ಅಜಾತಶತ್ರುವಿಗೆ ಭಾವಪೂರ್ಣ ಶ್ರದ್ಧಾಂಜಲಿ

7
ವಿಜಯಪುರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿನ ಬಾವುಟ ಅರ್ಧಕ್ಕಿಳಿಸಿದ ಕಾರ್ಯಕರ್ತರು

ಅಜಾತಶತ್ರುವಿಗೆ ಭಾವಪೂರ್ಣ ಶ್ರದ್ಧಾಂಜಲಿ

Published:
Updated:
Deccan Herald

ವಿಜಯಪುರ:  ಅಜಾತಶತ್ರು, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನಿಧನಕ್ಕೆ ವಿಜಯಪುರ ಜಿಲ್ಲಾ ಭಾರತೀಯ ಜನತಾ ಪಕ್ಷದ ಕಾರ್ಯಾಲಯದಲ್ಲಿ ಶುಕ್ರವಾರ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ವಾಜಪೇಯಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಪಕ್ಷದ ಕಾರ್ಯಕರ್ತರು ಅಭಿಮಾನಿಗಳು ಗೌರವ ನಮನ ಸಲ್ಲಿಸಿದರು.

ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ ಮಾತನಾಡಿ ‘ಅಟಲ್ ಬಿಹಾರಿ ವಾಜಪೇಯಿ ನಿಧನದಿಂದಾಗಿ ದೇಶ ಒಬ್ಬ ಮಹಾನ್ ಮುತ್ಸದ್ಧಿಯನ್ನು ಕಳೆದುಕೊಂಡಿದೆ. ಬಿಜೆಪಿಗೆ ಭರಿಸಲಾಗದ ನಷ್ಟವಾಗಿದೆ. ಸರಳ ಮತ್ತು ಸಜ್ಜನಿಕೆಯ ಜೀವನವನ್ನು ತಮ್ಮ ಬಾಲ್ಯದಿಂದಲೇ ನಡೆಸಿಕೊಂಡು ಬಂದಂತಹ ವ್ಯಕ್ತಿಯಾಗಿದ್ದರು’ ಎಂದು ಬಣ್ಣಿಸಿದರು.

ವಾಜಪೇಯಿ ವಿರಚಿತ ಕವನಗಳನ್ನು ತಮ್ಮ ನುಡಿ ನಮನದ ನಡುವೆ ಉಲ್ಲೇಖಿಸಿದ ಅರುಣ, ‘ಕ್ಯಾ ಹಾರ್ ಮೇ, ಕ್ಯಾ ಜೀತ್ ಮೇ, ಕಿಂಚಿತ್ ನಹಿ ಭಯಭೀತ್ ಮೈ, ಕರ್ತವ್ಯ ಪಥ ಪರ ಜೋ ಭಿ ಮೀಲಾ, ಯಹ ಭೀ ಸಹಿ ವೋ ಭೀ ಸಹಿ, ವರದಾನ ನಹಿ ಮಾಂಗುಂಗಾ, ಹೋ ಕುಛ ಪರ ಹಾರ ನಹಿ ಮಾನೂಂಗಾ’ ಎಂಬ ಕವಿತೆಯನ್ನು ವಾಚಿಸುವ ಸಂದರ್ಭವೇ ಗದ್ಗದಿರಾದರು.

ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡಿ ‘ವಾಜಪೇಯಿ ಅವರನ್ನು ನೋಡಿದರೆ, ಅವರ ಭಾಷಣ ಕೇಳಿದರೆ ಸಾಕು. ಮೈಮನ ರೋಮಾಂಚನಗೊಳ್ಳುತ್ತಿತ್ತು. 1994ರಲ್ಲಿ ವಿಜಯಪುರಕ್ಕೆ ಬಂದಾಗ ಅವರನ್ನು ಸನಿಹದಿಂದ ನೋಡುವ ಅವಕಾಶ ನನಗೆ ಸಿಕ್ಕಿತ್ತು. ಮುಂದೆ ಅವರು ಪ್ರಧಾನ ಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿದ ಬಳಿಕ, ಸದನದಲ್ಲಿ ಅವರು ಮಾಡಿದ ಎಲ್ಲ ಭಾಷಣಗಳನ್ನು ನಾನು ಮತ್ತು ಆಗ ನನ್ನ ಜತೆಗಿದ್ದ ಕಾರ್ಯಕರ್ತರು ತಪ್ಪದೆ ಕೇಳುತ್ತಿದ್ದೆವು’ ಎಂದು ಸ್ಮರಿಸಿದರು.

ರಾಜ್ಯ ಕಾರ್ಯಕಾರಿಣಿ ಸದಸ್ಯ ಚಂದ್ರಶೇಖರ ಕವಟಗಿ ಮಾತನಾಡಿ ‘ಅಟಲ್‌ಜಿ ವಿಜಯಪುರಕ್ಕೆ ಭೇಟಿ ನೀಡಿದ ಸಂದರ್ಭ, ಸಂಘದಲ್ಲಿ ನಗರ ಕಾರ್ಯವಾಹಕನಾಗಿ ಸೇವೆ ಸಲ್ಲಿಸುತ್ತಿದ್ದೆ. ಅವರು ಬಂದಾಗ ಸ್ವಾಗತಿಸುವ ಸೌಭಾಗ್ಯ ನನಗೆ ದೊರಕಿತ್ತು. ಇಲ್ಲಿಯವರೆಗೆ ಆಗಿ ಹೋದ ಪ್ರಧಾನ ಮಂತ್ರಿಗಳಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ವ್ಯಕ್ತಿತ್ವವನ್ನು ಉಳಿದವರೊಟ್ಟಿಗೆ ಹೋಲಿಸಲು ಸಾಧ್ಯವಿಲ್ಲ’ ಎಂದರು.

ಪಕ್ಷದ ಮುಖಂಡರಾದ ವಿಜುಗೌಡ ಪಾಟೀಲ, ಶಿವನಾಂದ ಮಾನಕರ, ಪ್ರಕಾಶ ಅಕ್ಕಲಕೋಟ, ರವಿಕಾಂತ ಬಗಲಿ, ಸಂಗರಾಜ ದೇಸಾಯಿ, ವಿವೇಕಾನಂದ ಡಬ್ಬಿ, ಶಿವರುದ್ರ ಬಾಗಲಕೋಟ, ಶಂಭು ಕಕ್ಕಳಮೇಲಿ, ಗೂಳಪ್ಪ ಶಟಗಾರ, ಸುಧಾಬಾಯಿ ಪಾಂಡೆ, ಸಂಜಯಪಾಟೀಲ ಕನಮಡಿ, ಅಶೋಕ ನ್ಯಾಮಗೊಂಡ, ಭೀಮಾಶಂಕರ ಹದನೂರ, ಪತಂಗೆ, ಪಾಲಿಕೆ ಸದಸ್ಯರಾದ ರಾಜು ಮಗಿಮಠ, ರಾಹುಲ್ ಜಾಧವ, ಪ್ರೇಮಾನಂದ ಬಿರಾದಾರ, ಉಮೇಶ ವಂದಾಲ, ರವೀಂದ್ರ ಲೋಣಿ, ಸಂತೋಷ ಚವ್ಹಾಣ, ಬಾಗಪ್ಪ ಕನ್ನೊಳ್ಳಿ ಉಪಸ್ಥಿತರಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !