ಸೋಮಸಂದ್ರ ಆಂಜನೇಯ ದೇವಾಲಯದ ಜೀರ್ಣೋದ್ಧಾರ

7
33 ಹಳ್ಳಿಗಳಲ್ಲಿ ಭಕ್ತರಿರುವ ದೇಗುಲ–19ರಂದು ಶ್ರೀನಿವಾಸ ಕಲ್ಯಾಣೋತ್ಸವಕ್ಕೆ ಜನರ ಸಿದ್ಧತೆ

ಸೋಮಸಂದ್ರ ಆಂಜನೇಯ ದೇವಾಲಯದ ಜೀರ್ಣೋದ್ಧಾರ

Published:
Updated:
Deccan Herald

ರಾಮನಗರ: ಇಲ್ಲಿನ ಕಸಬಾ ಹೋಬಳಿಯ ಚಿಕ್ಕೇಗೌಡನದೊಡ್ಡಿಯ ಸೋಮಸಂದ್ರ ಆಂಜನೇಯಸ್ವಾಮಿ ದೇವಾಲಯದ ಜೀರ್ಣೋದ್ಧಾರ ಮತ್ತು ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮ ಇದೇ 19ರಂದು ಬೆಳಿಗ್ಗೆ 11.30ಕ್ಕೆ ನಡೆಯಲಿದೆ.

ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಭಾಗವಹಿಸಲಿದ್ದಾರೆ.

ದೇವಾಲಯದ ಪರಿಚಯ: ಈ ದೇವಾಲಯನ್ನು 400 ವರ್ಷಗಳಿಗೂ ಹಿಂದೆ ನಿರ್ಮಿಸಲಾಗಿದೆ. ಮೊದಲು ಗುಡಿ ಇತ್ತು. ಈಗ ಗುಡಿಯನ್ನು ಜೀರ್ಣೋದ್ಧಾರಗೊಳಿಸಿ ದೇವಾಲಯ, ಸಮುದಾಯ ಭವನವನ್ನು ನಿರ್ಮಿಸಲಾಗಿದೆ ಎಂದು ತಿಮ್ಮೇಗೌಡನದೊಡ್ಡಿಯ ವಕೀಲ ಟಿ. ವೆಂಕಟಪ್ಪ ತಿಳಿಸಿದರು.

‘ಈ ಭಾಗದಲ್ಲಿ ಹರಿಯುವ ಅರ್ಕಾವತಿ ನದಿಯ ಆಚೆಗೆ ನೀಲಸಂದ್ರ, ಈಚೆಗೆ ಸೋಮಸಂದ್ರ ಊರುಗಳಿದ್ದವು. ಯಾವುದೋ ಕಾರಣಕ್ಕಾಗಿ ಈ ಊರುಗಳ ಜನರಿಗೆ ಗಲಾಟೆಯಾಯಿತು. ನಂತರ ಇಲ್ಲಿದ್ದ ಆಂಜನೇಯಸ್ವಾಮಿಯ ವಿಗ್ರಹವನ್ನು ಹಳ್ಳಿಮಾಳದ ಜನರು ಎತ್ತಿಕೊಂಡು ಹೋಗುವಾಗ, ಸೋಮಸಂದ್ರದ ಬಳಿ ಇಟ್ಟು ಹೋದರು ಎಂದು ನಮ್ಮ ತಾತನವರು ಹೇಳುತ್ತಿದ್ದರು’ ಎಂದರು.

ಈಗ ನೀಲಸಂದ್ರ ತಿಮ್ಮೇಗೌಡನದೊಡ್ಡಿ, ಸೋಮಸಂದ್ರ ಚಿಕ್ಕೇಗೌಡನದೊಡ್ಡಿಯಾಗಿದೆ. ಈ ದೇವಾಲಯದ ಅಭಿವೃದ್ಧಿಗಾಗಿ ಒಂದು ಎಕರೆ ಜಮೀನನ್ನು ಬಿಡಲಾಗಿದೆ. ಸುತ್ತಲಿನ 33 ಹಳ್ಳಿಗಳಲ್ಲಿ ಈ ದೇವಾಲಯಕ್ಕೆ ಭಕ್ತರು ಇದ್ದಾರೆ ಎಂದು ಮಾಹಿತಿ ನೀಡಿದರು.

ಮೊದಲಿನಿಂದಲೂ ಜನರು ಇಲ್ಲಿ ಮದುವೆ ಮತ್ತಿತರ ಶುಭ ಕಾರ್ಯಕ್ರಮಗಳನ್ನು ಮಾಡುತ್ತಿದ್ದರು. ಸೋಮಸಂದ್ರ ಆಂಜನೇಯ ಸಮಿತಿಯವರು ದೇವಾಲಯ ಅಭಿವೃದ್ಧಿಯನ್ನು ಮಾಡುತ್ತಿರುವುದರಿಂದ ಸಾಮಾನ್ಯ ಜನರಿಗೆ ಶುಭ ಕಾರ್ಯಗಳನ್ನು ಮಾಡಲು ಅನುಕೂಲವಾಗಿದೆ ಎಂದು ಹಿರಿಯರಾದ ರಾಜರಾಮಯ್ಯ ತಿಳಿಸಿದರು.

ದೇವಾಲಯಕ್ಕೆ ಸಂಬಂಧಿಸಿದಂತೆ ಹಲವು ಶಾಸನಗಳು ಹೊಲಗಳಲ್ಲಿ ಇವೆ. ಅವುಗಳ ಅಧ್ಯಯನ ಮಾಡಿದರೆ, ಯಾವ ಕಾಲದಲ್ಲಿ ನಿರ್ಮಾಣವಾಗಿದೆ ಎಂದು ತಿಳಿದು ಬರುತ್ತದೆ ಎಂದರು.

ಕ್ರಿ.ಶ. 13ನೇ ಶತಮಾನದಲ್ಲಿ ಇದು ನಿರ್ಮಾಣವಾಗಿದೆ. ಈ ಆಂಜನೇಯ ವಿಗ್ರಹವನ್ನು ವ್ಯಾಸ ಮಹರ್ಷಿ ಪ್ರತಿಷ್ಠಾಪಿಸಿದ್ದಾರೆ. ಸೋಮಸಂದ್ರ ಹಾಗೂ ನೀಲಸಂದ್ರಗಳು ಒಂದು ಕಾಲಕ್ಕೆ ಬ್ರಾಹ್ಮಣರಿದ್ದ ಪ್ರದೇಶವಾಗಿದ್ದವು. ಇವರಲ್ಲಿ ಸಂಘರ್ಷಗಳು ಉಂಟಾಗಿ ಬೇರೆಬೇರೆಯಾಗಿರಬಹುದು ಎಂದು ಹಿರಿಯ ಸಂಶೋಧಕ ಡಾ.ಎಂ.ಜಿ. ನಾಗರಾಜ್‌ ತಿಳಿಸಿದರು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !