:ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 303 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಗುರುವಾರ ರಾತ್ರಿಯೇ ಮತದಾನಕ್ಕೆ ಸಿದ್ಧತೆ ಮಾಡಿಕೊಂಡಿದ್ದ ಮತಗಟ್ಟೆ ಅಧಿಕಾರಿಗಳು ಮತ್ತು ಸಿಬ್ಬಂದಿ ಬೆಳಿಗ್ಗೆ ಮತಯಂತ್ರಗಳನ್ನು ಸಜ್ಜುಗೊಳಿಸಿದ್ದರು. ಬಹುತೇಕ ಮತಗಟ್ಟೆಗಳಲ್ಲಿ ಸಮಯಕ್ಕೆ ಸರಿಯಾಗಿ ಮತದಾನ ಆರಂಭವಾಯಿತು. ಆದರೆ, ನಿರೀಕ್ಷಿಸಿದಂತೆ ಮತದಾರರು ಮತಗಟ್ಟೆಗಳಿಗೆ ಬರಲಿಲ್ಲ.

ಬೆಳಿಗ್ಗೆ ಮೊದಲ ಎರಡು ಗಂಟೆ ಅವಧಿಯಲ್ಲಿ ಶೇ 6.79ರಷ್ಟು ಮತದಾನವಾಗಿತ್ತು. 11ರ ವೇಳೆಗೆ ಶೇ 15.07ರಷ್ಟು, ಮಧ್ಯಾಹ್ನ 1ರ ವೇಳೆಗೆ ಸ್ವಲ್ಪ ಚುರುಕು ಪಡೆದುಕೊಂಡು ಶೇ 30.22ರಷ್ಟು ತಲುಪಿತು. ಮಧ್ಯಾಹ್ನ 3ರ ವೇಳೆಗೆ 41.23ರಷ್ಟು ಮತದಾನವಾಗಿತ್ತು. ಕೊನೆಯ ಎರಡು ಗಂಟೆ ಅವಧಿಯಲ್ಲಿ 0000 ಮುಟ್ಟಿತು.

ರಸ್ತೆಗಳಲ್ಲೇ ಠಿಕಾಣಿ:ವಿವಿಧ ಪಕ್ಷಗಳ ಕಾರ್ಯಕರ್ತರು, ಪಕ್ಷೇತರರ ಬೆಂಬಲಿಗರು ಬೆಳಿಗ್ಗೆ 6.30ರಿಂದಲೇ ಮತಗಟ್ಟೆಯ 200 ಮೀಟರ್ ಹೊರಗೆ ಟೆಂಟ್‌, ಟೇಬಲ್ ಹಾಕಿಕೊಂಡು ಕುಳಿತು ಮತದಾರರ ಪಟ್ಟಿಯಲ್ಲಿ ಮತದಾರರ ಹೆಸರು ಹುಡುಕಿ ಬರೆದುಕೊಡುತ್ತಿದ್ದರು. ಹಲವು ವಾರ್ಡ್‌ಗಳ ಮತಗಟ್ಟೆ ಬಳಿಯ ರಸ್ತೆಗಳಲ್ಲಿ ವಾಹನಗಳ ಸಂಚಾರಕ್ಕೂ ಅವಕಾಶ ಇರಲಿಲ್ಲ.

ಮತದಾರರಿಗೆ ರಾಜ ಮರ್ಯಾದೆ:ಪ್ರತಿ ಮತಗಟ್ಟೆಯ ಬಳಿಯ ರಸ್ತೆಗಳಲ್ಲಿ ಅಭ್ಯರ್ಥಿಗಳು, ಇಲ್ಲವೇ ಅವರ ಬೆಂಬಲಿಗರು, ಪಕ್ಷದ ಮುಖಂಡರುಹಾಜರಿದ್ದು ಮತ ಚಲಾಯಿಸಲು ಬರುವ ಮತದಾರರನ್ನು ಕೈ ಮುಗಿದು ಸ್ವಾಗತಿಸುತ್ತಿದ್ದರು. ತಮ್ಮ ಕ್ರಮ ಸಂಖ್ಯೆ, ಚಿಹ್ನೆ ನೆನಪು ಮಾಡಿಕೊಡುತ್ತಾ ಮತ ಚಲಾಯಿಸುವಂತೆ ಕೋರುತ್ತಿದ್ದರು. ಹಲವು ಅಭ್ಯರ್ಥಿಗಳು ಅಥವಾ ಬೆಂಬಲಿಗರು ಒಟ್ಟಿಗೆ ಮತದಾರರ ಓಲೈಸಲು ಮುಗಿ ಬೀಳುತ್ತಿದ್ದರು. ಇಂತಹ ವರ್ತನೆಯಿಂದ ಹಲವು ಮತದಾರರು ಮುಜುಗರಕ್ಕೆ ಒಳಗಾಗುತ್ತಿದ್ದರು. ಕೆಲವರು ಕೈ ಮುಗಿದ ಎಲ್ಲರಿಗೂ ‘ನಿಮಗೇ ಮತ’ ಎನ್ನುತ್ತಾ ಸಾಗುತ್ತಿದ್ದರು. ಕೆಲವರು ಅಭ್ಯರ್ಥಿಗಳ ಕಾಲಿಗೆ ಎರಗಿ ಮತಚಲಾಯಿಸುವಂತೆ ಬೇಡಿಕೊಳ್ಳುತ್ತಿದ್ದರು.

ಮತಚೀಟಿಗಳಲ್ಲಿ ಪಕ್ಷದ ಚಿಹ್ನೆ:ಕೆಲವು ವಾರ್ಡ್‌ಗಳ ಮತಗಟ್ಟೆಗಳ ಸಮೀಪ ಮತದಾರರಿಗೆ ಬರೆದುಕೊಟ್ಟ ಕ್ರಮ ಸಂಖ್ಯೆಯ ಚೀಟಿಗಳ ಕೆಳ ಭಾಗದಲ್ಲಿ ಪಕ್ಷದ ಚಿಹ್ನೆ ಇತ್ತು, ಇದಕ್ಕೆ ಕೆಲವು ಅಭ್ಯರ್ಥಿಗಳು, ಅವರ ಬೆಂಬಲಿಗರು ಆಕ್ಷೇಪ ವ್ಯಕ್ತಪಡಿಸಿದರು. ಈ ಕುರಿತು ಸಣ್ಣಪುಟ್ಟ ಜಗಳಗಳೂ ನಡೆದವು.

ಮದ್ಯ ನಿಷೇಧಿಸಿದ್ದರೂ ಫುಲ್‌ಚಿತ್:ಹಲವು ಬಡಾವಣೆಗಳ ಮತಗಟ್ಟೆಗಳ ಬಳಿ ಜನರು ಗುಂಪಾಗಿ ನಿಂತಿದ್ದರು. ಕೆಲವು ಗುಂಪುಗಳಲ್ಲಿ ಯುವಕರು, ಪುರುಷರು ಮದ್ಯಪಾನ ಮಾಡಿ ತೂರಾಡುತ್ತಿದ್ದರು. ಕುಡಿದ ಮತ್ತಿನಲ್ಲಿ ಮತಗಟ್ಟೆಗೆ ಬರುತ್ತಿದ್ದ ಮತದಾರರಿಗೆ ಕೈ ಮುಗಿಯಲು ಹೋಗಿ ಬಿದ್ದ ಪ್ರಸಂಗಗಳೂ ಕಂಡುಬಂದವು. ಕೆಲವು ಕಡೆ ಕುಡಿದು ಜಗಳ ಮಾಡಿಕೊಂಡರು. ಕೆಲವು ಮತಗಟ್ಟೆ ಸಮೀಪ ಕೈಕೈ ಮಿಲಾಯಿಸಿಕೊಂಡರು.

ಪಕ್ಷಗಳ ಮಧ್ಯೆ ನೇರ ಸ್ಪರ್ಧೆ:ಹಲವು ವಾರ್ಡ್‌ಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಮಧ್ಯೆ ಸ್ಪರ್ಧೆ ಕಂಡುಬಂತು. ಕೆಲವು ವಾರ್ಡ್‌ಗಳಲ್ಲಿ ಬಿಜೆಪಿ–ಜೆಡಿಎಸ್, ಇಲ್ಲವೇ, ಕಾಂಗ್ರೆಸ್–ಜೆಡಿಎಸ್ ಮಧ್ಯೆ ಪೈಪೋಟಿ ಕಂಡುಬಂತು. ಬಿಜೆಪಿ ಮುಖಂಡರು, ಕಾರ್ಯಕರ್ತರು ಕೇಸರಿ ಶಾಲು ಧರಿಸಿದ್ದರೆ, ಜೆಡಿಎಸ್ ಬೆಂಬಲಿಗರು ಹಸಿರು ಶಾಲು, ಕಾಂಗ್ರೆಸ್ ಕೇಸರಿ ಬಳಿ, ಹಸಿರು ಶಾಲು ಧರಿಸಿದ್ದರು.

ಆಟೊರಿಕ್ಷಾಗಳಿಗೆ ಬೇಡಿಕೆ:ಮತದಾರರು ಮತಗಟ್ಟೆಗೆ ಬರಲು ಆಟೊರಿಕ್ಷಾಗಳನ್ನು ಹೆಚ್ಚಾಗಿ ಅವಲಂಬಿಸಿದ್ದರು. ಹಾಗಾಗಿ, ಆಟೊಗಳಿಗೆ ಹೆಚ್ಚಿನ ಬೇಡಿಕೆ ಕಂಡುಬಂತು. ಕೆಲವರು ಕಾರುಗಳಲ್ಲಿ ಬಂದು ಮತ ಚಲಾಯಿಸಿದರು.

ಮತ ಚಲಾಯಿಸಿದ ಗಣ್ಯರು:ಶಾಸಕ ಕೆ.ಎಸ್. ಈಶ್ವರಪ್ಪ ಮಲ್ಲೇಶ್ವರ ನಗರದ ಮತಗಟ್ಟೆಯಲ್ಲಿ, ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಎಚ್. ಶಂಕರಮೂರ್ತಿ ರವೀಂದ್ರ ನಗರ ಮತಗಟ್ಟೆಯಲ್ಲಿ, ವಿಧಾನ ಪರಿಷತ್ ಸದಸ್ಯ ಎಸ್‌. ರುದ್ರೇಗೌಡ್ರು, ಮೇಯರ್ ನಾಗರಾಜ ಕಂಕಾರಿ, ಬಸವ ಮರುಳಸಿದ್ಧ ಸ್ವಾಮೀಜಿ ವೆಂಕಟೇಶ ನಗರದ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಮಿಷನ್ ಕಾಂಪೌಂಡ್ ಮತಗಟ್ಟೆಯಲ್ಲಿ, ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಅಶೋಕನಗರ ಮತಗಟ್ಟೆಯಲ್ಲಿ, ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಎಂ. ಶ್ರೀಕಾಂತ್ ನ್ಯೂಮಂಡ್ಲಿ ಮತಗಟ್ಟೆಯಲ್ಲಿ ಮತಚಲಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT