5
ಹೈದರಾಬಾದ್‌, ಮಹಾರಾಷ್ಟ್ರದ ವಿವಿಧೆಡೆ ಮಹಾದೇವ ಭೈರಗೊಂಡನಿಗಾಗಿ ಶೋಧ ಕಾರ್ಯಾಚರಣೆ ನಡೆಸಿದ್ದ ಪೊಲೀಸರು

ಭೀಮಾ ತೀರದಲ್ಲೇ ವಾಸ್ತವ್ಯ; ಸಿಐಡಿಗೆ ಚಳ್ಳೆಹಣ್ಣು !

Published:
Updated:
ಮಹಾದೇವ ಭೈರಗೊಂಡ

ವಿಜಯಪುರ: ಭೀಮಾ ತೀರದ ರೌಡಿ ಗಂಗಾಧರ ಚಡಚಣನ ನಿಗೂಢ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಮರಳು ಮಾಫಿಯಾ ಡಾನ್‌, ಕಾಂಗ್ರೆಸ್‌ ಮುಖಂಡ ಮಹಾದೇವ ಭೈರಗೊಂಡನು ಸಿಐಡಿ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿರುವುದು ಗೊತ್ತಾಗಿದೆ.

ಪೊಲೀಸರೇ ಭಾಗಿಯಾಗಿರುವ ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಗಂಗಾಧರನ ತಾಯಿ ವಿಮಲಾಬಾಯಿ ಚಡಚಣ ಅವರು ಜೂನ್‌ 9ರಂದು ಚಡಚಣ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮರುದಿನವೇ (ಜೂನ್‌ 10) ಆರೋಪಿ ಮಹಾದೇವ ಭೈರಗೊಂಡ ತಲೆ ಮರೆಸಿಕೊಂಡಿದ್ದ. 25 ದಿನಗಳವರೆಗೂ ಈತನ ಬಂಧನ ಸಾಧ್ಯವಾಗಿರಲಿಲ್ಲ. ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕೃತಗೊಂಡ ಬಳಿಕ, ಭವಿಷ್ಯದಲ್ಲಿ ಕಾನೂನು ತೊಡಕಾಗಬಾರದು ಎಂಬ ಕಾರಣಕ್ಕಾಗಿ ಜುಲೈ 5ರಂದು ತನ್ನ ನಿವಾಸದಲ್ಲೇ ಪೊಲೀಸರಿಂದ ಬಂಧನಕ್ಕೀಡಾದ ಎಂದು ತಿಳಿದು ಬಂದಿದೆ.

ಮಾಸ್ಟರ್‌ ಪ್ಲಾನ್‌..!

ಕುಟುಂಬ ವೈಷಮ್ಯದ ಕಿಚ್ಚು, ಎದುರಾಳಿಗಳ ಭಯ ಮಹಾದೇವ ಭೈರಗೊಂಡನಿಗಿತ್ತು. ಜೀವ ಭಯದಿಂದ ಸದಾ ಖಾಸಗಿ ಸಶಸ್ತ್ರ ಪಡೆಯ ಬೆಂಗಾವಲು ತಂಡದ ನೆರಳಿನಲ್ಲೇ ರಕ್ಷಣೆ ಪಡೆದಿದ್ದ. ಕನಿಷ್ಠ 10 ಮಂದಿ ಬಂದೂಕುಧಾರಿಗಳು ದಿನದ 24 ತಾಸು ಭದ್ರತೆ ನೀಡುತ್ತಿದ್ದರು. ಇಂತಹ ಪರಿಸ್ಥಿತಿಯಲ್ಲಿ ಬದುಕುತ್ತಿದ್ದ ಮಹಾದೇವ, ಗೊತ್ತಿಲ್ಲದ ಸ್ಥಳದಲ್ಲಿ ತಲೆಮರೆಸಿಕೊಳ್ಳುವುದು ಕಷ್ಟವಾಗಿತ್ತು. ಪೊಲೀಸರು, ಸಿಐಡಿ ಬಲೆಗೆ ಬೀಳದಂತೆ ತಾವೇ ಮಾಸ್ಟರ್‌ ಪ್ಲಾನ್‌ ರೂಪಿಸಿಕೊಂಡಿದ್ದಾಗಿ ಭೈರಗೊಂಡನ ಆಪ್ತ ವಲಯದ ಮೂಲಗಳು ತಿಳಿಸಿವೆ.

‘ಪ್ರಕರಣ ಗಂಭೀರ ಸ್ವರೂಪ ಪಡೆಯುತ್ತಿದ್ದಂತೆಯೇ ಭೈರಗೊಂಡ ಕಣ್ಮರೆಯಾದ. ನಿಷ್ಠರಿಗೆ ತನ್ನ ಮೊಬೈಲ್‌ ಕೊಟ್ಟು ಹೈದರಾಬಾದ್‌, ಮಹಾರಾಷ್ಟ್ರದ ವಿವಿಧ ಸ್ಥಳಗಳಿಗೆ ಕಳುಹಿಸಿಕೊಟ್ಟಿದ್ದ ಭೈರಗೊಂಡ, ಒಂದೊಂದು ದಿನ ನಿಗದಿತ ಸ್ಥಳಗಳಿಗೆ ತೆರಳಿ ಕೆಲ ಹೊತ್ತು ಮೊಬೈಲ್‌ ಸ್ವಿಚ್  ಆನ್‌ ಮಾಡಿ, ನಂತರ ಆಫ್‌ ಮಾಡಿಬಿಡುತ್ತಿದ್ದ.  ಫೋನ್‌ ಟ್ಯಾಪ್‌ ಮಾಡಿದ್ದ ಅಧಿಕಾರಿಗಳಿಗೆ ಆಯಾ ಊರಿನ ಟವರ್‌ ಲೊಕೇಷನ್‌ ಪತ್ತೆಯಾಗುತ್ತಿತ್ತು. ಇದನ್ನು ಅನುಸರಿಸಿ ಸಿಐಡಿ ಪೊಲೀಸರು ಆತನನ್ನು ಬಂಧಿಸಲು ಹೈದರಾಬಾದ್‌, ಮಹಾರಾಷ್ಟ್ರದ ವಿವಿಧೆಡೆ ತಂಡಗಳನ್ನು ಕಳುಹಿಸಿದ್ದರು’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ನಾಪತ್ತೆಯಾಗಿದ್ದ ಅಷ್ಟೂ ದಿನ, ಭೈರಗೊಂಡ ಭೀಮಾ ತೀರದ ಹೊಳೆ ದಂಡೆಯ ಗ್ರಾಮಗಳಲ್ಲೇ ವಾಸ್ತವ್ಯ ಹೂಡಿದ್ದ. ಬಹುತೇಕ ದಿನ ಕೆರೂರು, ಉಮರಾಣಿಯ ತನ್ನ ನಿವಾಸದಲ್ಲೇ ಅಡಗಿಕೊಂಡಿದ್ದಾಗಿ ಅವರು ಹೇಳಿದರು. ಪೊಲೀಸರ ದಾಳಿ ಸೂಚನೆ ಸಿಕ್ಕಾಗ ತನ್ನ ಪ್ರಾಬಲ್ಯವಿರುವ ಟಾಕಳಿ, ತದ್ದೇವಾಡಿ ಗ್ರಾಮಗಳ ಸಂಬಂಧಿಕರ ಅಡವಿ ವಸತಿಯಲ್ಲಿ ತಂಗಿ, ನಿತ್ಯದ ವಿದ್ಯಮಾನ ತಿಳಿಯುತ್ತಿದ್ದುದಾಗಿ ಹಾಗೂ ಪತ್ರಿಕೆಗಳನ್ನು ತಪ್ಪದೇ ಓದುತ್ತಿದ್ದುದಾಗಿ ಅವರು ವಿವರಿಸಿದರು.

ವಿಚಾರಣೆ ತೀವ್ರ

ಅನಾರೋಗ್ಯಕ್ಕೀಡಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಮಹಾದೇವ ಭೈರಗೊಂಡನನ್ನು ಸಿಐಡಿ ಪೊಲೀಸರು ಭಾನುವಾರ ಮತ್ತೆ ವಿಚಾರಣೆಗೆ ಒಳಪಡಿಸಿದ್ದಾರೆ. ಕೆರೂರು, ಕೊಲೆಯಾದ ಸ್ಥಳ ಸೇರಿದಂತೆ ಇತರೆಡೆ ಕರೆದೊಯ್ದ ಅಧಿಕಾರಿಗಳು ಹಲ ಆಯಾಮದಲ್ಲಿ ತನಿಖೆ ನಡೆಸಿದ್ದಾರೆ ಎನ್ನಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !