ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾವು ಸಂಕುಚಿತ ಮನೋಭಾವದವರಲ್ಲ... ನಿಮ್ಮ ತಂದೆಯವರನ್ನೇ ಕೇಳಿ: ಸಾಣೆಹಳ್ಳಿ ಶ್ರೀ

ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ * ಪ್ರತಿಭಟನೆ ನಡೆಸದಂತೆ ಭಕ್ತರಿಗೆ ಕಿವಿಮಾತು
Last Updated 25 ಮೇ 2018, 11:47 IST
ಅಕ್ಷರ ಗಾತ್ರ

ಚಿತ್ರದುರ್ಗ: ರೈತರ ಸಾಲ ಮನ್ನಾ ಹಾಗೂ ಸಮ್ಮಿಶ್ರ ಸರ್ಕಾರದ ಕುರಿತು ನೀಡಿದ ಹೇಳಿಕೆಯಿಂದ ಹುಟ್ಟಿಕೊಂಡ ವಿವಾದಕ್ಕೆ ತೆರೆ ಎಳೆಯಲು ಮುಂದಾಗಿರುವ ತರಳಬಾಳು ಶಾಖಾ ಮಠದ ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿದ್ದಾರೆ.

‘ಜಾತಿ ರಾಜಕೀಯ ಮಾಡುವುದಾದರೆ ನೇರವಾಗಿ ರಾಜಕೀಯಕ್ಕೇ ಬಂದು ಬಿಡಿ’ ಎಂಬ ನಿಮ್ಮ (ಕುಮಾರಸ್ವಾಮಿ) ಸವಾಲು ನೋವುಂಟು ಮಾಡಿದೆ ಎಂದಿರುವ ಸ್ವಾಮೀಜಿ, ಮುಖ್ಯಮಂತ್ರಿ ಹೇಳಿಕೆ ಖಂಡಿಸಲು ಮುಂದಾದ ಭಕ್ತರಿಗೆ ಪ್ರತಿಭಟನೆ ನಡೆಸದಂತೆ ಕಿವಿಮಾತನ್ನೂ ಹೇಳಿದ್ದಾರೆ.

‘ನಾವು ಯಾವ ಪಕ್ಷಕ್ಕೂ ಅಂಟಿಕೊಂಡವರಲ್ಲ. ಪಕ್ಷ, ಜಾತಿ ನೋಡದೆ ಯೋಗ್ಯರನ್ನು ಆಯ್ಕೆ ಮಾಡಿ ಎಂದು ಹೇಳುತ್ತಾ ಬಂದಿದ್ದೇವೆ. ಆದರೆ, ನಿಮ್ಮ ಪ್ರತಿಕ್ರಿಯೆ ತುಂಬಾ ನೋವುಂಟು ಮಾಡಿದೆ. ನಾವು ಏನೇ ಹೇಳುವುದಿದ್ದರೂ ನೇರವಾಗಿ, ಸ್ಪಷ್ಟವಾಗಿ ಹೇಳುತ್ತೇವೆ. ಸಂಕುಚಿತ ಮನೋಭಾವ ನಮಗಿಲ್ಲ. ಇದು ನಮ್ಮನ್ನು ಬಲ್ಲವರಿಗೆಲ್ಲ ಗೊತ್ತು. ಬೇಕಾದರೆ ನಿಮ್ಮ ತಂದೆಯವರನ್ನೇ (ಎಚ್‌.ಡಿ.ದೇವೇಗೌಡ) ಕೇಳಿ ನೋಡಿರಿ’ ಎಂದು ಸ್ವಾಮೀಜಿ ಪತ್ರದಲ್ಲಿ ನಮೂದಿಸಿದ್ದಾರೆ.

‘ಗುರುಗಳ ಸ್ಥಾನದಲ್ಲಿ ನಿಂತು ಸಲಹೆ ನೀಡುತ್ತೇವೆ. ತಪ್ಪು ಕಂಡುಬಂದಲ್ಲಿ ತಿದ್ದಿಕೊಳ್ಳಲು ಹೇಳುತ್ತೇವೆ. ತಿದ್ದಿಕೊಳ್ಳದಿದ್ದಲ್ಲಿ ಖಂಡಿಸುತ್ತೇವೆ. ‘ಅವರೇ ದಾರಿ ತಪ್ಪಿದರೆ ಏನು ಮಾಡಬೇಕು' ಎನ್ನುವ ನಿಮ್ಮ ಪ್ರಶ್ನೆ ಅರ್ಥವಿಲ್ಲದ್ದು. ಯಾರು ದಾರಿ ತಪ್ಪಿದ್ದಾರೆ, ಯಾರು ತಿದ್ದಿಕೊಳ್ಳಬೇಕು ಎಂಬುದನ್ನು ನೀವೇ ಗಂಭೀರವಾಗಿ ಯೋಚಿಸಿ. ಅನವಶ್ಯಕವಾಗಿ ವಾದ–ವಿವಾದ ಮಾಡಲು ಇಷ್ಟವಿಲ್ಲ. ನಮ್ಮ ಭಾವನೆಗಳು ನಿಮಗೆ ಅರ್ಥವಾದರೆ ಸಾಕು’ ಎಂದು ಸ್ವಾಮೀಜಿ ಪತ್ರ ರವಾನಿಸಿದ್ದಾರೆ.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಾವು ಆಡಿದ ಮಾತಿನ ಧ್ವನಿಮುದ್ರಿಕೆ, ವಿಡಿಯೊವನ್ನೂ ಅದರ ಜೊತೆಗೆ ಕಳುಹಿಸಿದ್ದಾರೆ.

ಸಿ.ಎಂ ವಿರುದ್ಧ ಪ್ರತಿಭಟನೆ

ದಾವಣಗೆರೆ: ಸ್ವಾಮೀಜಿ ವಿರುದ್ಧ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿಕೆ ಖಂಡಿಸಿ ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆ ಹೊಸದುರ್ಗದಲ್ಲಿ ಭಕ್ತರು ಗುರುವಾರ ಪ್ರತಿಭಟನೆ ನಡೆಸಿದರು.

ಹೊಸದುರ್ಗದಲ್ಲಿ ಕುಮಾರಸ್ವಾಮಿ ವಿರುದ್ಧ ಘೋಷಣೆ ಕೂಗಿದರು. ಅವರ ಪ್ರಮಾಣ ವಚನ ಸ್ವೀಕಾರಕ್ಕೆ ಶುಭ ಕೋರಲು ಜೆಡಿಎಸ್‌ ಮುಖಂಡರು ಹಾಕಿದ್ದ ಫ್ಲೆಕ್ಸ್‌ಗಳನ್ನು ಹರಿದು ಹಾಕಿದರು. ಭಾವಚಿತ್ರಕ್ಕೆ ಬೆಂಕಿ ಹಂಚಿ ಆಕ್ರೋಶ ವ್ಯಕ್ತಪಡಿಸಿದರು.

ದಾವಣಗೆರೆಯ ಗಾಂಧಿ ವೃತ್ತದಲ್ಲಿ ಕರ್ನಾಟಕ ಮಠಾಧೀಶ್ವರರ ಭಕ್ತ ಮಂಡಳಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಭಕ್ತರು, ಮುಖ್ಯಮಂತ್ರಿ ಕುಮಾರಸ್ವಾಮಿ ಬಹಿರಂಗವಾಗಿ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT