ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಣ್ಣಿನ ರಕ್ಷಣ ನಮ್ಮೆಲ್ಲರ ಹೊಣೆ

Last Updated 5 ಡಿಸೆಂಬರ್ 2018, 14:22 IST
ಅಕ್ಷರ ಗಾತ್ರ

ಶಿವಮೊಗ್ಗ: ಪ್ರತಿಯೊಬ್ಬರೂ ಅಮೂಲ್ಯ ಸಂಪತ್ತಾದ ಮಣ್ಣಿನ ಸಂರಕ್ಷಣೆಗೆ ಕೈಜೋಡಿಸಬೇಕು ಎಂದುಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯದ ಕುಲಸಚಿವ ಡಾ.ಪಿ. ನಾರಾಯಣಸ್ವಾಮಿ ಹೇಳಿದರು.

ಕೃಷಿ ವಿಜ್ಞಾನ ಕೇಂದ್ರದಲ್ಲಿ ಭಾರತೀಯ ಕೃಷಿ ಅನುಸಂಧಾನ ಪರಿಷತ್, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಕೃಷಿ ವಿಜ್ಞಾನ ಕೇಂದ್ರ, ಕೃಷಿ ಇಲಾಖೆ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ಮಣ್ಣು ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಅಮೂಲ್ಯವಾದ ನೈಸರ್ಗಿಕ ಸಂಪನ್ಮೂಲವಾದ ಮಣ್ಣಿನ ಸಂರಕ್ಷಣೆಗೆ ಪ್ರಾಮುಖ್ಯತೆ ನೀಡಿದ ಥೈಲ್ಯಾಂಡ್‌ರಾಜ ಭೂಮಿಬೋಲ್ ಅದುಲ್ಯಾದೇಜ್‌ ಅವರ ಜನ್ಮದಿನವನ್ನು ಪ್ರತಿವರ್ಷ ವಿಶ್ವ ಮಣ್ಣು ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ.ಮಣ್ಣು ತನ್ನ ಶಕ್ತಿ ಮೀರಿ ಜೀವರಾಶಿಗಳಿಗೆ ಆಶ್ರಯವಾಗಿದೆ. ಈ ದಿನಾಚರಣೆಯ ಗುರಿ ಮಣ್ಣಿನ ಮಹತ್ವದ ಪ್ರಾಮುಖ್ಯತೆಯ ಅರಿವು ಹೆಚ್ಚಿಸುವುದಾಗಿದೆ ಎಂದರು.

ಉತ್ಪಾದನಾ ವೆಚ್ಚ ಕಡಿಮೆ ಮಾಡಿ, ಉತ್ಪಾದನೆಯ ಜತೆಗೆ ರೈತರ ಆದಾಯವನ್ನು ಹೆಚ್ಚಿಸಬೇಕಿದೆ. ಆದ್ದರಿಂದ ರೈತರು ತಮ್ಮ ಆದಾಯವನ್ನು ಇಮ್ಮಡಿಗೊಳಿಸಿಕೊಳ್ಳಲು ತಮ್ಮ ತಮ್ಮ ಜಮೀನಿನ ಮಣ್ಣು ಪರೀಕ್ಷೆ ಮಾಡಿಸಿ, ಮಣ್ಣು ಪರೀಕ್ಷೆ ಆಧಾರದ ಮೇಲೆ ಶಿಫಾರಿತ ಗೊಬ್ಬರಗಳನ್ನು ಹಾಕಬೇಕು ಎಂದು ಸಲಹೆ ನೀಡಿದರು.

ಪ್ರಾಧ್ಯಾಪಕ ಡಾ. ಎಚ್.ಎಂ.ಚಿದಾನಂದಪ್ಪ ಮಾತನಾಡಿ, ಯಾವುದೇ ಬೆಳೆ ಬೆಳೆಯುವಾಗ ಮಣ್ಣಿನ ಪೋಷಕಾಂಶಗಳ ಲಭ್ಯತೆ ಆಧಾರದ ಮೇಲೆ ರಸಗೊಬ್ಬರಗಳನ್ನು ನೀಡಬೇಕು. ಕೇವಲ ರಾಸಾಯನಿಕ ಗೊಬ್ಬರಗಳನ್ನು ಮಣ್ಣಿಗೆ ನೀಡದೆ, ಸಾವಯವ ಗೊಬ್ಬರ, ಎರೆಹುಳು ಗೊಬ್ಬರ, ಕೊಟ್ಟಿಗೆ ಗೊಬ್ಬರ ಹಾಗೂ ಅಡಿಕೆ ಸಿಪ್ಪೆಯಿಂದ ತಯಾರಿಸಿದ ಕಾಂಪೋಸ್ಟ್‌ ಅನ್ನುಸೇರಿಸುವುದರಿಂದ ಮಣ್ಣಿನ ಫಲವತ್ತತೆ ಕಾಪಾಡಬಹುದು ಎಂದು ವಿವರಿಸಿದರು.

ಮಣ್ಣು ನೈಸರ್ಗಿಕ ಸಂಪನ್ಮೂಲ. ಇದರ ಫಲವತ್ತತೆಯನ್ನು ಕಾಪಾಡಿಕೊಂಡು ಮುಂದಿನ ಪೀಳಿಗೆಗೆ ಫಲವತ್ತಾದ ಮಣ್ಣನ್ನು ಆಸ್ತಿಯನ್ನಾಗಿ ಮಾಡುವುದು ನಮ್ಮೆಲ್ಲರ ಹೊಣೆ. ಆದ್ದರಿಂದ ಅನಾವಶ್ಯಕವಾಗಿ ಹೆಚ್ಚು ಹೆಚ್ಚು ರಾಸಾಯನಿಕ ಗೊಬ್ಬರಗಳನ್ನು ಹಾಕಿ ಮಣ್ಣಿನ ಫಲವತ್ತತೆಯನ್ನು ಹಾಳುಮಾಡುವ ಬದಲು ಸಾವಯವ ಗೊಬ್ಬರಗಳನ್ನು ಬಳಸಿ, ಮಣ್ಣಿನಲ್ಲಿರುವ ಜೀವರಾಶಿಗಳನ್ನು ಹೆಚ್ಚಿಸಬೇಕು ಎಂದು ತಿಳಿಸಿದರು.

ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯ ಡೀನ್‌ ಡಾ.ಟಿ.ಎಸ್. ವಾಗೀಶ್, ರೈತರು ಅವಶ್ಯಕತೆಗಿಂತ ಹೆಚ್ಚಿನ ರಾಸಾಯನಿಕ ಗೊಬ್ಬರಗಳನ್ನು ಬಳಸುವುದರಿಂದಮಣ್ಣಿನ ಫಲವತ್ತತೆ ಕ್ಷೀಣಿಸಿದೆ. ಮಣ್ಣು ಬರಡಾಗಿದೆ, ಯಾವುದೇ ಬೆಳೆ ಬೆಳೆಯಲು ಯೋಗ್ಯತೆಯನ್ನು ಮಣ್ಣು ಕಳೆದುಕೊಂಡಿದೆ. ಆದ್ದರಿಂದ ನಾವೆಲ್ಲರೂ ಮಣ್ಣಿನ ಆರೋಗ್ಯ ಕಾಪಾಡಲು ಶ್ರಮಿಸಬೇಕಿದೆ ಎಂದರು.

ನಮ್ಮ ಜಮೀನು, ಬೆಳೆ, ಮಣ್ಣಿನೊಂದಿಗೆ ನಮ್ಮ ಸಂಬಂಧವನ್ನು ಚೆನ್ನಾಗಿ ಇಟ್ಟುಕೊಂಡಲ್ಲಿ ಮಾತ್ರ ಉತ್ತಮ ಬೆಳೆ, ಗುಣಮಟ್ಟದ ಬೆಳೆ ಬೆಳೆಯಲು ಸಾಧ್ಯ. ಮಣ್ಣು ಫಲವತ್ತಾದ ಮಾತ್ರಕ್ಕೆ ಉತ್ತಮ ಬೆಳೆ ಸಿಗಬಹುದೆಂದು ನಿರೀಕ್ಷಿಸುವ ಬದಲು ಮಣ್ಣಿನ ಫಲವತ್ತತೆಯನ್ನು ನಿರಂತರವಾಗಿ ಕಾಪಾಡಲು ಅನುಸರಿಸಬೇಕಾದ ಕ್ರಮಗಳನ್ನು ಅರಿಯಬೇಕು ಎಂದುತಿಳಿಸಿದರು.

ಕಾರ್ಯಕ್ರಮದಲ್ಲಿವಿವಿಧ ರೀತಿಯ ಮಣ್ಣು, ಗೊಬ್ಬರ, ಹಸಿರೆಲೆ ಗೊಬ್ಬರ, ಜೈವಿಕ ಪೀಡೆನಾಶಕ ಮತ್ತು ಗೊಬ್ಬರ ಪ್ರದರ್ಶಿಸಲಾಯಿತು. ಜತೆಗೆ ಮಣ್ಣು ಸವಕಳಿಯನ್ನು ತಡೆಯುವ ವಿವಿಧ ಮಾದರಿಯನ್ನು ಪ್ರದರ್ಶಿಸಲಾಯಿತು.

ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಬಿ.ಸಿ. ಹನುಮಂತಸ್ವಾಮಿ,ಪ್ರಾಧ್ಯಾಪಕ ಡಾ. ಜಿ.ಎನ್.ತಿಪ್ಪೇಶಪ್ಪ, ಡಾ. ನಾಗರಾಜ,ಎಂ. ಬಸವರಾಜ, ವೀಣಾಶ್ರೀ, ಎಂ.ವಿ. ರೇಖಾ, ವಿಜ್ಞಾನಿ, ಡಾ. ಪಿ.ಅರುಣ್‌ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT