ಆನೆದಂತ ಕಳವು ಪ್ರಕರಣ ಸಿಐಡಿಗೆ ಹೆಗಲಿಗೆ

7

ಆನೆದಂತ ಕಳವು ಪ್ರಕರಣ ಸಿಐಡಿಗೆ ಹೆಗಲಿಗೆ

Published:
Updated:

ಶಿವಮೊಗ್ಗ: ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಯಿಂದ ನಿಗೂಢವಾಗಿ ಕಣ್ಮರೆಯಾಗಿರುವ ಜೋಡಿ ಆನೆದಂತ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಲಾಗಿದೆ.

ಜೋಡಿ ದಂತ ಕಳವು ಪ್ರಕರಣದ ವಿಸ್ತೃತ ತನಿಖೆ ನಡೆಸುವಂತೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಸಿಐಡಿಗೆ ಪತ್ರ ಬರೆದಿದ್ದಾರೆ.

ಕಚೇರಿಯ ಆವರಣದಲ್ಲಿದ್ದ ಐತಿಹಾಸಿಕ ಶಿಲ್ಪ ಕಲಾಕೃತಿಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆ ಅವರು ವರ್ಷದ ಹಿಂದೆ ಕುವೆಂಪು ವಿಶ್ವವಿದ್ಯಾಲಯಕ್ಕೆ ದೇಣಿಗೆ ನೀಡುವ ಸಮಯದಲ್ಲಿ ದಂತಗಳು ಕಳುವಾದ ವಿಚಾರ ಬೆಳಕಿಗೆ ಬಂದಿತ್ತು.

ಎರಡು ದಶಕಗಳ ಹಿಂದೆ ಅರಣ್ಯ ಇಲಾಖೆ ಬೆಲೆಬಾಳುವ ಜೋಡಿ ದಂತವನ್ನು ಜಿಲ್ಲಾ ಪೊಲೀಸ್‌ ಕಚೇರಿಗೆ ಕೊಡುಗೆಯಾಗಿ ನೀಡಿತ್ತು. ಅಂದಿನಿಂದಲೂ ಈ ದಂತಗಳನ್ನು ಎಸ್‌ಪಿ ಕುಳಿತುಕೊಳ್ಳುವ ಕುರ್ಚಿಯ ಹಿಂಭಾಗದ ಗೋಡೆಗೆ ಹಾಕಲಾಗಿತ್ತು.

ಪ್ರಕರಣ ವಿವಾದದ ಸ್ವರೂಪ ಪಡೆಯುತ್ತಿದ್ದಂತೆ ಎಚ್ಚೆತ್ತುಕೊಂಡ ಅಭಿನವ್ ಖರೆ ಆನೆದಂತ ಕುರಿತು ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ಹೆಚ್ಚುವರಿ ಎಸ್‌ಪಿ ಮುತ್ತುರಾಜ್ ಅವರಿಗೆ ಸೂಚಿಸಿದ್ದರು. 2011ರಲ್ಲಿ ಕಚೇರಿ ನವೀಕರಣಕ್ಕಾಗಿ ಗೋಡೆಯಿಂದ ತೆಗೆಯಲಾಗಿತ್ತು. ನಂತರ ಈ ಕುರಿತು ಮಾಹಿತಿ ಇಲ್ಲ ಎಂದು ಬಹುತೇಕ ಸಿಬ್ಬಂದಿ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾರೆ ಎಂದು ಮುತ್ತುರಾಜ್ ವರದಿ ನೀಡಿದ್ದರು.

ದಂತ ಕಾಣೆಯಾದ ವಿಚಾರ ಬೆಳಕಿಗೆ ಬಂದು ವರ್ಷದ ನಂತರ ಎಸ್‌ಪಿ ಕಚೇರಿ ರಹಸ್ಯ ವಿಭಾಗದಲ್ಲಿ ಕಾರ್ಯನಿರ್ವಹಿಸುವ ಎ.ಬಿ. ಶ್ರೀನಾಥ್ ಅವರು ದೊಡ್ಡಪೇಟೆ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದರು. ಈ ಸಂಬಂಧ ಇಬ್ಬರು ಪೊಲೀಸರನ್ನು ಸೇವೆಯಿಂದ ಅಮಾನತುಗೊಳಿಸಲಾಗಿತ್ತು.

ಪ್ರಕರಣ ಭೇದಿಸುವುದು ಸಾಧ್ಯವಾಗಿಲ್ಲ. ಇದರಲ್ಲಿ ಪ್ರಭಾವಿಗಳ ಕೈವಾಡ ಇರಬಹುದು ಎಂದು ಶಂಕಿಸಿದ್ದ ಎಸ್‌ಪಿ, ಸಿಐಡಿಗೆ ವರ್ಗಾಯಿಸಲು ಶಿಫಾರಸು ಮಾಡಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !