ಜ್ಞಾನದ ಮೂಲ ಸೆಲೆ ಶ್ರಮ ಸಂಸ್ಕೃತಿಯಲ್ಲಿ

7
ವಿಮರ್ಶಕ ಡಾ.ರಾಜೇಂದ್ರ ಚೆನ್ನಿ

ಜ್ಞಾನದ ಮೂಲ ಸೆಲೆ ಶ್ರಮ ಸಂಸ್ಕೃತಿಯಲ್ಲಿ

Published:
Updated:
Prajavani

ಸಾಗರ: ಜ್ಞಾನದ ಉತ್ಪಾದನೆಯ ಮೂಲ ಸೆಲೆ ಇರುವುದೆ ಶ್ರಮ ಸಂಸ್ಕೃತಿಯಲ್ಲಿ ಎಂದು ವಿಮರ್ಶಕ ಡಾ. ರಾಜೇಂದ್ರ ಚೆನ್ನಿ ಹೇಳಿದರು.

ಸಮೀಪದ ಹೊನ್ನೇಸರ ಗ್ರಾಮದ ಶ್ರಮಜೀವಿ ಆಶ್ರಮದಲ್ಲಿ ಚರಕ ಉತ್ಸವ-2019ರ ಅಂಗವಾಗಿ ‘ಕಲೆ, ಕುಶಲಕರ್ಮಿ ಮತ್ತು ಶ್ರಮ ಸಂಸ್ಕೃತಿ’ ಎಂಬ ವಿಷಯದ ಕುರಿತು ಭಾನುವಾರ ನಡೆದ ವಿಚಾರಸಂಕಿರಣದಲ್ಲಿ ಅವರು ಮಾತನಾಡಿದರು.

‘ಶ್ರಮ ಸಂಸ್ಕೃತಿಯಲ್ಲಿ ಕಾಣುವ ಕಲಾತ್ಮಕತೆಯನ್ನು ಬೇರೆಡೆ ಕಾಣಲು ಸಾಧ್ಯವಿಲ್ಲ. ವಿಶ್ವವಿದ್ಯಾಲಯಗಳಲ್ಲಿ ಕಾಣದ ಜ್ಞಾನದ ಪರಂಪರೆ ಶ್ರಮ ಸಂಸ್ಕೃತಿಯಲ್ಲಿ ಇದೆ. ಆದರೆ ಶ್ರಮ ಸಂಸ್ಕೃತಿಯನ್ನು ನಾವು ಕಡೆಗಣಿಸುತ್ತಿರುವ ಕಾರಣ ಜ್ಞಾನದ ಮೂಲಗಳ ಕುರಿತ ಗ್ರಹಿಕೆಗಳು ತಪ್ಪಾಗುತ್ತಿವೆ’ ಎಂದು ಅಭಿಪ್ರಾಯಪಟ್ಟರು.

ಜಗತ್ತಿನ ಇತರ ದೇಶಗಳಲ್ಲಿ ದೇಹವನ್ನು ನೋಡುವ ಕ್ರಮಕ್ಕೂ ಭಾರತದಲ್ಲಿ ಗ್ರಹಿಸುವ ಕ್ರಮಕ್ಕೂ ದೊಡ್ಡ ಅಂತರವಿದೆ. ಭಾರತದಲ್ಲಿ ಮಾತ್ರ ದೇಹವನ್ನು ತಿರಸ್ಕಾರ ಭಾವದಿಂದ ನೋಡುವುದಿಲ್ಲ. ಶ್ರಮ ಸಂಸ್ಕೃತಿಯನ್ನೇ ನಾವು ಅನುಸರಿಸಿದ್ದೆ ಇದಕ್ಕೆ ಕಾರಣ ಎಂದು ವಿಶ್ಲೇಷಿಸಿದರು.

12ನೇ ಶತಮಾನದಲ್ಲೆ ವಚನ ಸಾಹಿತ್ಯ ಶ್ರಮ, ಕರಕುಶಲತೆ, ಕೌಶಲಕ್ಕೆ ಹೆಚ್ಚಿನ ಮನ್ನಣೆ ನೀಡಿದೆ. ಶ್ರಮ ಸಂಸ್ಕೃತಿಯನ್ನೇ ಧರ್ಮ, ಅಧ್ಯಾತ್ಮ ಎಂದು ವಚನ ಚಳವಳಿ ಪರಿಗಣಿಸಿದೆ. ಯಾವುದೇ ಒಂದು ಸಾಹಿತ್ಯ ಪ್ರಕಾರ ಶ್ರಮ ಸಂಸ್ಕೃತಿಗೆ ಈ ಮಟ್ಟದ ಮಹತ್ವ ನೀಡಿರುವುದು ಬೇರೆಡೆ ಕಾಣುವುದಿಲ್ಲ ಎಂದರು.

‘ಕಾಯಕ ಸಂಸ್ಕೃತಿಯ ಪ್ರತೀಕದಂತಿರುವ ಚರಕ ನಮ್ಮ ಸಂಭ್ರಮಾಚರಣೆಯ ಪ್ರಮುಖ ಆಕರವಾಗಬೇಕಿತ್ತು. ಆದರೆ ಇಲ್ಲಿ ಚರಕ ಕೇವಲ ಒಂದು ಸಂಕೇತವಾಗಿರುವ ಬಗ್ಗೆ ನಾವೆಲ್ಲರೂ ಗಂಭೀರವಾಗಿ ಚಿಂತಿಸಬೇಕಿದೆ’ ಎಂದು ಹೇಳಿದರು.

ಲೇಖಕಿ ಡಾ.ಎಚ್.ಎಸ್. ಅನುಪಮ, ಭಾರತೀಯ ಜೀವನ ಶೈಲಿಯಲ್ಲಿ ಮೊದಲಿನಿಂದಲೂ ಶ್ರಮ ಸಂಸ್ಕೃತಿಗೆ ಪ್ರಮುಖವಾದ ಸ್ಥಾನವಿದೆ. ದೈಹಿಕ ಶ್ರಮದ ದುಡಿಮೆ ಮನುಷ್ಯನ ನೆಮ್ಮದಿಗೆ ಕಾರಣವಾಗುತ್ತದೆ ಎನ್ನುವುದು ವೈಜ್ಞಾನಿಕವಾಗಿ ಕೂಡ ಸಾಬೀತಾಗಿದೆ ಎಂಬುದನ್ನು ವಿವರಿಸಿದರು.

ಯಂತ್ರ ನಾಗರಿಕತೆಯಿಂದ ತಯಾರಾಗುವ ಉತ್ಪನ್ನಗಳಿಗೂ ಶ್ರಮ ಸಂಸ್ಕೃತಿಯ ಮೂಲಕ ರೂಪಿಸುವ ಉತ್ಪನ್ನಗಳಿಗೂ ಕಲಾತ್ಮಕತೆಯ ವಿಷಯದಲ್ಲಿ ಅಜಗಜಾಂತರವಿದೆ. ಶ್ರಮದ ದುಡಿಮೆಯಿಂದ ತಯಾರಾಗುವ ಉತ್ಪನ್ನಗಳಲ್ಲಿ ಸಿಗುವ ಧನ್ಯತೆ ವಿವರಿಸಲು ಅಸಾಧ್ಯ ಎಂದು ಹೇಳಿದರು.

ಚರಕ ಸಂಸ್ಥೆಯ ಅಧ್ಯಕ್ಷೆ ಗೌರಮ್ಮ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಪಂಚಾಯಿತಿ ಸದಸ್ಯೆ ಸುವರ್ಣಾ ಟೀಕಪ್ಪ ಹಾಜರಿದ್ದರು. ಪ್ರಿಯಾಂಕಾ ನಿರೂಪಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !