ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ನೂ ಆರಂಭಗೊಳ್ಳದ ಆಲಮಟ್ಟಿಯ ಕ್ಲೋಸರ್‌ ಕಾಮಗಾರಿ

Last Updated 18 ಜೂನ್ 2019, 19:30 IST
ಅಕ್ಷರ ಗಾತ್ರ

ಆಲಮಟ್ಟಿ: ಕೃಷ್ಣಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ವಿವಿಧ ಕಾಲುವೆಗಳಿಗೆ ನೀರು ಹರಿಸುವುದನ್ನು ಸ್ಥಗಿತಗೊಳಿಸಿ, ಏಳು ತಿಂಗಳು ಕಳೆದರೂ, ಕಾಲುವೆಗಳ ದುರಸ್ತಿಯ ಕ್ಲೋಸರ್ ಕಾಮಗಾರಿಗೆ ಇನ್ನೂ ಟೆಂಡರ್ ಪ್ರಕ್ರಿಯೆ ಆರಂಭಗೊಂಡಿಲ್ಲ.

‘ಬಹುತೇಕಒಂದೆರಡು ದಿನಗಳಲ್ಲಿ, ಟೆಂಡರ್ ಪ್ರಕ್ರಿಯೆ ಆರಂಭಗೊಂಡು ಜುಲೈ 31ಕ್ಕೆ ಕಾಮಗಾರಿ ಪೂರ್ಣಗೊಳ್ಳುವ ಹಾಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಕೆಬಿಜೆಎನ್‌ಎಲ್‌ ಅಧಿಕಾರಿಗಳು ಹೇಳುತ್ತಿದ್ದರೂ, ‘ದೊರೆಯುವ ಅಲ್ಪಾವಧಿಯಲ್ಲಿ ಗುಣಮಟ್ಟದ ಕಾಮಗಾರಿ ನಡೆಯುವುದು ಹೇಗೆ’ ಎಂದು ಬಹುತೇಕ ರೈತರು ಸಂಶಯ ವ್ಯಕ್ತಪಡಿಸುತ್ತಿದ್ದಾರೆ.

ಪ್ರತಿ ವರ್ಷ ಬೇಸಿಗೆಯಲ್ಲಿಯೇ ಕ್ಲೋಸರ್ ಕಾಮಗಾರಿ ನಡೆದು, ಜುಲೈ ಎರಡನೇ ಇಲ್ಲವೇ ಮೂರನೇ ವಾರ ಕಾಲುವೆಗೆ ನೀರು ಹರಿಯಲು ಆರಂಭಗೊಳ್ಳುತ್ತಿತ್ತು. 2018ರ ಜುಲೈ 16ರಿಂದಲೇ ಕಾಲುವೆಗೆ ನೀರು ಹರಿಸಲಾಗಿತ್ತು. ಈಬಾರಿ ಲೋಕಸಭಾ ಚುನಾವಣೆ ನೀತಿ ಸಂಹಿತೆ ಹಿನ್ನಲೆಯಲ್ಲಿ ಟೆಂಡರ್ ಪ್ರಕ್ರಿಯೆ ವಿಳಂಬವಾಗಿದೆ. ಹೀಗಾಗಿ ಈಗ ಕಾಮಗಾರಿ ಆರಂಭಗೊಂಡು, ಅದು ಪೂರ್ಣಗೊಂಡ ನಂತರ ನೀರು ಬಿಡುವ ಪ್ರಕ್ರಿಯೆ ಆರಂಭಿಸಬೇಕಿರುವುದರಿಂದ ಆಗಸ್ಟ್‌ವರೆಗೆ ಮುಂದೆ ಹೋಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಒಡೆದ ಕಾಲುವೆಗಳ ದುರಸ್ತಿ, ಮುಳ್ಳು ಕಂಟಿಗಳ ಕಟಾವು, ಹೂಳು ತೆಗೆಯುವುದು ಸೇರಿ ನಾನಾ ವಿಶೇಷ ಕಾಮಗಾರಿಗಳನ್ನು ಕ್ಲೋಸರ್ ಟೆಂಡರ್‌ ಅಡಿ ಕರೆಯಲಾಗುತ್ತದೆ. ಸದ್ಯ ಮಳೆಗಾಲ ಆರಂಭಗೊಂಡಿದೆ. ಇದರಿಂದ ಕಾಮಗಾರಿ ನಿಗದಿತ ಸಮಯದಲ್ಲಿ ಪೂರ್ಣಗೊಳ್ಳುವುದು ಅನುಮಾನ. ಪ್ರತಿ ವರ್ಷವೂ ಕೆಲವೇ ಕೆಲವು ಗುತ್ತಿಗೆದಾರರು ಹತ್ತಾರು ಕಾಮಗಾರಿಗಳನ್ನು (ಪ್ರತಿ ಕಾಮಗಾರಿ ₹4 ಲಕ್ಷ ದಿಂದ ₹6 ಲಕ್ಷ) ಗುತ್ತಿಗೆ ಪಡೆದು ಅದನ್ನು ಸಮರ್ಪಕವಾಗಿ ನಿರ್ವಹಿಸದೇ ಹೋದ ಹಲವಾರು ಘಟನೆಗಳು ನಡೆದಿವೆ.

‘ಕಾಲುವೆಗೆ ನೀರು ಹರಿಯಲು ಆರಂಭಗೊಂಡರೆ ಕಾಮಗಾರಿ ಪೂರ್ಣಗೊಂಡಂತೆ. ಒಂದೆಡೆ ಕಾಲುವೆಗೆ ನೀರು ಹರಿಯುವ ಒತ್ತಡ, ಇನ್ನೊಂದೆಡೆ ಹೇಗಾದರೂ ಮಾಡಿ ನೀರು ಬಂದರೆ ಸಾಕು ಎನ್ನುವ ರೈತರು, ಮತ್ತೊಂದೆಡೆ ಇದೇ ಸಿಕ್ಕ ಅವಕಾಶ ಎಂದು ಹೇಗಾದರೂ ಕಾಮಗಾರಿ ನಿರ್ವಹಿಸಿ ಬಿಲ್‌ ಪಡೆಯಬೇಕು ಎನ್ನುವ ಗುತ್ತಿಗೆದಾರರ ಹಂಬಲ, ಒಟ್ಟಾರೆ ಗುತ್ತಿಗೆದಾರರಿಗೆ ಕ್ಲೋಸರ್ ಕಾಮಗಾರಿ ಎಂಬುದು ಚಿನ್ನದ ಮೊಟ್ಟೆ ಇಡುವ ಕೋಳಿ ಇದ್ದ ಹಾಗೆ. 15 ದಿನದಲ್ಲಿ ಕೆಲಸ ನಿರ್ವಹಿಸಿ ಹಣ ಪಡೆಯುವುದು’ ಎಂಬ ಆರೋಪ ಕೇಳಿ ಬರುತ್ತಿವೆ.

₹16 ಕೋಟಿ ಕೆಲಸ: ‘ಆಲಮಟ್ಟಿ ಅಣೆಕಟ್ಟು ವಲಯದಲ್ಲಿ ಒಟ್ಟಾರೆ ₹16.40 ಕೋಟಿ ವೆಚ್ಚದ ವಿವಿಧ ಕ್ಲೋಸರ್ ಕಾಮಗಾರಿಗೆ ಜೂನ್ 18ರಂದು ಇ–ಟೆಂಡರ್ ಕರೆಯಲಾಗಿದೆ. ಅಲ್ಪಾವಧಿ ಟೆಂಡರ್ ಆಗಿದ್ದು, ಅರ್ಜಿ ಹಾಕಲು ಜೂನ್ 27 ಕೊನೆಯ ದಿನ. 29ರಂದು ಟೆಂಡರ್ ತೆರೆದು, ಜುಲೈ 3ಕ್ಕೆ ಕಾಮಗಾರಿ ಆರಂಭದ ಆದೇಶ ನೀಡಲಾಗುವುದು. ಅವರಿಗೆ ಜುಲೈ 30ರ ವರೆಗೆ ಕಾಮಗಾರಿ ಪೂರ್ಣಗೊಳಿಸಲು ಅವಧಿ ನೀಡಲಾಗಿದೆ. ಗುಣಮಟ್ಟದ ತ್ವರಿತ ಕಾಮಗಾರಿ ಕೈಗೊಳ್ಳುವ ನಿಟ್ಟಿನಲ್ಲಿ ಒಬ್ಬ ಗುತ್ತಿಗೆದಾರನಿಗೆ ಒಂದು ವಿಭಾಗದಲ್ಲಿ ಕೇವಲ ಎರಡೇ ಕಾಮಗಾರಿ ಕೈಗೊಳ್ಳಲು ಷರತ್ತು ವಿಧಿಸಲಾಗಿದೆ. ಗುಣಮಟ್ಟದಿಂದ ಕ್ಲೋಸರ್ ಕಾಮಗಾರಿ ಪೂರ್ಣಗೊಳ್ಳಲು ಎಲ್ಲ ರೀತಿಯ ತಪಾಸಣೆ ನಡೆಸಲಾಗುವುದು’ ಎಂದು ಅಣೆಕಟ್ಟು ವಲಯದ ಮುಖ್ಯ ಎಂಜಿನಿಯರ್ ಆರ್.ಪಿ. ಕುಲಕರ್ಣಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT