ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ ತಾಲ್ಲೂಕು ಅಭಿವೃದ್ಧಿಗೆ ವಿಶೇಷ ಅನುದಾನ

ವಿವಿಧ ಯೋಜನೆಗಳ ಸೌಲಭ್ಯಗಳ ವಿತರಣಾ ಸಮಾರಂಭದಲ್ಲಿ ಅನಿತಾ ಕುಮಾರಸ್ವಾಮಿ
Last Updated 2 ಮಾರ್ಚ್ 2019, 13:30 IST
ಅಕ್ಷರ ಗಾತ್ರ

ರಾಮನಗರ : ತಾಲ್ಲೂಕಿನ ಅಭಿವೃದ್ಧಿಗೆ ವಿವಿಧ ಯೋಜನೆಯಡಿ ₹380 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ಹೇಳಿದರು.

ಇಲ್ಲಿನ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ ಹಾಗೂ ನಗರಸಭೆ ಸಹಯೋಗದಲ್ಲಿ ಶನಿವಾರ ನಡೆದ ವಿವಿಧ ಯೋಜನೆಗಳ ಸೌಲಭ್ಯಗಳ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಗರಾಭಿವೃದ್ಧಿಗಾಗಿ ಸರ್ಕಾರದಿಂದ ₹386 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸಮಗ್ರ ಗ್ರಾಮೀಣಾಭಿವೃದ್ಧಿ ಹಾಗೂ ನಗರಾಭಿವೃದ್ಧಿಗೆ ಸಾಕಷ್ಟು ಶ್ರಮಿಸುತ್ತಿದ್ದಾರೆ. ಅವರು ಹಾಕಿಕೊಟ್ಟ ಮಾರ್ಗದಲ್ಲೇ ಶಾಸಕಿಯಾಗಿ ಜನರ ಸೇವೆ ಮಾಡುತ್ತೇನೆ ಎಂದು ತಿಳಿಸಿದರು.

ಎಸ್‌ಎಸ್‌ಸಿ ಅನುದಾನದ ಅಡಿಯಲ್ಲಿ ನಗರದ ಕುಡಿಯುವ ನೀರು ಹಾಗೂ ಚರಂಡಿ ನಿರ್ಮಾಣಕ್ಕೆ ಕಾರ್ಯಕ್ಕೆ ₹10 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಅಲ್ಪಸಂಖ್ಯಾತ ಬೋರ್ಡಿನ ಮುಖಾಂತರ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ₹10 ಕೋಟಿ ಹಣ ಮೀಸಲಿಡಲಾಗಿದೆ ಎಂದು ತಿಳಿಸಿದರು.

ರಾಮನಗರದಲ್ಲಿ ಸುಸಜ್ಜಿತ ಒಳಾಂಗಣ ಸ್ಟೇಡಿಯಂ ನಿರ್ಮಾಣದ ಗುರಿ ಹೊಂದಲಾಗಿದೆ. ಜತೆಗೆ ಗಾಜಿನ ಮನೆ ನಿರ್ಮಾಣಕ್ಕೆ ಸ್ಥಳ ಗುರುತಿಸಲಾಗಿದೆ. ಕುಮಾರಸ್ವಾಮಿ ಅವರ ಕನಸಾದ ಅರ್ಕಾವತಿ ನದಿಯ ಭಾಗದಲ್ಲಿ ವ್ಯಾಯಾಮ ಶಾಲೆ, ವಾಕಿಂಗ್‍ ಪಾತ್‌ ನಿರ್ಮಾಣಕ್ಕೆ ಮುಂದಾಗಿದ್ದೇವೆ ಎಂದು ತಿಳಿಸಿದರು.

ರಸ್ತೆ ಬದಿಯ ವ್ಯಾಪಾರಿಗಳ ಸಮಗ್ರ ಅಭಿವೃದ್ಧಿಗಾಗಿ ಸರ್ಕಾರ ಬಡವರ ಬಂದು ಯೋಜನೆ ಜಾರಿಗೆ ತಂದಿದೆ. ಇದರ ಮೂಲಕ ಬಡ್ಡಿರಹಿತ ಸಾಲ ನೀಡಲಾಗುತ್ತಿದೆ. ಮೊದಲು ವ್ಯಾಪಾರಿಗಳು ಹೆಚ್ಚಿನ ಬಡ್ಡಿಗೆ ಸಾಲ ಮಾಡುತ್ತಿದ್ದರು. ಈ ಯೋಜನೆಯಿಂದಾಗಿ ಶೋಷಣೆ ತಪ್ಪಿದಂತಾಗಿದೆ ಎಂದು ತಿಳಿಸಿದರು.

ತಾಲ್ಲೂಕಿನ ವಸತಿ ರಹಿತರಿಗೆ ನಿವೇಶನ ನೀಡಲು ಐದು ಸಾವಿರ ಮನೆ ನಿರ್ಮಾಣ ಕಾರ್ಯ ನಡೆಯುತ್ತಿದೆ. ಈಗಾಗಲೇ 3 ಸಾವಿರ ವಸತಿ ನಿರ್ಮಿಸಲಾಗಿದೆ. ಶೀಘ್ರದಲ್ಲೇ ಫಲಾನುಭವಿಗಳಿಗೆ ಅವುಗಳ ಹಂಚಿಕೆ ಮಾಡಲಾಗುತ್ತದೆ ಎಂದರು.‌

ಲೋಕಸಭೆ ಚುನಾವಣೆಗೆ ಏಪ್ರಿಲ್ 5ರ ಒಳಗೆ ನೀತಿ ಸಂಹಿತಿ ಜಾರಿಗೆ ಬರಲಿದೆ. ಆದ ಕಾರಣ, ತಾಲ್ಲೂಕಿನ ಅಭಿವೃದ್ಧಿಗಾಗಿ ತರಾತುರಿಯಲ್ಲಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತಿದೆ. ಉಪಚುನಾವಣೆಯ ಸಂದರ್ಭದಲ್ಲಿ ಮಹಿಳೆಯರು ಕುಡಿಯುವ ನೀರು ಹಾಗೂ ಚರಂಡಿ ವ್ಯವಸ್ಥೆ ಕುರಿತು ಪ್ರಶ್ನಿಸಿದ್ದರು.

‘ಸಮಸ್ಯೆ ನಿವಾರಣೆಗಾಗಿ ಕೆಲಸ ಮಾಡುತ್ತಿದ್ದೇನೆ. ಶಾಸಕಿಯಾಗಿ ಆಯ್ಕೆಯಾಗಿ 100 ದಿನ ಕಳೆದಿದೆ. ರಾಮನಗರದ ಅಭಿವೃದ್ಧಿಗೆ ಶ್ರಮಿಸುತ್ತೇನೆ. ನಿವೇಶನ ರಹಿತರಿಗೆ ಆದಷ್ಟು ಬೇಗ ಮನೆ ನಿರ್ಮಿಸಿ ಕೊಡಲಾಗವುದು’ ಎಂದು ಭರವಸೆ ನೀಡಿದರು.

‘ರಾಮನಗರದ ಅಭಿವೃದ್ಧಿಗಾಗಿ ನಾನು ಪತಿ ಸಿಎಂ ಬಳಿ ಚರ್ಚಿಸಿದರೆ ಸಾಕು, ಯೋಚಿಸಿದ ಎಲ್ಲ ಕಾಮಗಾರಿಗಳಿಗೆ ಸಹಿ ಹಾಕ್ತಾರೆ. ನಗರವನ್ನು ಸಮಗ್ರ ಅಭಿವೃದ್ಧಿಗೊಳಿಸುವ ಕನಸನ್ನು ಕುಮಾರಸ್ವಾಮಿ ಹೊಂದಿದ್ದಾರೆ’ ಎಂದು ತಿಳಿಸಿದರು.

ವಿವಿಧ ಯೋಜನಗಳ ಫಲಾನುಭವಿಗಳಿಗೆ ಕಾರ್ಡ್‌ಗಳನ್ನು ವಿತರಿಸಲಾಯಿತು. ನಗರಸಭೆ ಅಧ್ಯಕ್ಷೆ ರತ್ನಮ್ಮ ಪಾಪಣ್ಣ, ಉಪಾಧ್ಯಕ್ಷೆ ಮಂಗಳಾಶಂಭುಲಿಂಗಯ್ಯ, ಸದಸ್ಯರಾದ ಆರ್.ಎ. ಮಂಜುನಾಥ್, ಎ.ಬಿ. ಚೇತನ್‌ಕುಮಾರ್, ಎಚ್.ಎಸ್. ಲೋಹಿತ್ ಬಾಬು, ಎ. ರವಿ, ಪೌರಾಯುಕ್ತೆ ಶುಭಾ, ತಹಶೀಲ್ದಾರ್ ರಾಜು, ಮುಖಂಡರಾದ ರಾಜಶೇಖರ್, ಬಿ. ಉಮೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT