ಪುಟ್ಟ ಕೈಯಲ್ಲಿ ಪೆನ್ನಿನ ಬದಲು ಕೋಲು ಹಿಡಿದ ರೋಷನಿ

7
ಶಾಲೆಗೆ ಹೋಗಬೇಕಿದ್ದ ಬಾಲೆ ನಡೆದಿದ್ದು ಹಗ್ಗದ ಮೇಲೆ

ಪುಟ್ಟ ಕೈಯಲ್ಲಿ ಪೆನ್ನಿನ ಬದಲು ಕೋಲು ಹಿಡಿದ ರೋಷನಿ

Published:
Updated:
Deccan Herald

ತಾಂಬಾ: ಹಸಿವು ಮನುಷ್ಯನಿಂದ ಏನೆಲ್ಲವನ್ನು ಮಾಡಿಸುತ್ತದೆ ಎಂಬುದಕ್ಕೆ ಇಂಡಿ ತಾಲ್ಲೂಕಿನ ತಾಂಬಾದಲ್ಲಿ ನಡೆದ ಹಗ್ಗದ ಮೇಲೆ ನಡೆಯುವ ಪ್ರದರ್ಶನ ಸಾಕ್ಷಿಯಾಗಿದೆ.

ತಮ್ಮ ಸಾಹಸ, ಕಲೆ ಪ್ರದರ್ಶನದಿಂದ ಮನರಂಜನೆ ನೀಡಿ ಹೊಟ್ಟೆ ತುಂಬಿಸಿಕೊಳ್ಳಲು 7 ಜನರ ತಂಡವೊಂದು ತಾಂಬಾಕ್ಕೆ ಬಂದಿದೆ. ಈ ತಂಡದ ಸದಸ್ಯರಲ್ಲಿ ರೋಷನಿ ಎಂಬ 10 ವರ್ಷದ ಬಾಲಕಿಯೂ ಇದ್ದಾಳೆ.

ಪೆನ್ನು ಪುಸ್ತಕ ಹಿಡಿಯಬೇಕಾದ ಈ ಬಾಲಕಿಯಿಂದ ನಿತ್ಯ ಕಸರತ್ತು. ಹೊಟ್ಟೆ ಹೊರೆಯಲು ದಿನಕ್ಕೊಂದು ಊರು ಸುತ್ತಿ ಸಾಹಸ ಪ್ರದರ್ಶಿಸುತ್ತಾಳೆ. ಬದುಕಿಗಾಗಿ ಅವಳದ್ದು ಪ್ರತಿನಿತ್ಯದ ಹೋರಾಟ.

ಸಮವಸ್ತ್ರ ಧರಿಸಿ ತಾನೂ ಶಾಲೆಗೆ ಹೋಗಬೇಕು, ಆಟ ಪಾಠದಲ್ಲಿ ಭಾಗವಹಿಸಬೇಕು ಎಂಬ ಮಹದಾಸೆ ಇದ್ದರೂ ಈಕೆ ಕುಟುಂಬ ನಿರ್ವಹಣೆಗಾಗಿ ತಂದೆ, ತಾಯಿಯ ಜೊತೆಗೂಡಿ ಸಾರ್ವಜನಿಕೆ ಎದುರು ವಿವಿಧ ಕಸರತ್ತು ಪ್ರದರ್ಶಿಸುತ್ತಾಳೆ.

ಈ ಕಲಾವಿದರು ಮೂಲತಃ ಮಧ್ಯಪ್ರದೇಶದ ರಾಯಪುರ ಜಿಲ್ಲೆಯ ಸೈಸಲಾ ಗ್ರಾಮದವರು. ಅರುಣಕುಮಾರ ಎಂಬುವರ ಮಗಳಾದ ರೋಷನಿ ಈ ಪ್ರದರ್ಶನದ ಪ್ರಮುಖ ಪಾತ್ರಧಾರಿ.

ಸರಳುಗಳಿಂದ ತಯಾರಿಸಿದ ವಿವಿಧ ಅಳತೆಯ ಚಿಕ್ಕ ಚಿಕ್ಕ ವೃತ್ತಾಕಾರದಲ್ಲಿ ಸಾಹಸ ಪ್ರದರ್ಶನ ಮಾಡುವ ಈ ಹುಡುಗಿಯನ್ನು ನೋಡಿದರೆ ಕಲ್ಲು ಹೃದಯವೂ ಕರಗದೇ ಇರದು.

ನಾಲ್ಕು ಕೋಲುಗಳಿಗೆ ಕಟ್ಟಲಾದ 20 ಅಡಿ ಉದ್ದದ ಹಗ್ಗದ ಮೇಲೆ ಯಾವ ಸಹಾಯವೂ ಇಲ್ಲದೇ, ತೆಲೆಯ ಮೇಲೆ ಐದು ಚಿಕ್ಕ ಲೋಟಗಳನ್ನು ಇರಿಸಿಕೊಂಡು ಅವುಗಳಲ್ಲಿ ನೀರು ತುಂಬಿಕೊಂಡು ಅದು ಚೆಲ್ಲದಂತೆ ಜಾಗರೂಕತೆಯಿಂದ ನಡೆಯುತ್ತಾಳೆ.

ಡೊಂಬರಾಟದಲ್ಲಿ ತೊಡಗುವ ಇಂಥ ಕಡುಬಡ ಕಲಾವಿದರನ್ನು ಗುರ್ತಿಸಿ ಅವರಿಗೆ ವಾಸಿಸಲು ಮನೆ ಹಾಗೂ ಅವರ ಮಕ್ಕಳ ಶಿಕ್ಷಣದತ್ತ ಆಳುವವರು ಗಮನ ಹರಿಸಿದಾಗ ಮಾತ್ರ ಸುಂದರ ಭಾರತ ನಿರ್ಮಿಸಲು ಸಾಧ್ಯ. ಇದು ಸಾಧ್ಯವಾಗುವುದೇ ಎಂದು ಕಾದು ನೋಡಬೇಕು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !