ಸೋಮವಾರ, ಡಿಸೆಂಬರ್ 16, 2019
18 °C
ಡಿಸೆಂಬರ್ 31ರ ಒಳಗೆ ರಸ್ತೆಗಳ ಸಂಪೂರ್ಣ ದುರಸ್ತಿಗೆ ಸಚಿವ ಕೆ.ಎಸ್.ಈಶ್ವರಪ್ಪ ತಾಕೀತು

ಹೊಸ ವರ್ಷಕ್ಕೆ ಗುಂಡಿ ಮುಕ್ತ ‘ಸ್ಮಾರ್ಟ್‌’ ರಸ್ತೆಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಭಾರಿ ಮಳೆ ಪರಿಣಾಮ ಸಂಪೂರ್ಣ ಹಾಳಾಗಿರುವ, ಗುಂಡಿ ಬಿದ್ದಿರುವ ರಸ್ತೆಗಳನ್ನು ಡಿ.31ರ ಒಳಗೆ ದುರಸ್ತಿ ಮಾಡದಿದ್ದರೆ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಎಚ್ಚರಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸ್ಮಾರ್ಟ್‍ಸಿಟಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಗುಂಡಿಗಳ ದುರಸ್ತಿ ಕಾರ್ಯ ತಕ್ಷಣ ಆರಂಭಿಸಬೇಕು. ಹೊಸ ರಸ್ತೆಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು. ಸರ್ಕಾರ ಈಗಾಗಲೇ ಅನುದಾನ ಬಿಡುಗಡೆ ಮಾಡಿದೆ.
ಸ್ಮಾರ್ಟ್‍ಸಿಟಿ ಯೋಜನೆಯ ಕಾಮಗಾರಿಗಳನ್ನೂ ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಶ್ರಮಿಸಬೇಕು. ಈ ಕಾಮಗಾರಿಗಳ ನಿರ್ವಹಣೆ ಮತ್ತು ಉಸ್ತುವಾರಿಗಾಗಿ ನಗರ ಪಾಲಿಕೆ ಎಂಜಿನಿಯರ್‌ ನಿಯೋಜಿಸಬೇಕು. ಕಾಮಗಾರಿಗಳ ಪ್ರಗತಿಯ ಸಂಪೂರ್ಣ ವಿವರ ಸಲ್ಲಿಸಬೇಕು ಎಂದು ಸೂಚಿಸಿದರು.

ನಗರದ ಸೌಂದರ್ಯ ಹೆಚ್ಚಿಸಲು ಪಾಲಿಕೆ ವ್ಯಾಪ್ತಿಯಲ್ಲಿ ₨ 32 ಕೋಟಿ ವೆಚ್ಚದಲ್ಲಿ 20 ಸಾವಿರ ಎಲ್‌ಇಡಿ ದೀಪಗಳನ್ನು ಅಳವಡಿಸಲು ಖಾಸಗಿ ಸಂಸ್ಥೆಗೆ ಗುತ್ತಿಗೆ ನೀಡಲಾಗಿದೆ. ಈ ಗುತ್ತಿಗೆ ಅವಧಿ 7 ವರ್ಷ. ಈ ಅವಧಿಯಲ್ಲಿ ಅದರ ಸಂಪೂರ್ಣ ನಿರ್ವಹಣೆ ಗುತ್ತಿಗೆದಾರರದ್ದೇ ಆಗಿರುತ್ತದೆ. ಜನವರಿ 15ರ ಒಳಗೆ ಅವರಿಗೆ ಕಾರ್ಯಾದೇಶ ನೀಡಬೇಕು ಎಂದು ತಾಕೀತು ಮಾಡಿದರು.

ಸರ್ಕಾರಿ ಶಾಲೆ, ಅಂಗನವಾಡಿ ಕಟ್ಟಡಗಳ ದುರಸ್ತಿಯ ಟೆಂಡರ್ ಪ್ರಕ್ರಿಯೆ ಚಾಲನೆಯಲ್ಲಿದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ, ತಕ್ಷಣ ಕಾರ್ಯಾದೇಶ ನೀಡಬೇಕು. ಎಸ್‌ಡಿಎಂಸಿ ಅಧ್ಯಕ್ಷರು, ಪದಾಧಿಕಾರಿಗಳು ಕಾಮಗಾರಿ ತ್ವರಿತಕ್ಕೆ ಸಹಕರಿಸಬೇಕು. ಗುಣಮಟ್ಟ ಖಾತ್ರಿಪಡಿಸಿಕೊಳ್ಳಬೇಕು. ಪ್ರತಿ ಶಾಲೆಯಲ್ಲಿ ಕೈಗೊಳ್ಳಬೇಕಾದ ಕಾಮಗಾರಿಗಳ ಪೂರ್ಣ ವಿವರ ಪಡೆದು ಅದರಂತೆ ಕಾಮಗಾರಿ ಪೂರ್ಣಗೊಳಿಸಲು ನಿಗಾವಹಿಸಬೇಕು. ಶಾಲೆಗಳ ಶೌಚಾಲಯ ದುರಸ್ತಿ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಶಿವಮೊಗ್ಗ ಸಮೀಪದ ಗೋವಿಂದಾಪುರದಲ್ಲಿ ಆಶ್ರಯ ಯೋಜನೆ ಮನೆಗಳನ್ನು ನಿರ್ಮಿಸಲು ತಾಂತ್ರಿಕ ಅನುಮೋದನೆಗಾಗಿ ಪ್ರಸ್ತಾವ ಸಲ್ಲಿಸಲಾಗಿದೆ. ಅನುಮೋದನೆ ದೊರೆತ ತಕ್ಷಣ ಕಾಮಗಾರಿ ಆರಂಭಿಸಲಾಗುವುದು ಎಂದು ಭರವಸೆ ನೀಡಿದರು.

ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನಕುಮಾರ್, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಪಾಲಿಕೆ ಮೇಯರ್ ಲತಾ ಗಣೇಶ್, ಉಪ ಮೇಯರ್ ಎಸ್‌.ಎನ್‌.ಚನ್ನಬಸಪ್ಪ, ವಿರೋಧ ಪಕ್ಷದ ನಾಯಕ ರಮೇಶ್‍ ಹೆಗ್ಡೆ, ಜ್ಞಾನೇಶ್ವರ್, ನಗರ ಪಾಲಿಕೆ ಆಯುಕ್ತ ಚಿದಾನಂದ ವಟಾರೆ, ಹೆಚ್ಚುವರಿ ಜಿಲ್ಲಾಧಿಕಾರಿ ಜೆ.ಅನುರಾಧ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)