ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಯಶಸ್ಸು’ ಕೈಪಿಡಿ ವಿತರಣೆಗೆ ಸಿದ್ಧತೆ

ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ ಶಿಕ್ಷಣ ಇಲಾಖೆ ಕಸರತ್ತು
Last Updated 14 ಡಿಸೆಂಬರ್ 2018, 19:45 IST
ಅಕ್ಷರ ಗಾತ್ರ

ರಾಮನಗರ: ಈ ಬಾರಿ ಜಿಲ್ಲೆಯಲ್ಲಿ ಎಸ್ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಯತ್ತ ಸಾರ್ವಜನಿಕ ಶಿಕ್ಷಣ ಇಲಾಖೆಯು ಗಮನ ಹರಿಸಿದ್ದು, ವಿದ್ಯಾರ್ಥಿಗಳಿಗೆ ‘ಯಶಸ್ಸು’ ಕೈಪಿಡಿ ವಿತರಿಸಲು ಸಿದ್ಧತೆ ನಡೆದಿದೆ.

ಕಲಿಕೆಯಲ್ಲಿ ಹಿಂದೆ ಉಳಿದಿರುವ ವಿದ್ಯಾರ್ಥಿಗಳನ್ನು ಗುರುತಿಸಿ, ಸರಳೀಕರಿಸಿದ ಪಠ್ಯಕ್ರಮದ ಮೂಲಕ ಅವರ ಕಲಿಕೆಗೆ ಉತ್ತೇಜನ ನೀಡುವುದು ಈ ಕೈಪಿಡಿಯ ಉದ್ದೇಶವಾಗಿದೆ. ಆರು ವಿಷಯಗಳಲ್ಲಿನ ಪಠ್ಯಗಳನ್ನು ಆಧರಿಸಿ, ಪ್ರತಿ ವಿಷಯದಲ್ಲಿಯೂ ಪ್ರಶ್ನೋತ್ತರ ಮಾಲಿಕೆಯನ್ನು ಒಳಗೊಂಡ ಪ್ರತ್ಯೇಕ ಕೈಪಿಡಿಯನ್ನು ಸಿದ್ಧಪಡಿಸಲಾಗಿದೆ.

ಇಲಾಖೆಯು ಸತತ ಮೂರನೇ ವರ್ಷ ವಿದ್ಯಾರ್ಥಿಗಳಿಗೆ ಈ ಕೈಪಿಡಿಯನ್ನು ವಿತರಿಸುತ್ತಿದೆ. ಜಿಲ್ಲೆಯಲ್ಲಿನ ಸರ್ಕಾರಿ ಹಾಗೂ ಅನುದಾನಿತ ಪ್ರೌಢಶಾಲೆಗಳ ಸುಮಾರು 10 ಸಾವಿರ ವಿದ್ಯಾರ್ಥಿಗಳಿಗೆ ಇದನ್ನು ವಿತರಿಸಲಾಗುವುದು. ಟೊಯೊಟಾ ಕಂಪನಿಯು ಇದರ ಪ್ರಾಯೋಜಕತ್ವ ವಹಿಸಿದೆ.

‘ಓದಿನಲ್ಲಿ ಸರಾಸರಿ ಹಾಗೂ ಅದಕ್ಕಿಂತ ಹಿಂದೆ ಉಳಿದಿರುವ ವಿದ್ಯಾರ್ಥಿಗಳು ಇಡೀ ಪಠ್ಯಪುಸ್ತಕವನ್ನು ಓದಿ ಅರ್ಥೈಸಿಕೊಳ್ಳುವುದು ಕಷ್ಟ. ಆಗ ಅಂತಹ ವಿದ್ಯಾರ್ಥಿಗಳು ಓದಿನಲ್ಲಿ ಆಸಕ್ತಿ ಕಳೆದುಕೊಳ್ಳುತ್ತದೆ. ಅಂತಹ ಸಂದರ್ಭದಲ್ಲಿ ಅವರ ಬುದ್ಧಿಮಟ್ಟಕ್ಕೆ ತಕ್ಕಂತೆ ಪ್ರತಿ ಪಾಠವನ್ನು ಸರಳೀಕರಣಗೊಳಿಸಿ ಪ್ರಶ್ನೋತ್ತರ ಮಾಲಿಕೆ ಸಿದ್ಧಪಡಿಸಿದ್ದೇವೆ. ಇದು ಪಠ್ಯಕ್ಕೆ ಪೂರಕವಾದ ಕೈಪಿಡಿಯಾಗಿದೆ. ಮಾದರಿ ಪ್ರಶ್ನೆಪತ್ರಿಕೆಗಳೂ ಇದರಲ್ಲಿ ಇವೆ. ಬುದ್ದಿವಂತ ಮಕ್ಕಳು ಇದನ್ನು ಓದಿಕೊಂಡು ನಂತರದಲ್ಲಿ ಅವರ ಪಠ್ಯವನ್ನೂ ಓದಿ ಹೆಚ್ಚಿ ಅಂಕ ಗಳಿಸಬಹುದು’ ಎಂದು ಶಿಕ್ಷಣ ಇಲಾಖೆಯ ಉಪನಿರ್ದೇಶಕ ಗಂಗಮಾರೇಗೌಡ ತಿಳಿಸಿದರು.

‘ಇದರಿಂದ ಮಕ್ಕಳಿಗೆ ನಾನು ಕೂಡ ಪರೀಕ್ಷೆಯಲ್ಲಿ ಉತ್ತೀರ್ಣರಾಗಬಲ್ಲೆ ಎನ್ನುವ ವಿಶ್ವಾಸ ಮೂಡುತ್ತದೆ. ಫಲಿತಾಂಶವನ್ನು ಉತ್ತಮಪಡಿಸಲು ಇದು ನೆರವಾಗಲಿದೆ. ಪಾಠಗಳು ಮುಗಿದ ನಂತರ ಪುನರಾವರ್ತನೆ ಸಮಯದಲ್ಲಿ ಈ ಕೈಪಿಡಿ ವಿತರಣೆ ಆಗಲಿದೆ’ ಎಂದರು.

ಕನ್ನಡ ಮಾಧ್ಯಮ ಶಾಲೆಗಳ ಎಲ್ಲ ವಿದ್ಯಾರ್ಥಿಗಳಿಗೆ ಈ ಕೈಪಿಡಿ ಸಿಗಲಿದೆ. ಇಂಗ್ಲಿಷ್‌ ಹಾಗೂ ಉರ್ದು ಮಾಧ್ಯಮ ಶಾಲೆಗಳಿಗೆ ಅನುವಾದಿಸಿದ ಕೈಪಿಡಿಯ ಡಿಜಿಟಲ್ ಪ್ರತಿ ನೀಡಲಾಗುವುದು. ಈ ಶಾಲೆಗಳ ಶಿಕ್ಷಕರು ತಮ್ಮಲ್ಲಿನ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಮಾಹಿತಿ ನೀಡಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಫಲಿತಾಂಶ ಹೆಚ್ಚಳದ ನಿರೀಕ್ಷೆ: 2016–17ನೇ ಸಾಲಿನಲ್ಲಿ ಜಿಲ್ಲಾವಾರು ಫಲಿತಾಂಶದಲ್ಲಿ ಆರನೇ ಸ್ಥಾನದಲ್ಲಿ ಇದ್ದ ರಾಮನಗರವು ಕಳೆದ ವರ್ಷ 17ನೇ ಸ್ಥಾನಕ್ಕೆ ಕುಸಿದಿತ್ತು. ಈ ವರ್ಷ ಕನಿಷ್ಠ ಮೊದಲ ಐದರೊಳಗೆ ಸ್ಥಾನ ಪಡೆಯುವ ಗುರಿ ಹೊಂದಲಾಗಿದೆ.

40 ಶಾಲೆಗಳ ದತ್ತು
ಕಳೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 60ಕ್ಕಿಂತ ಕಡಿಮೆ ಫಲಿತಾಂಶ ದಾಖಲಿಸಿದ ಸರ್ಕಾರಿ ಶಾಲೆಗಳನ್ನು ಅಧಿಕಾರಿಗಳಿಗೆ ‘ದತ್ತು’ ನೀಡಲಾಗಿದ್ದು, ಅವರು ಅಲ್ಲಿನ ಮೇಲುಸ್ತುವಾರಿ ವಹಿಸಿದ್ದಾರೆ. ಡಿಡಿಪಿಐ, ಡಯಟ್‌ ಪ್ರಚಾರ್ಯರ ನೇತೃತ್ವದಲ್ಲಿ ಆಗಾಗ್ಗೆ ಶೈಕ್ಷಣಿಕ ಪ್ರಗತಿ ಪರಿಶೀಲನಾ ಸಭೆಗಳು ನಡೆಯುತ್ತಿವೆ. ಶಿಕ್ಷಣ ಇಲಾಖೆಯ ಜೊತೆಗೆ ವಿವಿಧ ಇಲಾಖೆಗಳ ಅಧಿಕಾರಿಗಳೂ ಈ ಶಾಲೆಗಳಿಗೆ ಭೇಟಿ ನೀಡಿ ಅಲ್ಲಿನ ಶೈಕ್ಷಣಿಕ ಪ್ರಗತಿ ಪರಿಶೀಲಿಸುವಂತೆ ಕೋರಲಾಗಿದೆ.

ವಿದ್ಯಾರ್ಥಿಗಳಿಗಾಗಿ ‘ವಿಶ್ವಾಸ ಕಿರಣ’
ಕಲಿಕೆಯಲ್ಲಿ ತೀರ ಹಿಂದೆ ಉಳಿದಿರುವ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ವಿಶೇಷ ತರಬೇತಿ ನೀಡುವ ವಿಶ್ವಾಸ ಕಿರಣ ಯೋಜನೆಯು ಕಳೆದ ಅಕ್ಟೋಬರ್‌ನಿಂದ ನಡೆದಿದೆ.9 ಮತ್ತು 10ನೇ ತರಗತಿಯಿಂದ ಪ್ರತಿ ತರಬೇತಿ ಕೇಂದ್ರಕ್ಕೆ ತಲಾ 100 ವಿದ್ಯಾರ್ಥಿಗಳಂತೆ ಒಟ್ಟು 1600 ವಿದ್ಯಾರ್ಥಿಗಳನ್ನು ಇದಕ್ಕಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಇಂತಹ 8 ತರಬೇತಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇಲ್ಲಿ ಪ್ರತಿ ಶನಿವಾರ ಮಧ್ಯಾಹ್ನದ ರಜೆಯಲ್ಲಿ ಶಿಕ್ಷಕರು ವಿಶೇಷ ಬೋಧನೆ ಮಾಡುತ್ತಿದ್ದಾರೆ. 25 ರಜೆ ದಿನಗಳಲ್ಲಿ ವಿಶೇಷ ತರಗತಿಗಳು ನಡೆಯಲಿವೆ.

*
ಸರ್ಕಾರಿ, ಅನುದಾನಿತ ಶಾಲೆಗಳ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಈ ಕೈಪಿಡಿ ಸಿಗಲಿದೆ. ಜನವರಿಯಲ್ಲಿ ವಿತರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
-ಗಂಗಮಾರೇಗೌಡ, ಡಿಡಿಪಿಐ

*
ಪ್ರತಿ ಶಾಲಾ ಮಟ್ಟದಲ್ಲಿ ಶೈಕ್ಷಣಿಕ ಪ್ರಗತಿ ಪರಿಶೀಲನೆ ನಡೆದಿದೆ. ಜಿಲ್ಲಾ ಮಟ್ಟದಲ್ಲಿ ವಿಷಯವಾರು ಶಿಕ್ಷಕರ ವಿಷಯ ವೇದಿಕೆ ಸ್ಥಾಪಿಸಲಾಗಿದ್ದು, ಶಿಕ್ಷಕರನ್ನು ಉತ್ತೇಜಿಸುವ ಪ್ರಯತ್ನ ನಡೆದಿದೆ ಎನ್ನುತ್ತಾರೆ ಗಂಗಮಾರೇಗೌಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT