ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಳಿವಯಸ್ಸಿನಲ್ಲೂ ಬಿಡದ ಸೈಕ್ಲಿಂಗ್ ಪ್ರೀತಿ!

ಹಲವಾರು ಕ್ರೀಡಾಪಟುಗಳ ಭವಿಷ್ಯ ರೂಪಿಸಿದ ಕೋಚ್‌
Last Updated 25 ಜೂನ್ 2019, 19:45 IST
ಅಕ್ಷರ ಗಾತ್ರ

ಕೊಲ್ಹಾರ: ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ ವಿಜಯಪುರ-ಬಾಗಲಕೋಟೆ ಅವಳಿ ಜಿಲ್ಲೆಗಳ ನೂರಾರು ಸೈಕ್ಲಿಸ್ಟ್‌ಗಳ ಭವಿಷ್ಯ ರೂಪಿಸುವಲ್ಲಿ ಸೈಕ್ಲಿಂಗ್ ತರಬೇತುದಾರ ದುಂಡಪ್ಪ ಅಥಣಿ ಅವರ ಶ್ರಮ ಅಡಗಿದೆ.

ಕೊಲ್ಹಾರ ಪಟ್ಟಣದ ನಿವಾಸಿ ದುಂಡಪ್ಪ ಅಥಣಿ ತಮ್ಮ 72ನೇ ಇಳಿವಯಸ್ಸಿನಲ್ಲೂ ಸೈಕ್ಲಿಂಗ್ ಕ್ರೀಡಾಸಕ್ತಿ ಮುಂದುವರಿಸಿಕೊಂಡು ಬಂದಿದ್ದಾರೆ. ಬಡತನದಿಂದಾಗಿ 4ನೇ ತರಗತಿವರೆಗೆ ಮಾತ್ರ ಓದಿರುವ ದುಂಡಪ್ಪ, ಸೈಕ್ಲಿಂಗ್‌ನಲ್ಲಿ ಅಸಾಧಾರಣ ಸಾಧನೆ ಮಾಡಿದ್ದಾರೆ. 1986 ರಿಂದ 2007ರ ವರೆಗೆ ಕ್ರೀಡಾ ಇಲಾಖೆಯಲ್ಲಿ ಸೈಕ್ಲಿಂಗ್ ತರಬೇತುದಾರರಾಗಿ ಕಾರ್ಯ ನಿರ್ವಹಿಸಿದ್ದಾರೆ. 2008 ರಿಂದ ಹೆಚ್ಚುವರಿಯಾಗಿ 8 ವರ್ಷ ಸೇವೆ ಸಲ್ಲಿಸಿದ್ದಾರೆ.

ಸಾಧನೆಗಳ ಸರಮಾಲೆ: 1971ರಲ್ಲಿ ವಿಜಯಪುರದಲ್ಲಿ ನಡೆದ ಸೈಕ್ಲಿಂಗ್ ಸ್ಪರ್ಧೆಯಲ್ಲಿ ತಮ್ಮ ಚಿಕ್ಕಪ್ಪನ ಸೈಕಲ್ ಬಳಸಿ ಪ್ರಥಮ ಸ್ಥಾನ ಪಡೆದರು. ಅದೇ ವರ್ಷ ಧಾರವಾಡದಲ್ಲಿ ನಡೆದ ದಸರಾ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ. 1973ರಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವತಿಯಿಂದ ಆಯೋಜಿಸಿದ್ದ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಪ್ರಥಮ. ಅದೇ ವರ್ಷ ಹರಿಯಾಣದಲ್ಲಿ ನಡೆದ ರಾಷ್ಟ್ರೀಯ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಪ್ರಥಮ ಬಾರಿಗೆ ರಾಷ್ಟ್ರಮಟ್ಟದಲ್ಲಿ ಸ್ಪರ್ಧಿಸಿದ್ದರೂ ಸ್ಥಾನ ಗಳಿಸಲಿಲ್ಲ. ಆದರೆ, ಸ್ಪರ್ಧೆಯಲ್ಲಿ ಭಾಗವಹಿಸಲು ಹಣವಿಲ್ಲದ ಕಾರಣ ತಮ್ಮೂರಿನಿಂದ ಹರಿಯಾಣವರೆ ಸೈಕಲ್ ತುಳಿದು ಎಲ್ಲರೂ ನಿಬ್ಬೆರಗಾಗುವಂತೆ ಮಾಡಿದ್ದರು!

1974ರಲ್ಲಿ ಕಾರವಾರದಲ್ಲಿ ನಡೆದ ಸ್ಪರ್ಧೆಯಲ್ಲಿ ಪ್ರಥಮ. 1974ರಲ್ಲಿ ಮದ್ರಾಸ್‌ನಲ್ಲಿ ನಡೆದ 150 ಕಿ.ಮೀ ಸೈಕ್ಲಿಂಗ್ ಸ್ಪರ್ಧೆಯಲ್ಲಿ ತೃತೀಯ ಸ್ಥಾನ. 1976ರಲ್ಲಿ ಹುಬ್ಬಳ್ಳಿಯಲ್ಲಿ ನಡೆದ 150 ಕಿ.ಮೀ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಇವರು, 1977ರಲ್ಲಿ ಬೆಂಗಳೂರಿನಲ್ಲಿ ಜರುಗಿದ ರಾಷ್ಟ್ರಮಟ್ಟದ 100 ಕಿ.ಮೀ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.

ವಿಮಾನ ಹತ್ತಲು ಭಯ: ಬ್ಯಾಂಕಾಕ್ ನಗರದಲ್ಲಿ ನಡೆಯಲಿದ್ದ ಅಂತರರಾಷ್ಟ್ರೀಯ ಮಟ್ಟದ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಲು ಕ್ರೀಡಾ ಇಲಾಖೆಯು ಇವರಿಗೆ ಸುಮಾರು ಒಂದೂವರೆ ತಿಂಗಳು ಪಟಿಯಾಲದಲ್ಲಿ ತರಬೇತಿ ನೀಡಿತ್ತು. ಇನ್ನೇನು ಬ್ಯಾಂಕಾಕ್‌ಗೆ ತೆರಳಬೇಕು ಎನ್ನುವಷ್ಟರಲ್ಲಿ ವಿಮಾನ ಪ್ರಯಾಣಕ್ಕೆ ಭಯಪಟ್ಟು ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸುವ ಅವಕಾಶ ಕಳೆದುಕೊಂಡರು.

ಭವಿಷ್ಯ ರೂಪಿಸಿದ ಗುರು: ಇವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದ ಸಾಕಷ್ಟು ವಿದ್ಯಾರ್ಥಿಗಳು ಕ್ರೀಡಾ ಕೋಟಾದಡಿ ಪೊಲೀಸ್, ರೈಲ್ವೆ ಸೇರಿ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ನೌಕರಿ ಪಡೆದುಕೊಂಡಿದ್ದಾರೆ. ಸಾಧನೆ ಮಾಡಿರುವ ವಿದ್ಯಾರ್ಥಿಗಳು ದುಂಡಪ್ಪ ಅವರಿಗೆ ತಲಾ ₹3 ಲಕ್ಷ ಬೆಲೆ ಬಾಳುವ ಎರಡು ಸೈಕ್ಲಿಂಗ್ ಬೈಸಿಕಲ್‌ಗಳನ್ನು ಉಡುಗೊರೆಯಾಗಿ ನೀಡಿದ್ದು, ಅವುಗಳನ್ನು ದುಂಡಪ್ಪ ತರಬೇತಿಗಾಗಿ ಮುಡಿಪಾಗಿಟ್ಟಿದ್ದಾರೆ.

*
ಶಕ್ತಿ ಇರುವವರೆಗೆ ಸೈಕ್ಲಿಂಗ್ ತರಬೇತಿ ನೀಡುತ್ತೇನೆ. ಸರ್ಕಾರದಿಂದ ಯಾವುದೇ ನೆರವು ದೊರೆತಿಲ್ಲ. ವಿದ್ಯಾರ್ಥಿಗಳ ಪ್ರೀತಿ, ಅಭಿಮಾನ ನಾನು ಗಳಿಸಿದ ಆಸ್ತಿ.
-ದುಂಡಪ್ಪ ಅಥಣಿ, ಸೈಕ್ಲಿಂಗ್ ತರಬೇತುದಾರ
*
ದುಂಡಪ್ಪ ಸರ್ ಅತ್ಯಂತ ಸರಳ ಜೀವಿ. ತರಬೇತಿ ಸಮಯದಲ್ಲಿ ವಿದ್ಯಾರ್ಥಿಗಳಿಗಿಂತ ಮೊದಲೇ ಬರುತ್ತಿದ್ದರು. ಅವರ ಪ್ರೋತ್ಸಾಹ, ಮಾರ್ಗದರ್ಶನದಿಂದ ನೌಕರಿ ಸಿಕ್ಕಿದೆ.
-ಮಂಜುನಾಥ ಬೆಳ್ಳುಬ್ಬಿ, ಸೈಕ್ಲಿಸ್ಟ್‌ ಹಾಗೂ ರೈಲ್ವೆ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT