ಕೆಸರು ಗದ್ದೆಯಾದ ಎಸ್‌ಎಲ್‌ವಿ ಲೇಔಟ್ ಪ್ರದೇಶ

7
ಆಲ್ಕೊಳ–ವಿಕಾಸ ಶಾಲೆಯ ಮಂಗಳ ಮಂದಿರ ರಸ್ತೆಯಲ್ಲಿ ತೆರೆದ ಅಪಾಯಕಾರಿ ಮ್ಯಾನ್‌ಹೋಲ್

ಕೆಸರು ಗದ್ದೆಯಾದ ಎಸ್‌ಎಲ್‌ವಿ ಲೇಔಟ್ ಪ್ರದೇಶ

Published:
Updated:

ಶಿವಮೊಗ್ಗ: ನಗರದ ಆಲ್ಕೊಳಕ್ಕೆ ಹೊಂದಿಕೊಂಡಿರುವ ಎಸ್‌ಎಲ್‌ವಿ ಲೇಔಟ್‌, ಮಂಗಳ ಮಂದಿರ ಬಳಿಯ ಬಡಾವಣೆಗಳು ಯಾವುದೇ ಮೂಲ ಸೌಕರ್ಯವಿಲ್ಲದೆ ನಲುಗಿವೆ. ಮಳೆಗಾಲದಲ್ಲಿ ಈ ಬಡಾವಣೆಗಳು ಅಕ್ಷರಶಃ ಕೆಸರು ಗದ್ದೆಗಳಾಗುತ್ತವೆ. ದ್ವಿಚಕ್ರ ವಾಹನಗಳು ಸಂಚಾರಿಸಲೂ ಹರಸಾಹಸ ಪಡಬೇಕಾದ ಅನಿವಾರ್ತಯೆ ಇದೆ.

ಹಣ ಕೊಟ್ಟರೆ ಸಾಕು ಖಾಸಗಿ ಲೇಔಟ್‌ಗಳ ನಿರ್ಮಾಣಕ್ಕೆ ಬೇಕಾಬಿಟ್ಟಿ ಅನುಮತಿ ನೀಡುವ ನಗರ ಪಾಲಿಕೆ, ನಗರಾಭಿವೃದ್ಧಿ ಪ್ರಾಧಿಕಾರ ಅಲ್ಲಿ ನಿವೇಶನ ಖರೀದಿಸಿದವರಿಗೆ ಮೂಲ ಸೌಕರ್ಯ ಕಲ್ಪಿಸಿರುವ ಕುರಿತು ಪರಿಶೀಲಿಸುವುದೂ ಇಲ್ಲ.  ತಾವೂ ಸೌಲಭ್ಯ ಕಲ್ಪಿಸುವುದಿಲ್ಲ. ಆಲ್ಕೊಳ ಹಳೆಯ ಗ್ರಾಮ, ಸುಜ್ಞಾನ ಲೇಔಟ್, ವಿಕಾಸ ಶಾಲೆ, ಗಾಡಿಕೊಪ್ಪ, ನಂದಿನಿಲೇಔಟ್ ಮಧ್ಯದಲ್ಲಿ ಇರುವ ಈ ಬಡಾವಣೆ ಜನರು ಮೂಲ ಸೌಲಭ್ಯಗಳ ಕೊರತೆಯ ಪರಿಣಾಮ ನಿತ್ಯವೂ ನರಕ ಯಾತನೆ ಅನುಭವಿಸುತ್ತಿದ್ದಾರೆ. 

ಅಪಾಯಕಾರಿ ಮ್ಯಾನ್‌ಹೋಲ್: 

ಆಲ್ಕೊಳದಿಂದ ವಿಕಾಸ ಶಾಲೆಯ ಮಾರ್ಗದಲ್ಲಿ ನಿತ್ಯವೂ ನೂರಾರು ಮಕ್ಕಳು ಈ ಮಾರ್ಗದಲ್ಲಿ ಓಡಾಡುತ್ತಾರೆ. ಶಾಲಾ ವಾಹನಗಳು ಸಂಚರಿಸುತ್ತವೆ. ಡಾಂಬರು ಕಾಣದ ರಸ್ತೆಯ ಕೆಸರಿನಲ್ಲೇ ಮಕ್ಕಳು ನಡೆದು ಸಾಗುತ್ತಾರೆ. ವಾಹನಗಳು ಬಂದಾಗ ಎಷ್ಟೋ ಮಕ್ಕಳು ಕೆಸರು ಸಿಡಿಸಿಕೊಂಡು ಸಪ್ಪೆಮೋರೆ ಹಾಕಿಕೊಂಡು ಮನಸ್ಸಲ್ಲೇ ವ್ಯವಸ್ಥೆ ಬೈದುಕೊಳ್ಳುತ್ತಾರೆ.

ಅದಕ್ಕಿಂತ ಆತಂಕದ ಸಂಗತಿ ಈ ಮಾರ್ಗದಲ್ಲಿ ತೆರೆದ ಮ್ಯಾನ್‌ಹೋಲ್‌ ಇದ್ದು, ಮುಚ್ಚದೆ ಹಾಗೆಯೇ ಬಿಟ್ಟಿದ್ದಾರೆ. ಮಳೆ ಬಂದಾಗ ನೀರು ತುಂಬಿಕೊಂಡ ಕಾರಣ ಅದರ ಆಳ ಅರಿವಿಗೇ ಬರುವುದಿಲ್ಲ. ಮಕ್ಕಳು ಬಿದ್ದರೆ ಕಥೆ ಮುಗಿಯಿತು. ರಾತ್ರಿ ಸಮಯದಲ್ಲಿ ಇಲ್ಲಿ ಸಂಚರಿಸುವ ವಾಹನಗಳು ಅಪಘಾತಕ್ಕೆ ಈಡಾಗಿವೆ. ಕೆಲವರು ಬಿದ್ದು ಗಾಯಮಾಡಿಕೊಂಡಿದ್ದಾರೆ. ಅವಘಡಗಳು ಸಂಭವಿಸಿದಾಗ ಸ್ಥಳೀಯರೇ ಸೇರಿದ ಅಲ್ಲಿ ಮುಳ್ಳಿನ ಪೊದೆ ಹಾಕುತ್ತಾರೆ. ವಾಹನಗಳು ಸಂಚರಿಸಿದಂತೆ ಕೆಲ ಸಮಯದಲ್ಲೇ ಅದು ಮತ್ತೆ ಬಯಲಾಗುತ್ತದೆ. ಅಪಾಯಕ್ಕೆ ಆಹ್ವಾನ ನೀಡುತ್ತದೆ. 

ಕುಡಿಯುವ ನೀರಿಗೂ ಪರದಾಟ:

ಈ ಬಾಡವಣೆಯಲ್ಲಿ ಒಂದೂ ರಸ್ತೆಯೂ ಡಾಂಬರು, ಸಿಮೆಂಟ್ ಕಂಡಿಲ್ಲ. ಮೊಣಕಾಲುದ್ದದ ಕೆಸರಿನಲ್ಲೇ ನಡೆದು ಹೋಗಬೇಕು. ಮನೆ ಬಾಗಿಲಿಗೆ ವಾಹನ ತೆಗೆದುಕೊಂಡು ಹೋಗಲು ಹರಸಹಾಸ ಮಾಡಬೇಕು. ಕೆಲವು ತಿಂಗಳ ಹಿಂದೆ ಆಲ್ಕೊಳದಿಂದ ಸ್ವಲ್ಪ ದೂರದವರೆಗೆ ಜಲ್ಲಿ ಹಾಕಿದ್ದಾರೆ. ಅನುದಾನ ಬಿಡುಗಡೆಯಾದರೂ ರಸ್ತೆ ಕಾಮಗಾರಿ ಜಲ್ಲಿಗಷ್ಟೇ ಸೀಮಿತವಾಗಿದೆ. ಒಳ ಚರಂಡಿ ವ್ಯವಸ್ಥೆ ಇಲ್ಲ. ಕೆಲವು ಮನೆಗಳ ಮಾಲೀಕರೇ ಸೇರಿ ವಿದ್ಯುತ್ ಕಂಬ ಹಾಕಿಸಿಕೊಂಡಿದ್ದಾರೆ. ಆದರೆ, ಒಮ್ಮೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾದರೆ ವಾರ, ತಿಂಗಳುಗಟ್ಟಲೆ ವಿದ್ಯುತ್ ಮರಳುವುದಿಲ್ಲ. ಇಡೀ ನಗರಕ್ಕೆ ದಿನದ 24 ಗಂಟೆ ಕುಡಿಯುವ ನೀರು ಸರಬರಾಜು ವ್ಯವಸ್ಥೆ ಇದ್ದರೂ ಇಲ್ಲಿ ಕುಡಿಯುವ ನೀರಿಗೆ ಹಾಹಾಕಾರವಿದೆ. ಒಂದು ಮನೆಗೂ ನಲ್ಲಿ ಸಂಕರ್ಪ ಕಲ್ಪಿಸಿಲ್ಲ.

ಖಾಲಿ ನಿವೇಶನದಲ್ಲಿ ಪೊದೆಗಳು: 

ಇಲ್ಲಿನ ಬಹುತೇಕ ಖಾಲಿ ನಿವೇಶನಗಳಲ್ಲಿ ಪೊದೆ ಬೆಳೆದು ವಿಷ ಜಂತುಗಳ ಆವಾಸ ಸ್ಥಾನಗಳಾಗಿವೆ. ಪಾರ್ಕ್‌ಗಾಗಿ ಮೀಸಲಿಟ್ಟ ಜಾಗವೂ ಘನತ್ಯಾಜ್ಯದ ತಾಣವಾಗಿದೆ. ಕಸ ಸಂಗ್ರಹಿಸುವ ವಾಹನವೂ ವಾರಕ್ಕೆ ಒಂದೆರಡು ದಿನಗಳು ಬರುತ್ತದೆ. ಹಾಗಾಗಿ, ಜನ ಅಲ್ಲಿಗೆ ಕಸ ತಂದು ಸುರಿಯುತ್ತಾರೆ. ಪಾರ್ಕ್‌ ಜಾಗದಲ್ಲಿ ಒಂದೂ ಮರಗಿಡಗಳಿಲ್ಲ. ಕೆಲವು ನಿವಾಸಿಗಳೇ ಗಿಡ ತಂದು ನೆಟ್ಟು ಪೋಷಿಸುತ್ತಿದ್ದಾರೆ. ಇಡೀ ಬಡಾವಣೆಗೆ ಒಂದೂ ಸಂಪರ್ಕ ರಸ್ತೆ ಇಲ್ಲ. 

‘ಉತ್ತಮ ವಾತಾವರಣ ಇದೆ ಎಂದು ಇಲ್ಲಿ ಮನೆ ಕಟ್ಟಿಕೊಂಡೆವು. ವಾಸಿಸಲು ಆರಂಭಿಸಿದ ನಂತರ ಸಮಸ್ಯೆಗಳ ಸರಮಾಲೆ ಕಾಣತೊಡಗಿತು. ಪಾಲಿಕೆ ಇತ್ತ ಗಮನ ಹರಿಸಬೇಕು. ಕಾಡು ಪ್ರಾಣಿಗಳಿಗಿಂತ ಕಡೆಯಾಗಿ ವಾಸಿಸುತ್ತಿರುವ ಜನರ ಕಷ್ಟ ಆಲಿಸಬೇಕು. ಅಗತ್ಯ ಸೌಕರ್ಯ ಕಲ್ಪಿಸಬೇಕು’ ಎಂದು ಆಗ್ರಹಿಸುತ್ತಾರೆ ಅಲ್ಲಿನ ನಿವಾಸಿ, ಕನ್ನಡ ಉಪನ್ಯಾಸಕ ಎಂ.ವಿ. ಮಲ್ಲಿಕಾರ್ಜುನ.

ಹಳೆಯ ಊರಿನ ಮೆರಗು:

ಪಕ್ಕದಲ್ಲೇ ಇರುವ ಹಳೆಯ ಊರು ಆಲ್ಕೊಳದ ರಸ್ತೆಗಳು ಸಂದರವಾಗಿವೆ. ಕೆಲವು ಭಾಗಗಳಲ್ಲಿ ಚರಂಡಿ ವ್ಯವಸ್ಥೆ ಆಗಬೇಕಿದೆ. ನಗರದ ಒಳಗಿದ್ದರೂ ಈ ಊರು ಹಳ್ಳಿ ಸೊಗಡು ಮೈಗೂಡಿಸಿಕೊಂಡಿದೆ. ಅಲ್ಲಿರುವ ಸೌಲಭ್ಯ ಪಕ್ಕದ ಹೊಸ ಬಡಾವಣೆಯಲ್ಲಿ ಕಾಣುವುದಿಲ್ಲ.

‘ರಸ್ತೆಗಳು ಚೆನ್ನಾಗಿವೆ. ಆದರೆ, ಕೆಲವು ಭಾಗಗಳಲ್ಲಿ ಚರಂಡಿ ಪೂರ್ಣಗೊಂಡಿಲ್ಲ. ಇದರಿಂದ ನೀರು ಸರಾಗವಾಗಿ ಹರಿಯದೇ ರಸ್ತೆ ಮೇಲೆ ಬರುತ್ತದೆ. ಹಳೆಯ ದೇವಸ್ಥಾನ ಜೀರ್ಣೋದ್ಧಾರ ಮಾಡಬೇಕಿದೆ’ ಎನ್ನುತ್ತಾರೆ ಆಲ್ಕೊಳ ನಿವಾಸಿಗಳಾದ ಎಚ್‌. ಸುರೇಶ್, ಬಾಲರಾಜ್. 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !