ಅಂಗಡಿ ತೆರೆದವರಿಗೊಂದು ಗುಲಾಬಿ.! ‘ಭಾರತ್ ಬಂದ್‌'ಗೆ ಬಿಜೆಪಿ ಮಂಡಲದಿಂದ ತಿರುಮಂತ್ರ

7

ಅಂಗಡಿ ತೆರೆದವರಿಗೊಂದು ಗುಲಾಬಿ.! ‘ಭಾರತ್ ಬಂದ್‌'ಗೆ ಬಿಜೆಪಿ ಮಂಡಲದಿಂದ ತಿರುಮಂತ್ರ

Published:
Updated:

ವಿಜಯಪುರ: ದಿನದಿಂದ ದಿನಕ್ಕೆ ಇಂಧನ ಧಾರಣೆ ಗಗನಮುಖಿಯಾಗುತ್ತಿರುವುದರ ವಿರುದ್ಧ ಕಾಂಗ್ರೆಸ್‌ ನೇತೃತ್ವದಲ್ಲಿ ದೇಶಾದ್ಯಂತ ಎಲ್ಲ ವಿರೋಧ ಪಕ್ಷಗಳು ಒಗ್ಗೂಡಿ ‘ಭಾರತ್‌ ಬಂದ್‌’ ಆಚರಣೆಗೆ ಸೋಮವಾರ (ಸೆ 10) ಕರೆ ನೀಡಿವೆ.

ಇದಕ್ಕೆ ಪ್ರತ್ಯುತ್ತರವಾಗಿ ರಾಜ್ಯ ಬಿಜೆಪಿ ಭಾನುವಾರವೇ ‘ಭಾರತ್‌ ಬಂದ್‌ ರಾಜಕಾರಣ ಅಸಮರ್ಥನೀಯ, ಇಲ್ಲಿದೆ ವಾಸ್ತವ ಸಂಗತಿ’ ಎಂಬ ನಾಲ್ಕು ಪುಟಗಳ ಪತ್ರವನ್ನು ಬಿಡುಗಡೆ ಮಾಡಿದೆ.

ವಿಜಯಪುರ ನಗರ ಬಿಜೆಪಿ ಮಂಡಲ ಬಂದ್‌ ವಿರುದ್ಧ ತನ್ನದೇ ವಿಶೇಷ ಅಭಿಯಾನ ರೂಪಿಸಿದೆ. ಮಂಡಲ ಘಟಕದ ಅಧ್ಯಕ್ಷ ಶಿವರುದ್ರ ಬಾಗಲಕೋಟ ಇದಕ್ಕಾಗಿಯೇ ವಿಶಿಷ್ಟ ಸಿದ್ಧತೆ ನಡೆಸಿದ್ದಾರೆ ಎಂಬುದು ತಿಳಿದು ಬಂದಿದೆ.

‘ವಿರೋಧ ಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಕರೆ ನೀಡಿರುವ ಭಾರತ್‌ ಬಂದ್‌ಗೆ ಸೋಮವಾರ ಸ್ಪಂದಿಸದೆ, ನಗರದ ಪ್ರಮುಖ ಬಜಾರ್‌ಗಳಲ್ಲಿ ದಿನವಿಡಿ ತಮ್ಮ ವಹಿವಾಟನ್ನು ಎಂದಿನಂತೆ ನಡೆಸುವ ವ್ಯಾಪಾರಿಗಳನ್ನು ಖುದ್ದು ಭೇಟಿಯಾಗಿ; ನರೇಂದ್ರ ಮೋದಿ, ಬಿಜೆಪಿ ಬೆಂಬಲಿಸಿದ್ದಕ್ಕೆ ನಿಮಗೊಂದು ಸಲಾಂ. ನಿಮ್ಮ ಅಭಿಮಾನಕ್ಕೆ ನಮ್ಮ ಪ್ರೀತಿಯ ಕಾಣಿಕೆಯಿದು... ಎಂದು ಗುಲಾಬಿ ಹೂವನ್ನು ನೀಡುವ ಯೋಜನೆ ರೂಪಿಸಿಕೊಳ್ಳಲಾಗಿದೆ’ ಎನ್ನಲಾಗಿದೆ.

‘ಈ ಅಭಿಯಾನಕ್ಕಾಗಿಯೇ 1000 ಗುಲಾಬಿ ಹೂವುಗಳನ್ನು ತರಿಸಲಾಗಿದೆ. ಕಾಂಗ್ರೆಸ್ಸಿಗರು, ವಿವಿಧ ಸಂಘಟನೆಗಳು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನಾ ಮೆರವಣಿಗೆ ನಡೆಸಿ, ಬಂದ್‌ ಆಚರಿಸಿದ ಬಳಿಕ, ನಗರದ ಪ್ರಮುಖ ಬಜಾರ್‌ಗಳಲ್ಲಿ ಅಂಗಡಿ ತೆರೆದು ವಹಿವಾಟು ನಡೆಸುವವರನ್ನೆಲ್ಲಾ ಭೇಟಿಯಾಗಿ ಗುಲಾಬಿ ನೀಡುವ ಅಭಿಯಾನವನ್ನು ವ್ಯವಸ್ಥಿತವಾಗಿ ರೂಪಿಸಲಾಗಿದೆ’ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

‘2016ರ ನವೆಂಬರ್‌ನಲ್ಲಿ ಭಾರಿ ಮುಖಬೆಲೆಯ ₹ 500, ₹ 1000 ಮೌಲ್ಯದ ನೋಟುಗಳನ್ನು ರದ್ದುಗೊಳಿಸಿದ ಬಳಿಕ ಕೇಂದ್ರ ಸರ್ಕಾರ, ಮೋದಿ ವಿರುದ್ಧ ಇದೇ ರೀತಿ ಭಾರತ್‌ ಬಂದ್‌ಗೆ ವಿರೋಧ ಪಕ್ಷಗಳು ಕರೆ ನೀಡಿದ್ದವು.

ಆ ಸಂದರ್ಭ ಸಹ ಬಹುತೇಕ ಅಂಗಡಿಗಳು ಎಂದಿನಂತೆ ವಹಿವಾಟು ನಡೆಸಿದ್ದವು. ಆಗಲೂ ವಿಜಯಪುರ ಬಿಜೆಪಿ ನಗರ ಮಂಡಲದಿಂದ ಗುಲಾಬಿ ಕೊಟ್ಟು, ಬಂದ್‌ ಬೆಂಬಲಿಸದಿದ್ದಕ್ಕೆ ಧನ್ಯವಾದ ಅರ್ಪಿಸಿದ್ದೆವು. ಈ ಬಾರಿಯೂ ಮಾರುಕಟ್ಟೆಯಲ್ಲಿ ಒಂದು ಸುತ್ತು ಹಾಕಿದ್ದೇವೆ. ಬಹುತೇಕರು ಬಂದ್‌ ಬೆಂಬಲಿಸಲ್ಲ ಎಂದು ಹೇಳಿದ್ದಾರೆ. ಸೋಮವಾರ ವಹಿವಾಟು ನಡೆಸುವವರಿಗೆ ಗುಲಾಬಿ ಕೊಟ್ಟು ಅಭಿನಂದಿಸಲಿದ್ದೇವೆ’ ಎಂದು ನಗರ ಮಂಡಲದ ಅಧ್ಯಕ್ಷ ಶಿವರುದ್ರ ಬಾಗಲಕೋಟ ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 1

  Frustrated
 • 1

  Angry

Comments:

0 comments

Write the first review for this !