ಮಂಗಳವಾರ, ಸೆಪ್ಟೆಂಬರ್ 22, 2020
26 °C
ವಿಭಾಗಮಟ್ಟಕ್ಕೆ ಆಯ್ಕೆ; ಗೆಲುವಿನತ್ತ ಕ್ರೀಡಾಪಟುಗಳ ಚಿತ್ತ

ವಾಲಿಬಾಲ್‌; ಸರ್ಕಾರಿ ಶಾಲೆ ಸಾಧನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಖಾಸಗಿ ಶಾಲೆಗಳಿಗೆ ಹೋಲಿಸಿದರೆ, ಸರ್ಕಾರಿ ಶಾಲೆಗಳಲ್ಲಿ ಸಿಗುವ ಸೌಕರ್ಯ ಸ್ವಲ್ಪ ಕಡಿಮೆಯೇ. ಆದರೂ, ಲಭ್ಯ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ತಾವೇನೂ ಕಡಿಮೆ ಎಲ್ಲ ಎಂಬುದನ್ನು ಹಲವು ಸರ್ಕಾರಿ ಶಾಲೆ ಮಕ್ಕಳು ತೋರಿಸಿಕೊಟ್ಟಿದ್ದಾರೆ. ಆ ಸಾಲಿನಲ್ಲಿ ತಿಕೋಟಾ ತಾಲ್ಲೂಕು ಇಟ್ಟಂಗಿಹಾಳ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯೂ ಒಂದಾಗಿದೆ.

ಈಚೆಗೆ ಮುದ್ದೇಬಿಹಾಳ ತಾಲ್ಲೂಕು ಢವಳಗಿ ಗ್ರಾಮದ ಬಸನಗೌಡ ಪಾಟೀಲ ಪ್ರೌಢಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಬಾಲಕರ ವಿಭಾಗದ ವಾಲಿಬಾಲ್‌ ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ತೋರುವ ಮೂಲಕ ಇಟ್ಟಂಗಿಹಾಳ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ತಂಡ ಪ್ರಥಮ ಸ್ಥಾನ ಪಡೆದಿದೆ. ಇಷ್ಟೇ ಅಲ್ಲ ಬೆಳಗಾವಿ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದೆ. ಇನ್ನು ಬಾಲಕಿಯರು ತಾವೇನು ಕಡಿಮೆ ಎಂಬಂತೆ, ಅವರು ಕೂಡ ದ್ವಿತೀಯ ಸ್ಥಾನ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆ ಮೂಲಕ ಸರ್ಕಾರಿ ಶಾಲೆ ಮಕ್ಕಳು ತಾವು ಸಾಧನೆಯಲ್ಲಿ ಹಿಂದೆ ಬಿದ್ದಿಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ.

ವಿಭಾಗ ಮಟ್ಟಕ್ಕೆ ಆಯ್ಕೆಯಾಗಿರುವ ವಾಲಿಬಾಲ್ ತಂಡದಲ್ಲಿ ವಿನೋದ ಹಿರೇಕುರುಬರ, ಈಶ್ವರ ಚವ್ಹಾಣ, ಅಕ್ಷಯ ಲಮಾಣಿ, ಅಜೀತ ರಾಠೋಡ, ಅಭಿಷೇಕ ನಾಯಕ, ವಿಕಾಸ ಈಳಗೇರ, ಅಭಿಷೇಕ ಕಟ್ಟಿ, ಮಹೇಶ ಮೇಡೆದಾರ, ವಿಕಾಸ ತಾಂಬೆ, ರೋಹಿತ ಚವ್ಹಾಣ, ವಿಶ್ವನಾಥ ಮಠಪತಿ, ಸಿದ್ದಪ್ಪ ಬಡಿಗೇರ ಇದ್ದಾರೆ. ಇಲ್ಲಿಯೂ ಇವರ ಗೆಲುವು ಖಚಿತ ಎಂಬ ವಿಶ್ವಾಸ ಶಿಕ್ಷಕರದ್ದಾಗಿದೆ.

‘ಎಂಟು ವರ್ಷಗಳಿಂದ ಈ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ. ಪ್ರತಿ ವರ್ಷ ಕ್ಲಸ್ಟರ್‌ ಮಟ್ಟದದಲ್ಲಿ ಶೇ 80ರಷ್ಟು ಸ್ಪರ್ಧೆಗಳಲ್ಲಿ ಗೆಲುವು ಸಾಧಿಸಿದ್ದೇವೆ. ವಲಯ ಮಟ್ಟದಲ್ಲಿ ಕನಿಷ್ಠ ಎರಡು ಗುಂಪು ಸ್ಪರ್ಧೆ, ವೈಯಕ್ತಿಕ ಸ್ಪರ್ಧೆಗಳಲ್ಲಿ ಪ್ರಶಸ್ತಿಗಳು ಶಾಲೆಗೆ ಬಂದಿವೆ. ತಾಲ್ಲೂಕು, ಜಿಲ್ಲಾ ಮಟ್ಟದಲ್ಲಿಯೂ ನಮ್ಮ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ತೋರಿದ್ದು, ಪ್ರಸಕ್ತ ವರ್ಷ ಜಿಲ್ಲಾ ಮಟ್ಟದ ವಾಲಿಬಾಲ್‌ ಪಂದ್ಯಾವಳಿಯಲ್ಲಿ ಬಾಲಕರು ಪ್ರಥಮ, ಬಾಲಕಿಯರು ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. 2018ರಲ್ಲಿ ವಿದ್ಯಾರ್ಥಿಯೊಬ್ಬರು 200 ಮೀಟರ್ ಓಟದ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ, 5ನೇ ಸ್ಥಾನ ಪಡೆದಿದ್ದಾನೆ’ ಎಂದು ದೈಹಿಕ ಶಿಕ್ಷಕ ಡಿ.ಎಸ್.ಹಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.