ಸೋಮವಾರ, ಆಗಸ್ಟ್ 26, 2019
22 °C
30 ಜನರಿಗೆ ಉದ್ಯೋಗ; ಎಲ್ಲರ ಕುಟುಂಬಗಳಲ್ಲೂ ನೆಮ್ಮದಿ

ಬದುಕಿಗೆ ಆಸರೆಯಾದ ಹಗ್ಗ ತಯಾರಿಕೆ

Published:
Updated:
Prajavani

ಚಡಚಣ: ಯಂತ್ರಗಳ ಯುಗದಲ್ಲೂ ಕೈಚಾಲಿತ ರಾಟೆಯಿಂದ ಹಗ್ಗ ತಯಾರಿಸಿ, ಮಾರಾಟ ಮಾಡಿ ಬದುಕು ಕಟ್ಟಿಕೊಂಡ ಸುಮಾರು 30 ಜನ ಕಾರ್ಮಿಕರು ಯಶಸ್ವಿ ಉದ್ಯಮಿಗಳಾಗಿ ಹೊರ ಹೊಮ್ಮಿದ್ದಾರೆ.

ಪಟ್ಟಣದ ಹೃದಯ ಭಾಗದಲ್ಲಿ ಹಗ್ಗ ತಯಾರಿಕಾ ಘಟಕಗಳನ್ನು ಸ್ಥಾಪಿಸಿಕೊಂಡು ಜೀವನ ಸಾಗಿಸುತ್ತಿರುವ ನಾಲ್ಕು ಕುಟುಂಬಗಳ ಸುಮಾರು 30ಕ್ಕೂ ಹೆಚ್ಚು ಜನರ ಬದುಕಿನ ಆಸರೆಯಾಗಿರುವ ಹಗ್ಗ ತಯಾರಿಕೆ ಬಾಳಿಗೆ ಸಿಹಿ ನೀಡುತ್ತಿದೆ.

ಮಕ್ಕಳು, ಮಹಿಳೆಯರೂ ಎನ್ನದೇ ಮನೆ ಮಂದಿಯೆಲ್ಲ ತಮಗೆ ಬಿಡುವು ಇರುವ ಸಮಯದಲ್ಲಿ ರಾಟೆಯ ಮುಂದೆ ನಿಂತು ಹಗ್ಗ ತಯಾರಿಕೆಯಲ್ಲಿ ತೊಡಗಿಕೊಳ್ಳುತ್ತಾರೆ. ತೀರ ಕಡಿಮೆ ವೆಚ್ಚದಲ್ಲಿ ಘಟಕಗಳನ್ನು ಸ್ಥಾಪಿಸಿಕೊಂಡಿರುವ ಈ ಕುಟುಂಬದ ಸದಸ್ಯರು ತಮಗೆ ಬೇಕಾದ ಕಚ್ಚಾ ಪದಾರ್ಥ ಹಾಗೂ ಅಲಂಕಾರಿಕವಸ್ತುಗಳನ್ನು ನೆರೆಯ ಮಹಾರಾಷ್ಟ್ರದ ಇಚಲಕರಂಜಿಯಿಂದ ತರುತ್ತಾರೆ.

ಉತ್ತಮವಾದ ಹಗ್ಗ, ಜಾನುವಾರುಗಳಿಗೆ ಬೇಕಾಗುವ ಕಣ್ಣಿ, ಸೋಲ, ಮೊಗಡಾ, ಮೂಗುದಾರ, ಗೆಜ್ಜೆ ಪಟ್ಟಾ ಸೇರಿದಂತೆ ವಿವಿಧ ಬಗೆಯ ಹಗ್ಗಗಳನ್ನು ತಯಾರಿಸುತ್ತಾರೆ. ಇವುಗಳನ್ನೆಲ್ಲ ಮನೆಯ ಸದಸ್ಯರು ಚಡಚಣ ಪಟ್ಟಣವೂ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಜರುಗುವ ಸಂತೆಗಳಲ್ಲಿ ಮಾರಾಟ ಮಾಡಿ, ಹೆಚ್ಚಿನ ಆದಾಯ ಪಡೆಯುತ್ತಾರೆ.

ಈ ಕುರಿತು ಮಾಹಿತಿ ನೀಡಿದ ಹಗ್ಗ ತಯಾರಿಕೆ ಉದ್ಯಮಿ ಮೋಹನ ದೇವಕುಳೆ, ‘ಉದ್ಯಮದಲ್ಲಿ ಸಾಕಷ್ಟು ಲಾಭವಿದೆ. ಆದರೆ, ಪ್ಲಾಸ್ಟಿಕ್‌ನಿಂದ ತಯಾರಾಗುವ ಹಗ್ಗಗಳಿಗೆ ಪೈಪೋಟಿ ಒಡ್ಡುವಂತಹ ವಸ್ತಗಳನ್ನು ತಯಾರಿಸುವುದು ಇಂದಿನ ದಿನಗಳಲ್ಲಿ ಸವಾಲಾಗಿ ಪರಿಣಮಿಸಿದೆ. ಆದಾಗ್ಯೂ ಈ ಕಸುಬಿನಲ್ಲಿ ತೊಡಗಿಸಿಕೊಂಡಿರುವ ಪ್ರತಿಯೊಬ್ಬರಿಗೂ ನಿತ್ಯ ₹400ಕ್ಕಿಂತ ಹೆಚ್ಚು ಸಂಬಳ ದೊರೆಯುತ್ತದೆ. ಮನೆ ಮಂದಿಯೆಲ್ಲ ಈ ಕಸುಬಿನಿಂದ ನೆಮ್ಮದಿಯಾಗಿ ಬಾಳುತ್ತಿದ್ದೇವೆ’ ಎಂದು ಹೇಳುತ್ತಾರೆ.

‘ಸರ್ಕಾರ ಈ ಉದ್ಯಮಕ್ಕೆ ಸಹಾಯಧನ ಕಲ್ಪಿಸಿಕೊಟ್ಟರೆ ಆಧುನಿಕ ಯಂತ್ರೋಪಕರಣಗಳನ್ನು ಅಳವಡಿಸಿಕೊಂಡು ಉದ್ಯಮವನ್ನು ವಿಸ್ತರಿಸಬಹುದು. ಅಲ್ಲದೆ, ಸಂಘವನ್ನು ಸ್ಥಾಪಿಸಿಕೊಂಡು ಅದರ ಮೂಲಮ ಮಾರಾಟ ಮಾಡಬಹುದಾಗಿದೆ. ಸರ್ಕಾರ ಈ ಬಗ್ಗೆ ಗಮನಹರಿಸಬೇಕು. ಆರ್ಥಿಕ ಸಹಾಯಧನ ನೀಡಬೇಕು’ ಎಂದು ರಮೇಶ ದೇವಕುಳೆ ಮನವಿ ಮಾಡುತ್ತಾರೆ.

Post Comments (+)